ADVERTISEMENT

ಮತ್ತೊಂದು ಪ್ಯಾನ್‌ ಇಂಡಿಯಾ ಚಿತ್ರಕ್ಕೆ ಸಜ್ಜಾದ ಹೊಂಬಾಳೆ

​ಪ್ರಜಾವಾಣಿ ವಾರ್ತೆ
Published 30 ನವೆಂಬರ್ 2020, 10:01 IST
Last Updated 30 ನವೆಂಬರ್ 2020, 10:01 IST
ವಿಜಯ್‌ ಕಿರಗಂದೂರು
ವಿಜಯ್‌ ಕಿರಗಂದೂರು   

ಭಾರತೀಯ ಚಿತ್ರರಂಗವೇ ಸ್ಯಾಂಡಲ್‌ವುಡ್‌ನತ್ತ ತಿರುಗಿ ನೋಡುವಂತಹ ಅದ್ಧೂರಿ ಸಿನಿಮಾಗಳನ್ನು ನೀಡಿರುವ ‘ಹೊಂಬಾಳೆ ಫಿಲಂಸ್’ ಸಂಸ್ಥೆ ಈಗ ಮತ್ತೊಂದು ಪ್ಯಾನ್‌ ಇಂಡಿಯಾ ಸಿನಿಮಾ ನೀಡಲು ಸಜ್ಜಾಗಿದೆ.

ಏಕಕಾಲದಲ್ಲಿ ಹಲವು ಭಾಷೆಗಳಲ್ಲಿ ಪ್ಯಾನ್‌ ಇಂಡಿಯಾ ಸಿನಿಮಾ ನಿರ್ಮಾಣ ಮಾಡಲು ಸಂಸ್ಥೆ‌ ದಾಪುಗಾಲಿಟ್ಟಿದ್ದು, ಡಿಸೆಂಬರ್ 2ರ ಮಧ್ಯಾಹ್ನ 2.09ಕ್ಕೆ ಈ ಬಗ್ಗೆ ಅಧಿಕೃತವಾಗಿ ಘೋಷಣೆ ಮಾಡಲಿದೆ.

2014ರಲ್ಲಿ ‘ನಿನ್ನಿಂದಲೇ’ ಸಿನಿಮಾ ಮೂಲಕ ಆರಂಭವಾದ ಹೊಂಬಾಳೆ ಫಿಲಂಸ್ನ ಸಿನಿ ಪಯಣದಲ್ಲಿ ‘ಮಾಸ್ಟರ್ ಪೀಸ್’, ‘ರಾಜಕುಮಾರ್’, ‘ಕೆಜಿಎಫ್‌ ಚಾಪ್ಟರ್‌ 1’ ಹಾಗೂ ಬಿಡುಗಡೆಯ ಹೊಸ್ತಿಲಿನಲ್ಲಿರುವ ‘ಕೆಜಿಎಫ್– ಚಾಪ್ಟರ್‌ 2, ‘ಯುವರತ್ನ’ ವರೆಗೂ ಸಾಗಿ ಬಂದಿದೆ. ಈ ಸಂಸ್ಥೆ ಏಳು ವರ್ಷಗಳಲ್ಲಿ ಏಳು ಸಿನಿಮಾಗಳನ್ನು ನಿರ್ಮಿಸಿದ್ದು, ಇದರಲ್ಲಿ ಮೂರು ಪ್ಯಾನ್ ಇಂಡಿಯಾ ಚಿತ್ರಗಳು ಎನಿಸಿಕೊಂಡಿವೆ.

ADVERTISEMENT

‘ಹೊಂಬಾಳೆ ಫಿಲಂಸ್’ ಸಂಸ್ಥೆಯ ಮುಖ್ಯಸ್ಥ ವಿಜಯ್ ಕಿರಗಂದೂರು, ಈಗ ತಮ್ಮ ಖಾತೆಯಲ್ಲಿರುವ ಸಿನಿಮಾಗಳನ್ನು ಮೀರಿಸುವಂತಹ ಬಹುದೊಡ್ಡ ಸಿನಿಮಾವೊಂದನ್ನು ಮಾಡಲು ಕೈಹಾಕಿದ್ದಾರಂತೆ. ಈ ಚಿತ್ರವನ್ನು ಅವರು ಏಕಕಾಲದಲ್ಲಿ ಹಲವು ಭಾಷೆಗಳಲ್ಲಿ ನಿರ್ಮಿಸುವ ಯೋಜನೆ ಹಾಕಿಕೊಂಡಿದ್ದಾರೆ. ಚಿತ್ರದ ಶೀರ್ಷಿಕೆ, ಚಿತ್ರದ ನಾಯಕ ಹಾಗೂ ಕಲಾವಿದರು, ತಾಂತ್ರಿಕ ತಂಡದ ಮಾಹಿತಿಯನ್ನು ಹಂಚಿಕೊಳ್ಳಲಿದ್ದಾರೆ.

ಕನ್ನಡದ ‘ಕೆಜಿಎಫ್’ ಸಿನಿಮಾ ಈಗಾಗಲೇ ಭಾರತೀಯ ಚಿತ್ರರಂಗದಲ್ಲಿ ಒಂದು ಮೈಲು ಗಲ್ಲು ಸ್ಥಾಪಿಸಿದೆ. ಈ ಚಿತ್ರದ ಹತ್ತುಪಟ್ಟು ನಿರೀಕ್ಷೆ ‘ಕೆಜಿಎಫ್ ಚಾಪ್ಟರ್– 2’ ಮೇಲೆ ನೆಟ್ಟಿದ್ದು, ವಿಶ್ವದಾದ್ಯಂತ ಸಿನಿಪ್ರಿಯರು ಈ ಚಿತ್ರದ ಬಿಡುಗಡೆಯನ್ನು ಕಾತರದಿಂದ ಎದುರು ನೋಡುತ್ತಿದ್ದಾರೆ.

‘ಹೊಂಬಾಳೆ ಫಿಲಂಸ್’ ಬ್ಯಾನರ್‌ನಡಿ ನಿರ್ಮಾಣವಾಗಿರುವ ಪುನೀತ್‌ ರಾಜ್‌ಕುಮಾರ್‌ ನಟನೆಯ ‘ಯುವರತ್ನ’ ಚಿತ್ರ ಕೂಡ ತೆಲುಗಿನಲ್ಲೂ ಬಿಡುಗಡೆ ಕಾಣಲು ಸಜ್ಜಾಗಿದೆ. ಇನ್ನೆರಡು ದಿನಗಳಲ್ಲಿ ಸಿನಿಪ್ರಿಯರಿಗೆ ಮತ್ತೊಂದು ಖುಷಿ ಸುದ್ದಿ ನೀಡಲು ಸಂಸ್ಥೆ ಸಿದ್ಧತೆಯಲ್ಲಿದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.