ನವದೆಹಲಿ: 'Songs of Forgotten Trees' ಹಿಂದಿ ಚಿತ್ರಕ್ಕಾಗಿ ಅನುಪರ್ಣಾ ರಾಯ್ ಅವರಿಗೆ ವೆನಿಸ್ ಅಂತರರಾಷ್ಟ್ರೀಯ ಚಲನಚಿತ್ರೋತ್ಸವದಲ್ಲಿ ಅತ್ಯುತ್ತಮ ನಿರ್ದೇಶಕಿ ಪ್ರಶಸ್ತಿ ಸಿಕ್ಕಿದೆ.
ಚಲನಚಿತ್ರ ನಿರ್ಮಾಪಕ ಅನುರಾಗ್ ಕಶ್ಯಪ್ ಅವರು ಪ್ರಸ್ತುತಪಡಿಸಿರುವ ಈ ಚಿತ್ರವು ಸೆಪ್ಟೆಂಬರ್ 1 ರಂದು ಚಿತ್ರೋತ್ಸವದ ಪ್ರತಿಷ್ಠಿತ ಒರಿಝೋಂಟಿ ಸ್ಪರ್ಧಾ ವಿಭಾಗದಲ್ಲಿ ಪ್ರಥಮ ಪ್ರದರ್ಶನಗೊಂಡಿತು. ಇದು ಹೊಸ ಪ್ರವೃತ್ತಿಗಳನ್ನು ಎತ್ತಿ ತೋರಿಸುವ ಚಲನಚಿತ್ರಗಳಿಗಾಗಿ ಅಂತರರಾಷ್ಟ್ರೀಯ ಸ್ಪರ್ಧೆಯಾಗಿದೆ. ಹೊಸ ಪರಿಕಲ್ಪನೆ, ಯುವ ಪ್ರತಿಭೆಗಳು, ವೈಶಿಷ್ಟ್ಯಗಳ ಮೇಲೆ ಕೇಂದ್ರೀಕರಿಸುತ್ತದೆ.
ಈ ಚಿತ್ರವು ಕಡೆಗಣಿಸಲ್ಪಟ್ಟ ಅಥವಾ ಸಮಾಜದಲ್ಲಿ ಮೂಲೆಗುಂಪಾದ ಎಲ್ಲ ಮಹಿಳೆಯರಿಗೆ ಸಲ್ಲಿಸುವ ಗೌರವವಾಗಿದೆ ಎಂದು ರಾಯ್ ಹೇಳಿದ್ದಾರೆ.
ಈ ಗೆಲುವು ಮಹಿಳೆಯರಿಗೆ ಧ್ವನಿಯಾಗುವ ಹೆಚ್ಚಿನ ಕಥೆಗಳ ಸೃಷ್ಟಿಗೆ ಮತ್ತು ಮಹಿಳೆಯರಿಗೆ ಹೆಚ್ಚಿನ ಶಕ್ತಿಯನ್ನು ಪ್ರೇರೇಪಿಸಲಿ ಎಂದು ಅವರು ಹೇಳಿಕೆಯಲ್ಲಿ ತಿಳಿಸಿದ್ದಾರೆ.
ಚಿತ್ರದ ಅಧಿಕೃತ ಸಾರಾಂಶದ ಪ್ರಕಾರ, ಚಿತ್ರವು ವಲಸೆ ಬಂದ ಮಹತ್ವಾಕಾಂಕ್ಷೆಯ ನಟಿ ಥೂಯಾ ಅವರ ಕಥಾಹಂದರ ಹೊಂದಿದೆ. ಅವರು ತಮ್ಮ ಸೌಂದರ್ಯ ಮತ್ತು ಬುದ್ಧಿವಂತಿಕೆಯನ್ನು ಬಳಸಿಕೊಂಡು ಹೇಗೆ ಬದುಕುಕಟ್ಟಿಕೊಳ್ಳುತ್ತಾರೆ. ಅವಕಾಶಕ್ಕಾಗಿ ಆಗಾಗ್ಗೆ ಹೇಗೆ ಚಿತ್ರರಂಗದ ಇತರರೊಡನೆ ಅತ್ಯಾಪ್ತರಾಗಿರುತ್ತಾರೆ ಎಂಬುದನ್ನು ಚಿತ್ರ ಒಳಗೊಂಡಿದೆ.
ಬಿಭಾನ್ಶು ರಾಯ್, ರೋಮಿಲ್ ಮೋದಿ ಮತ್ತು ರಂಜನ್ ಸಿಂಗ್ ನಿರ್ಮಾಣ ಮಾಡಿರುವ ಈ ಚಿತ್ರದಲ್ಲಿ ಭೂಷಣ್ ಶಿಂಪಿ, ರವಿ ಮಾನ್, ಪ್ರೀತಮ್ ಪಿಲಾನಿಯಾ ಮತ್ತು ಲವ್ಲಿ ಸಿಂಗ್ ಕೂಡ ತಾರಾಗಣದಲ್ಲಿದ್ದಾರೆ.
ದೇವಜಿತ್ ಸಮಂತ ಅವರ ಛಾಯಾಗ್ರಹಣ, ಆಶಿಶ್ ಪಟೇಲ್ ಅವರ ಸಂಕಲನ ಮತ್ತು ನಿಶಾಂತ್ ರಾಮ್ಟೆಕೆ ಅವರ ಸಂಗೀತ ಚಿತ್ರಕ್ಕಿದೆ.
ವೆನಿಸ್ ಅಂತರರಾಷ್ಟ್ರೀಯ ಚಲನಚಿತ್ರೋತ್ಸವ ಶನಿವಾರ ಮುಕ್ತಾಯವಾಯಿತು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.