ತುಮಕೂರು: ಹಳ್ಳಿ ಸೊಗಡಿನ ವಿಭಿನ್ನ ಕಥಾ ವಸ್ತು ಹೊಂದಿರುವ ‘ಆನೆಬಲ’ ಚಿತ್ರ ಫೆ.28 ರಂದು ರಾಜ್ಯದ 100 ಚಿತ್ರಮಂದಿರಗಳಲ್ಲಿ ಬಿಡುಗಡೆ ಆಗಲಿದೆ ಎಂದು ಚಿತ್ರ ನಿರ್ಮಾಪಕ ಎ.ವಿ.ವೇಣುಗೋಪಾಲ್ ಅಡಕಿಮಾರನಹಳ್ಳಿ ತಿಳಿಸಿದರು.
ಗ್ರಾಮೀಣ ಕಲೆ, ಸಂಸ್ಕೃತಿ ಉಳಿಸುವ ಪ್ರಯತ್ನವನ್ನು ಈ ಚಿತ್ರದಲ್ಲಿ ತೋರಿಸಲಾಗಿದೆ. ಚಿತ್ರದಲ್ಲಿ ಯುವಕರ ಪಡೆ ವ್ಯಾಸಂಗದ ಜತೆಯಲ್ಲಿ ತುಂಟತನ, ತಮಾಷೆಯೊಂದಿಗೆ ಗ್ರಾಮಗಳಲ್ಲಿ ನಡೆಯುವ ಅನೇಕ ಕೆಲಸಗಳಲ್ಲಿ ಹೇಗೆ ತೊಡಗಿಸಿಕೊಳ್ಳುತ್ತದೆ ಎನ್ನುವ ವಿಷಯವೇ ಕಥೆಯಾಗಿದೆ ಎಂದು ಗುರುವಾರ ಪತ್ರಿಕಾಗೋಷ್ಠಿಯಲ್ಲಿ ತಿಳಿಸಿದರು.
ನಿರ್ದೇಶಕ ಸೂಗನಹಳ್ಳಿ ರಾಜು, ‘ಯುವ ಜನರು ಒಳ್ಳೆಯ ಕೆಲಸಗಳಿಗೆ ಮಾರ್ಪಾಡಾಗುವ ಉತ್ತಮ ಸಂದೇಶವನ್ನು ‘ಆನೆಬಲ’ ಚಿತ್ರ ನೀಡಲಿದೆ. 120ಕ್ಕೂ ಹೆಚ್ಚು ಕಲಾವಿದರು ಅಭಿನಯಿಸಿದ್ದು, ಶೇ 90 ರಷ್ಟು ಹೊಸ ಕಲಾವಿದರಿಗೆ ಆದ್ಯತೆ ನೀಡಲಾಗಿದೆ. ಮೈಸೂರು, ಮಂಡ್ಯ ಸೇರಿದಂತೆ 30ಕ್ಕೂ ಹೆಚ್ಚು ಹಳ್ಳಿಗಳಲ್ಲಿ ಚಿತ್ರೀಕರಣ ಮಾಡಲಾಗಿದೆ. ಈ ಚಿತ್ರವನ್ನು ವಿದೇಶದಲ್ಲೂ ಬಿಡುಗಡೆ ಮಾಡಲು ಚಿಂತನೆ ನಡೆದಿದೆ’ ಎಂದರು.
ಸಾಗರ್ ಚಿತ್ರದ ನಾಯಕ. ರಾಮನಗರದ ರಕ್ಷಿತಾ ನಾಯಕಿ. ಸಿನಿಮಾದಲ್ಲಿ ಒಟ್ಟು ನಾಲ್ಕು ಹಾಡುಗಳಿವೆ. ಪೂರ್ಣಚಂದ್ರ ತೇಜಸ್ವಿ ಸಂಗೀತ ಸಂಯೋಜಿಸಿದ್ದಾರೆ. ಯೋಗರಾಜ್ ಭಟ್, ಡಾ.ವಿ.ನಾಗೇಂದ್ರ ಪ್ರಸಾದ್ ಗೀತ ಸಾಹಿತ್ಯ ಬರೆದಿದ್ದಾರೆ. ಮಂಡ್ಯ ಮನ್ಮುಲ್ ಉಪಾಧ್ಯಕ್ಷ ಎಂ.ಎಸ್ ರಘುನಂದನ್ ಮರಲಿಂಗನದೊಡ್ಡಿ ಸಹ ನಿರ್ಮಾಪಕರಾಗಿದ್ದಾರೆ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.