ADVERTISEMENT

ಸ್ತ್ರೀ ಸಂವೇದನೆ ಮೀಟುವ ದಿಟ್ಟಹೆಣ್ಣು

ಕೆ.ಎಚ್.ಓಬಳೇಶ್
Published 25 ಅಕ್ಟೋಬರ್ 2018, 19:45 IST
Last Updated 25 ಅಕ್ಟೋಬರ್ 2018, 19:45 IST
ಚಂಪಾ ಪಿ. ಶೆಟ್ಟಿ
ಚಂಪಾ ಪಿ. ಶೆಟ್ಟಿ   

‘ಎಲ್ಲಿಯವರೆಗೆ ಪುರುಷ ಪ್ರಧಾನ ಸಮಾಜ ಹೆಣ್ಣಿಗೆ ತನ್ನಿಷ್ಟದಂತೆ ಬದುಕಲು ಬಿಡುವುದಿಲ್ಲವೋ ಅಲ್ಲಿಯವರೆಗೂ ಅಮ್ಮಚ್ಚಿ ನೆನಪಾಗುತ್ತಲೇ ಇರುತ್ತಾಳೆ’

–ಅಮ್ಮಚ್ಚಿಯ ಪ್ರಸ್ತುತತೆಯನ್ನು ನಿರ್ದೇಶಕಿ ಚಂಪಾ ಪಿ. ಶೆಟ್ಟಿ ಒಂದೇ ಸಾಲಿನಲ್ಲಿ ಅರ್ಥೈಸಿದ್ದು ಹೀಗೆ. ‘ಅಕ್ಕು, ಅಮ್ಮಚ್ಚಿ, ಪುಟ್ಟಮ್ಮತ್ತೆ ಎಂಬತ್ತರ ದಶಕದಲ್ಲಿಯೇ ಪುರುಷರ ದೌರ್ಜನ್ಯದ ವಿರುದ್ಧ ಸಿಡಿದೆದ್ದವರು. ಅಂದಿನಿಂದ ಇಲ್ಲಿಯವರೆಗೂ ಮಹಿಳೆಯರ ಬಗೆಗಿನ ಸಮಾಜದ ಧೋರಣೆ ಬದಲಾಗಿಲ್ಲ’ ಎಂದು ಅವರು ಮತ್ತಷ್ಟು ವಿಸ್ತರಿಸಿ ಹೇಳಿದರು.

ಚಂಪಾ ಶೆಟ್ಟಿ ಮೂರು ವರ್ಷದ ಹಿಂದೆ ಸಾಹಿತಿ ವೈದೇಹಿ ಅವರು ಬರೆದ ‘ಅಕ್ಕು’, ‘ಅಮ್ಮಚ್ಚಿಯೆಂಬ ನೆನಪು’, ‘ಪುಟ್ಟಮ್ಮತ್ತೆ ಮತ್ತು ಮೊಮ್ಮಗಳು’ ಕಥೆಗಳನ್ನು ಆಧರಿಸಿದ ‘ಅಕ್ಕು’ ನಾಟಕ ನಿರ್ದೇಶಿಸಿದ್ದರು. ಆಗಲೇ ಇದನ್ನು ಸಿನಿಮಾ ಮಾಡಬೇಕೆಂಬ ಆಸೆ ಅವರಲ್ಲಿ ಚಿಗುರಿತು. ಈಗ ‘ಅಮ್ಮಚ್ಚಿಯೆಂಬ ನೆನಪು’ ಸಿನಿಮಾವಾಗಿದ್ದು, ನವೆಂಬರ್‌ ಒಂದರಂದು ತೆರೆಕಾಣುತ್ತಿದೆ.

ADVERTISEMENT

‘ಸೂಕ್ಷ್ಮ ಸಂವೇದನೆಯ ಕಥೆ ಇದು. ರಂಗದ ಮೇಲೆ ಈ ಸೂಕ್ಷ್ಮಗಳನ್ನು ಸೆರೆಹಿಡಿಯುವುದು ಕಷ್ಟಕರ. ನಾಟಕದಲ್ಲಿ ಹಾವಭಾವ, ಧ್ವನಿಯ ಮೂಲಕ ಅಭಿವ್ಯಕ್ತಿ ಸಾಧ್ಯ. ಪ್ರತಿಯೊಂದನ್ನೂ ಕಟ್ಟಿಕೊಡಲು ಸಾಧ್ಯವಿಲ್ಲ. ಹಾಗಾಗಿಯೇ, ನಾಟಕವನ್ನು ಸಿನಿಮಾ ಮಾಡಲು ನಿರ್ಧರಿಸಿದೆ’ ಎಂದು ವಿವರಿಸುತ್ತಾರೆ.

