ADVERTISEMENT

'ರಾಧೆ ಶ್ಯಾಮ್' ಚಿತ್ರಕಥೆಯ ನಿರೂಪಕರಾದ್ರು ಬಿಗ್ ಬಿ ಅಮಿತಾಭ್ ಬಚ್ಚನ್

ಪಿಟಿಐ
Published 22 ಫೆಬ್ರುವರಿ 2022, 12:34 IST
Last Updated 22 ಫೆಬ್ರುವರಿ 2022, 12:34 IST
   

ಮುಂಬೈ: ಟಾಲಿವುಡ್‌ನ ಡಾರ್ಲಿಂಗ್‌ ಖ್ಯಾತಿಯ ’ಬಾಹುಬಲಿ’ ಪ್ರಭಾಸ್‌ ನಟನೆಯ ’ರಾಧೆ ಶ್ಯಾಮ್’ ಚಿತ್ರದ ಹಿಂದಿ ಅವತರಣಿಕೆಗೆ ಬಿಗ್ ಬಿ ಅಮಿತಾಭ್ ಬಚ್ಚನ್ ಅವರು ಚಿತ್ರಕಥೆಯ ನಿರೂಪಕರಾಗಿದ್ದಾರೆ. ರಾಧೆ ಮತ್ತು ಶ್ಯಾಮ್ ಕಥೆಯನ್ನು ಅಮಿತಾಭ್ ಬಚ್ಚನ್ ಅವರೇ ವಿವರಿಸಲಿದ್ದು, ಈ ಬಗ್ಗೆ ಚಿತ್ರತಂಡ ಅಧಿಕೃತವಾಗಿ ಘೋಷಿಸಿದೆ.

ಚಿತ್ರಕ್ಕೆ ರಾಧಾ ಕೃಷ್ಣ ಕುಮಾರ್ ಆಕ್ಷ್ಯನ್ ಕಟ್ ಹೇಳಿದ್ದು, ಈ ಚಿತ್ರವನ್ನು ಗೋಪಿ ಕೃಷ್ಣ ಮೂವೀಸ್, ಯುವಿ ಕ್ರಿಯೇಷನ್ಸ್ ಮತ್ತು ಟಿ ಸಿರೀಸ್ ನಿರ್ಮಿಸುತ್ತಿದೆ. ವಿಕ್ರಮಾದಿತ್ಯನಾಗಿ ಪ್ರಭಾಸ್, ಪ್ರೇರಣ ಪಾತ್ರದಲ್ಲಿ ಪೂಜಾ ಹೆಗ್ಡೆ ಕಾಣಿಸಿಕೊಂಡಿದ್ದಾರೆ. ಉಳಿದಂತೆ ಸಚಿನ್ ಖೇಡೇಕರ್, ಪ್ರಿಯದರ್ಶಿ ಪುಲಿಕೊಂಡ, ಭಾಗ್ಯಶ್ರೀ, ಮುರ್ಲಿ ಶರ್ಮಾ, ಕುನಾಲ್ ರಾಯ್ ಕಪೂರ್, ರಿದ್ದಿ ಕುಮಾರ್, ಸಶಾ ಛೆಟ್ರಿ, ಸತ್ಯನ್ ಮುಂತಾದವರು ಪ್ರಮುಖ ಪಾತ್ರದಲ್ಲಿ ಕಾಣಿಸಿಕೊಳ್ಳಲಿದ್ದಾರೆ.

'ಯೂರೋಪ್‌ನಲ್ಲಿ ನಡೆಯುವ 1970ರ ದಶಕದ ರೊಮ್ಯಾಂಟಿಕ್ ಕಥೆ ಇದಾಗಿದ್ದು, ಚಿತ್ರವನ್ನು ದೊಡ್ಡಮಟ್ಟದಲ್ಲಿಯೇ ನಿರ್ಮಿಸಲಾಗಿದೆ. ನಮಗೆ ರಾಷ್ಟ್ರವನ್ನು ಕಮಾಂಡ್ ಮಾಡುವ ಉತ್ತಮವಾದ ಧ್ವನಿ ಅಗತ್ಯವಿತ್ತು. ಆದರೆ, ಅಮಿತಾಭ್ ಬಚ್ಚನ್‌ಗಿಂತ ಉತ್ತಮವಾದ ಧ್ವನಿ ಇನ್ನೆಲ್ಲಿದೆ. ಪ್ರತಿಯೊಬ್ಬರೂ ಗುರುತಿಸುವ, ಗೌರವಿಸುವ ಮತ್ತು ಮುಖ್ಯವಾಗಿ ಹೆಚ್ಚು ಪ್ರೀತಿಸುವ ಧ್ವನಿ ಅವರದ್ದು. ನಾವು ಅವರ ಧ್ವನಿಯನ್ನು ಬಳಸಿಕೊಂಡಿರುವುದಕ್ಕೆ ತುಂಬಾ ಸಂತೋಷವಾಗಿದೆ. ಅವರು ರಾಧೆ ಶ್ಯಾಮ್ ಚಿತ್ರಕಥೆಯ ನಿರೂಪಕರಾಗಿದ್ದಾರೆ' ಎಂದು ನಿರ್ದೇಶಕ ರಾಧಾ ಕೃಷ್ಣ ಕುಮಾರ್ ಹೇಳಿಕೆಯಲ್ಲಿ ತಿಳಿಸಿದ್ದಾರೆ.

ADVERTISEMENT

ಸದ್ಯ ಪ್ರೊಡಕ್ಷನ್ ಹಂತದಲ್ಲಿರುವ Project K ಸಿನಿಮಾದ ಬಳಿಕ ಪ್ರಭಾಸ್ ಮತ್ತು ಬಚ್ಚನ್ ಅವರ ಎರಡನೇ ಕಾಂಬಿನೇಷನ್ ಇದಾಗಿದ್ದು, ಪ್ರಭಾಸ್ ಅಭಿಮಾನಿಗಳು ಈಗಾಗಲೇ ಮೆಚ್ಚುಗೆ ವ್ಯಕ್ತಪಡಿಸಿದ್ದಾರೆ.

ಮಾರ್ಚ್ 11 ರಂದು ತೆಲುಗು, ಹಿಂದಿ, ತಮಿಳು, ಕನ್ನಡ ಮತ್ತು ಮಲಯಾಳಂ ಭಾಷೆಗಳಲ್ಲಿ ರಾಧೆ ಶ್ಯಾಮ್ ಚಿತ್ರ ತೆರೆಕಾಣಲಿದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.