ಮುಂಬೈ: ‘ನನ್ನ ಎರಡನೇ ಕಣ್ಣಿನ ಶಸ್ತ್ರಚಿಕಿತ್ಸೆ ಯಶಸ್ವಿಯಾಗಿದ್ದು, ಆರೋಗ್ಯದಲ್ಲೂ ಚೇತರಿಕೆ ಕಾಣುತ್ತಿದೆʼಎಂದು ಬಾಲಿವುಡ್ ಮೆಗಾಸ್ಟಾರ್ ಅಮಿತಾಭ್ ಬಚ್ಚನ್ ಟ್ವೀಟ್ ಮೂಲಕ ತಿಳಿಸಿದ್ದಾರೆ.
78ರ ಹರೆಯದ ಬಿಗ್ ‘ಬಿʼಬಚ್ಚನ್ ಅವರು, ಕೆಲ ದಿನಗಳ ಹಿಂದೆ ತಮ್ಮ ಮೊದಲ ಕಣ್ಣಿನ ಶಸ್ತ್ರಚಿಕಿತ್ಸೆ ಕುರಿತು ಬ್ಲಾಗ್ ಮೂಲಕ ಅಭಿಮಾನಿಗಳಿಗೆ ತಿಳಿಸಿದ್ದರು. ಶಸ್ತ್ರಚಿಕಿತ್ಸೆ ನಂತರವೂ ‘ನಿಧಾನವಾಗಿ ಚೇತರಿಸಿ ಕೊಳ್ಳುತ್ತಿದ್ದೇನೆʼಎಂದು ತಿಳಿಸಿದ್ದರು. ಅದೇ ಸಂದರ್ಭದಲ್ಲಿ ಮತ್ತೊಂದು ಕಣ್ಣಿನ ಶಸ್ತ್ರಚಿಕಿತ್ಸೆ ಮಾಡಿಸುವ ಬಗ್ಗೆಯೂ ಸುಳಿವು ನೀಡಿದ್ದರು.
ಭಾನುವಾರ ತಡರಾತ್ರಿ ಟ್ವೀಟ್ ಮಾಡಿರುವ ಅಮಿತಾಭ್ ಅವರು, ಎರಡನೇ ಕಣ್ಣಿನ ಶಸ್ತ್ರಚಿಕಿತ್ಸೆ ಯಶಸ್ವಿಯಾಗಿರುವ ಜತೆಗೆ, ಈ ಚಿಕಿತ್ಸೆ ನೀಡಿದ ವೈದ್ಯ ಡಾ. ಹಿಮಾಂಶು ಮೆಹ್ತಾ ಅವರಿಗೆ ಅಭಿನಂದನೆ ಸಲ್ಲಿಸಿದ್ದಾರೆ. ‘ಶಸ್ತ್ರಚಿಕಿತ್ಸೆಗಳ ನಂತರ ಜೀವನವೇ ಬದಲಾಗಿರುವಂತಹ ಅನುಭವವಾಗಿದೆ‘ ಎಂದು ಟ್ವಿಟರ್‌ನಲ್ಲಿ ಉಲ್ಲೇಖಿಸಿದ್ದಾರೆ.
‘ಆಧುನಿಕ ವೈದ್ಯಕೀಯ ತಂತ್ರಜ್ಞಾನದ ಅನುಭವಗಳು, ಡಾ. ಹಿಮಾಂಶು ಅವರಂಥ ದಕ್ಷ ವೈದ್ಯರ ಪ್ರಯತ್ನ, ಎಲ್ಲ ಸೇರಿ ಎರಡನೆಯ ಕಣ್ಣಿನ ಶಸ್ತ್ರಚಿಕಿತ್ಸೆ ಯಶಸ್ವಿಯಾಗಿದೆ. ನಿಧಾನವಾಗಿ ಚೇತರಿಸಿಕೊಳ್ಳುತ್ತಿದ್ದೇನೆʼಎಂದು ಟ್ವೀಟ್ ಮಾಡಿದ್ದಾರೆ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.