‘ಅಮ್ಮಚ್ಚಿ ತನ್ನದೆ ಆದ ಕನಸುಗಳನ್ನು ಕಟ್ಟಿಕೊಂಡಿರುವ ಹುಡುಗಿ. ಸಮಾಜ ಅವಳ ಯಾವ ಕನಸುಗಳಿಗೂ ಬೆಲೆ ಕೊಡುವುದಿಲ್ಲ. ತಮಗೆ ಹೇಗೆ ಬೇಕೋ ಹಾಗೆ ಬದಲಾಯಿಸಿಕೊಳ್ಳುವ ಧೋರಣೆ ಹೊಂದಿದೆ. ಇಂದಿಗೂ ಮಹಿಳೆಯರ ಮೇಲಿನ ಶೋಷಣೆಗಳು ನಿಂತಿಲ್ಲ. ಆಧುನಿಕ ಸಮಾಜದಲ್ಲಿ ಹೊಸವೇಷ ಧರಿಸಿ ವಿಜೃಂಭಿಸುತ್ತಿವೆ’ ಎಂದು ವಿಷಾದಿಸುತ್ತಾರೆ.

‘ಅಕ್ಕು’ ಕಥೆಯನ್ನು ರಂಗದ ಮೇಲೆ ತರಲು ಚಂಪಾ ಅವರು ಮುಂದಾದಾಗ ವೈದೇಹಿ ತುಂಬಾ ಖುಷಿಪಟ್ಟರಂತೆ. ಆದರೆ, ಎಷ್ಟೇ ಚೆನ್ನಾಗಿ ನಾಟಕ ಮಾಡಿದರೂಕೃತಿಕಾರರು ಒಪ್ಪಿಕೊಳ್ಳುವುದು ಕಷ್ಟ. ಹಾಗಾಗಿ, ನನ್ನನ್ನು ನಾಟಕ ವೀಕ್ಷಿಸಲು ಆಹ್ವಾನಿಸಬೇಡ ಎಂದು ಹೇಳಿದರಂತೆ. ‘ಕೊನೆಗೆ ವೈದೇಹಿ ಅವರೇ ಮುಂಬೈ ಮತ್ತು ಬೆಂಗಳೂರಿನಲ್ಲಿ ನಡೆದ ನಾಟಕ ಪ್ರದರ್ಶನ ವೀಕ್ಷಿಸಿದರು. ಏಳು ಪ್ರದರ್ಶನಗಳನ್ನು ವೀಕ್ಷಿಸಿ ಮೆಚ್ಚುಗೆ ಸೂಚಿಸಿದ್ದಾರೆ. ಕುಂದಾಪುರ ಕನ್ನಡ ಶೈಲಿಯಲ್ಲಿ ವೈದೇಹಿ ಅವರೇ ಈ ಚಿತ್ರಕ್ಕೆ ಸಂಭಾಷಣೆ ಬರೆದಿದ್ದಾರೆ’ ಎಂದು ವಿವರಿಸುತ್ತಾರೆ ಚಂಪಾ.

ಚಂಪಾ ಅವರಿಗಿಂತ ಅವರ ಧ್ವನಿಯೇ ಹೆಚ್ಚು ಚಿರಪರಿಚಿತ. ಕಂಠದಾನ ಕಲಾವಿದೆಯಾಗಿ ಅವರು ವೃತ್ತಿ ಆರಂಭಿಸಿದ್ದು ಉಪೇಂದ್ರ ನಿರ್ದೇಶನದ ‘ಎ’ ಚಿತ್ರದ ಮೂಲಕ. ಐದು ನೂರಕ್ಕೂ ಹೆಚ್ಚು ಚಿತ್ರಗಳಿಗೆ ಕಂಠದಾನ ಕಲಾವಿದೆಯಾಗಿ ಕೆಲಸ ಮಾಡಿದ್ದಾರೆ. ಹಲವು ಧಾರಾವಾಹಿಗಳ ನಾಯಕಿಯರ ಯಶಸ್ಸಿನ ಹಿಂದೆ ಅವರ ಮಧುರವಾದ ಧ್ವನಿ ಇದೆ. ‘ನನ್ನ ಧ್ವನಿಯಲ್ಲಿ ತೊಂದರೆ ಕಾಣಿಸಿಕೊಂಡಿತು. ಎರಡು ವರ್ಷಗಳಿಂದ ಕಂಠದಾನ ಮಾಡುತ್ತಿಲ್ಲ. ಇದು ನನಗೆ ಬಹುಪ್ರಿಯವಾದ ವೃತ್ತಿ. ಮತ್ತೆ ಮುಂದುವರಿಸುತ್ತೇನೆ’ ಎಂದು ಹೆಮ್ಮೆಯಿಂದ ಹೇಳುತ್ತಾರೆ.

