ಮುಖ್ಯಮಂತ್ರಿ ಸಿದ್ದರಾಮಯ್ಯನವರ ಅಭಿಮಾನಿಯೊಬ್ಬರ ಕುರಿತಾದ ಕಥೆಯನ್ನು ಹೊಂದಿರುವ ‘ಕನಕರಾಜ’ ಚಿತ್ರ ಇತ್ತೀಚೆಗಷ್ಟೇ ಸೆಟ್ಟೇರಿದೆ. ವಿ.ಎಂ.ರಾಜು, ನೀಲ್ ಕೆಂಗಾಪುರ ನಿರ್ದೇಶನದ ಚಿತ್ರಕ್ಕೆ ವಿ.ನಾಗೇಂದ್ರ ಪ್ರಸಾದ್ ಕಥೆ, ಚಿತ್ರಕಥೆ, ಸಂಗೀತ, ಸಂಭಾಷಣೆಯಿದೆ. ಸಚಿವ ಎಚ್.ಎಂ.ರೇವಣ್ಣ ಚಿತ್ರದ ಮೊದಲ ದೃಶ್ಯಕ್ಕೆ ಚಾಲನೆ ನೀಡಿ ತಂಡಕ್ಕೆ ಶುಭ ಹಾರೈಸಿದರು.
ಮುಖ್ಯಮಂತ್ರಿ ಸಿದ್ದರಾಮಯ್ಯನವರ ಅಭಿಮಾನಿ ‘ಕನಕರಾಜ’ನಾಗಿ ಅನೂಪ್ ರೇವಣ್ಣ ಕಾಣಿಸಿಕೊಳ್ಳುತ್ತಿದ್ದಾರೆ. ನಿಮಿಶಾ ಚಿತ್ರದ ನಾಯಕಿ. ‘ಯುವಕರು ರಾಜಕಾರಣಕ್ಕೆ ಬರಬೇಕೆಂದು ರಾಜಕಾರಣಿಗಳು ಆಗಾಗ ಹೇಳುತ್ತಿರುತ್ತಾರೆ. ಅದೇ ಕಥೆಯನ್ನು ಹೊಂದಿರುವ ಚಿತ್ರವಿದು. ಚಿತ್ರದ ನಾಯಕ ಮುಖ್ಯಮಂತ್ರಿಗಳ ಅಭಿಮಾನಿಯಾಗಿರುತ್ತಾನೆ. ಅವರಂತೆ ತಾನು ಬೆಳೆಯಬೇಕೆಂದು ಹಂಬಲಿಸುತ್ತಾನೆ. ರಾಜಕಾರಣಕ್ಕೆ ಬರಲು ಏನೆಲ್ಲ ಮಾಡುತ್ತಾನೆ, ಹೇಗೆ ಹೋರಾಟ ನಡೆಸುತ್ತಾನೆಂಬುದು ಚಿತ್ರಕಥೆ’ ಎಂದರು ವಿ.ನಾಗೇಂದ್ರ ಪ್ರಸಾದ್.
ಸಿದ್ದರಾಮಯ್ಯನವರ ಆಪ್ತವಲಯದಲ್ಲಿ ಗುರುತಿಸಿಕೊಂಡಿರುವ ಸನತ್‌ಕುಮಾರ್ ಚಿತ್ರದ ನಿರ್ಮಾಪಕ.
‘ಎಚ್.ಎಂ.ರೇವಣ್ಣ ಪುತ್ರ ಅನೂಪ್ ರೇವಣ್ಣ ಈ ಪಾತ್ರಕ್ಕೆ ಸೂಕ್ತ ಎಂದು ಆಯ್ಕೆ ಮಾಡಿದ್ದೇವೆ. ಅವರ ರಕ್ತದಲ್ಲಿಯೇ ರಾಜಕಾರಣವಿದೆ. ಮುಖ್ಯಮಂತ್ರಿಗಳ ಪಾತ್ರವೂ ಬರುತ್ತದೆ. ಆದರೆ ಹೆಸರು ಬೇರೆ ಇರುತ್ತದೆ. ಬಹಳ ಬೇಗ ಚಿತ್ರವನ್ನು ಸಿದ್ಧಪಡಿಸಿ ತೆರೆಗೆ ತರುತ್ತೇವೆ’ ಎಂದರು ಸನತ್‌ಕುಮಾರ್.
‘ಬೆಂಗಳೂರು, ಮಂಗಳೂರು, ಮಡಿಕೇರಿ ಸುತ್ತಮುತ್ತ ಚಿತ್ರೀಕರಣ ಮಾಡುತ್ತೇವೆ. ಕಮರ್ಷಿಯಲ್ ಸಿನಿಮಾ. ನಾಲ್ಕು ಫೈಟ್‌ಗಳಿವೆ. ಹಾಡುಗಳಿಗೆ ಹೊರ ರಾಜ್ಯ ಮತ್ತು ಹೊರ ದೇಶಗಳಿಗೆ ಹೋಗುವ ಆಲೋಚನೆಯಿದೆ. ಅವಿನಾಶ್, ಶೋಭರಾಜ್, ರವಿಶಂಕರ್, ಸುಧಾ ಬೆಳವಾಡಿ ಸೇರಿದಂತೆ ಅನೇಕ ಪ‍್ರಮುಖ ಕಲಾವಿದರು ಚಿತ್ರದಲ್ಲಿದ್ದಾರೆ’ ಎಂದು ನಿರ್ದೇಶಕ ವಿ.ಎಂ.ರಾಜು ಮಾಹಿತಿ ನೀಡಿದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.