‘ದೇವೀರಿ’ ಚಿತ್ರದಲ್ಲಿ ನಟಿ ನಂದಿತಾ ದಾಸ್‌ ಅವರಿಗೆ ಕಂಠದಾನ ಮಾಡುವುದು ಅವರಿಗೆ ಸವಾಲಾಗಿತ್ತಂತೆ. ‘ನನ್ನ ಕಂಠ ಶಾರ್ಪ್‌ ಆಗಿದೆ. ಚಿತ್ರಕ್ಕೆ ಬೇಸ್‌ವಾಯ್ಸ್ ಬೇಕಿತ್ತು. ಇದು ನನಗೆ ನಿಜಕ್ಕೂ ಸವಾಲಾಗಿತ್ತು. ‘ಶ್ರೀಮಂಜುನಾಥ ಚಿತ್ರ’ದಲ್ಲಿ ನಟಿ ಸುಮಲತಾ ಮತ್ತು ಪುಟ್ಟ ಮಗುವಿನ ಪಾತ್ರಕ್ಕೂ ಕಂಠದಾನ ಮಾಡಿದ್ದೆ. ಒಂದೇ ಚಿತ್ರದಲ್ಲಿ ಇಬ್ಬರಿಗೆ ಕಂಠದಾನ ಮಾಡಿದ್ದು, ಸವಾಲಿನ ಜೊತೆಗೆ ಖುಷಿಯನ್ನೂ ಕೊಟ್ಟಿತು’ ಎಂದು ನೆನಪಿಸಿಕೊಳ್ಳುತ್ತಾರೆ.

ಚಂಪಾ ಅವರ ‘ರಂಗಮಂಟಪ’ ನಾಟಕ ತಂಡಕ್ಕೆ ಈಗ ಹತ್ತು ವರ್ಷದ ಹರೆಯ. ರಂಗ ಚಟುವಟಿಕೆಯು ಸಿನಿಮಾ ಶೂಟಿಂಗ್‌ಗೆ ಸಾಕಷ್ಟು ನೆರವಾಯಿತಂತೆ. ‘ಗಾಂಧಿನಗರದ ಶೈಲಿಗಿಂತ ಭಿನ್ನವಾಗಿ ಶೂಟಿಂಗ್‌ ಮಾಡಿದ್ದೇವೆ. ಚಿತ್ರದಲ್ಲಿ ರಂಗ ಕಲಾವಿದರೇ ಹೆಚ್ಚಾಗಿ ನಟಿಸಿದ್ದಾರೆ. ಹಾಗಾಗಿ, ಚಿತ್ರೀಕರಣದ ವೇಳೆ ನಾವೆಲ್ಲರೂ ಕುಟುಂಬದ ಸದಸ್ಯರಂತೆ ಇದ್ದೆವು’ ಎನ್ನುತ್ತಾರೆ.

‘ಅಮ್ಮಚ್ಚಿ ಬಿಂದಾಸ್‌ ಹುಡುಗಿ. ಅವಳದ್ದೇ ಲೋಕದಲ್ಲಿ ವಿಹರಿಸುತ್ತಿರುತ್ತಾಳೆ. ವೈಜಯಂತಿ ಅಡಿಗ ಸಮರ್ಥವಾಗಿ ಈ ಪಾತ್ರ ನಿಭಾಯಿಸಿದ್ದಾರೆ. ಅಮ್ಮಚ್ಚಿಗೆ ಸೀತಾ ಎಂಬ ಪುಟ್ಟ ಗೆಳತಿ ಇರುತ್ತಾಳೆ. ದಿಯಾ ಪಾಲಕ್ಕಲ್‌ ಈ ಪಾತ್ರಕ್ಕೆ ಜೀವ ತುಂಬಿದ್ದಾಳೆ. ‘ಒಂದು ಮೊಟ್ಟೆ ಕಥೆ’ ಖ್ಯಾತಿ ರಾಜ್‌ ಬಿ. ಶೆಟ್ಟಿ ಅವರೂ ನಟಿಸಿದ್ದಾರೆ. ಮಹಿಳೆಯರಸ್ವಾತಂತ್ರ್ಯಹರಣ ಮಾಡುವ ಪಾತ್ರ ಅವರದು’ ಎಂದು ಚಿತ್ರದ ಪಾತ್ರಗಳನ್ನು ಕುರಿತು ಹೇಳುತ್ತಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.