ADVERTISEMENT

ಎಲ್ರೂ ಅನುಷ್ಕಾ ಆಗೋಕ್ಕಾಗಲ್ಲ

ಜನ್ಮದಿನ

​ಪ್ರಜಾವಾಣಿ ವಾರ್ತೆ
Published 8 ನವೆಂಬರ್ 2018, 19:30 IST
Last Updated 8 ನವೆಂಬರ್ 2018, 19:30 IST
ಅನುಷ್ಕಾ ಶೆಟ್ಟಿ
ಅನುಷ್ಕಾ ಶೆಟ್ಟಿ   

ಕನ್ನಡದ ನೆಲದಲ್ಲಿ ಜನಿಸಿ ಪರಭಾಷೆಯ ನೆಲದಲ್ಲಿ ಸಾಧನೆ ಮಾಡಿದವರು ತುಂಬಾ ಕಡಿಮೆ. ಪರಭಾಷೆಯಲ್ಲಿನ ಪೈಪೋಟಿ, ಜೀವನಶೈಲಿ, ಸಮಸ್ಯೆ– ಸವಾಲುಗಳನ್ನು ಎದುರಿಸುತ್ತ ನೆಲೆ ಕಂಡುಕೊಂಡು ಯಶಸ್ಸು ಕಂಡವರು ವಿರಳ. ಅಂಥವರ ಸಾಲಿನಲ್ಲಿ ಅನುಷ್ಕಾ ಶೆಟ್ಟಿ ಕೂಡ ನಿಲ್ಲುತ್ತಾರೆ.

ಮಂಗಳೂರಿನ ಪುತ್ತೂರಿನಲ್ಲಿ ಹುಟ್ಟಿ, ಬೆಂಗಳೂರಿನಲ್ಲಿ ಶಿಕ್ಷಣ ಪೂರೈಸಿರುವ ಅನುಷ್ಕಾ ಶೆಟ್ಟಿ ಕನ್ನಡ ಚಿತ್ರರಂಗದೊಂದಿಗೆ ಹೆಚ್ಚು ನಂಟು ಹೊಂದದಿರಬಹುದು ಅಥವಾ ಚಿತ್ರಗಳಲ್ಲಿ ಅಭಿನಯಿಸದಿರಬಹುದು. ಆದರೆ ತೆಲುಗು, ತಮಿಳು ಚಿತ್ರರಂಗದಲ್ಲಿ ಕನ್ನಡದ ಬೆಡಗಿಯಾಗಿ ಮೂಡಿಸಿರುವ ಛಾಪು
ಸಾಮಾನ್ಯವಾದುದ್ದಲ್ಲ.

2005ರಲ್ಲಿ ‘ಸೂಪರ್’ ತೆಲುಗು ಚಿತ್ರದ ಮೂಲಕ ಚಿತ್ರರಂಗ ಪ್ರವೇಶಿಸಿದ ಅನುಷ್ಕಾ 13 ವರ್ಷಗಳಲ್ಲಿ ಡಾನ್. ಅರುಂಧತಿ, ರುದ್ರಮ್ಮದೇವಿ, ಬಾಹುಬಾಲಿಯಂತಹ ಪ್ರಮುಖ ಚಿತ್ರಗಳಲ್ಲಿ ಅಭಿನಯಿಸಿದ್ದು ಅಲ್ಲದೇ ನಾಯಕ ನಟರಷ್ಟೇ ಸಮಾನವಾಗಿ ಜನಪ್ರಿಯತೆ ಗಳಿಸಿದರು.

ADVERTISEMENT

ಆಯಾ ಚಿತ್ರಗಳ ಪಾತ್ರಕ್ಕೆ ಅನುಸಾರ ತಮ್ಮ ಮೈಕಟ್ಟು ಬದಲಾವಣೆ ಮಾಡಿಕೊಂಡು ಪಾತ್ರಗಳಿಗೆ ಜೀವ ತುಂಬಿದರು. ‘ಡಾನ್’ ಚಿತ್ರದಲ್ಲಿ ತೆಳ್ಳನೆಯ ಯುವತಿಯಾಗಿ ಕಾಣಿಸಿಕೊಂಡರೆ, ‘ಸೈಜ್‌ ಜೀರೋ’ ಚಿತ್ರದಲ್ಲಿ ಸದಾ ತಿಂಡಿ ಸವಿಯುವ ದಪ್ಪನೆಯ ಯುವತಿಯಂತೆ ಕಾಣಸಿಕ್ಕರು.

ರುದ್ರಮ್ಮದೇವಿ ಚಿತ್ರದಲ್ಲಿ ವೀರ ಹೋರಾಟಗಾರ್ತಿಯಾಗಿ ಎಲ್ಲರನ್ನೂ ಬೆಚ್ಚಿ ಬೀಳಿಸಿದ ಅದೇ ಅನುಷ್ಕಾ ಅದಕ್ಕೂ ಮುಂಚೆ ‘ಅರುಂಧತಿ’ಯಾಗಿ ಬಹುತೇಕರ ಮನದಲ್ಲಿ ನೆಲೆ ನಿಂತರು. ‘ಬಾಹುಬಾಲಿ–1 ಮತ್ತು 2’ನೇ ಭಾಗಗಳಲ್ಲಿ ತಾಯಿ ಮತ್ತು ಯುವರಾಣಿಯಾಗಿ ಮಿಂಚಿದರು. ‘ಭಾಗಮತಿ’ ಚಿತ್ರದಲ್ಲಿ ನಿಗೂಢ ಪಾತ್ರದಲ್ಲಿ ಬೆರಗುಗೊಳಿಸಿದರು.

ಚಿತ್ರರಂಗದಲ್ಲಿ ಇನ್ನಷ್ಟು ಸಾಧನೆ ಮಾಡುವ ಉಮೇದಿನಲ್ಲಿ ಇರುವ ಅನುಷ್ಕಾ ಶೀಘ್ರವೇ ಮದುವೆಯಾಗಲಿದ್ದಾರೆ ಎಂಬ ಸುದ್ದಿ ಹರಡಿದೆ. ಅವರನ್ನು ವರಿಸಲಿರುವ ಅದೃಷ್ಟವಂತ ತೆಲುಗುನಾಡಿನವನೇ ಅಥವಾ ಕನ್ನಡಿಗನೇ ಎಂಬ ಕುತೂಹಲ ಚಿತ್ರರಸಿಕರಲ್ಲಿ ಇದೆ. ಸದ್ಯದಲ್ಲೇ ಅವರೇ ಈ ವಿಷಯವನ್ನು ಬಹಿರಂಗಪಡಿಸಬಹುದು.

ಅಂದ ಹಾಗೆ, ಅನುಷ್ಕಾ ನ.7ರಂದು ಜನ್ಮದಿನ ಆಚರಿಸಿದರು. ಚಿರಯೌವನೆಯಂತೆ ಕಾಣಿಸುವ ಅವರು 37ನೇ ವರ್ಷಕ್ಕೆ ಪದಾರ್ಪಣೆ ಮಾಡಿದರು. ಅವರ ಜನ್ಮದಿನದ ಹಿನ್ನೆಲೆಯಲ್ಲಿ ಅಭಿಮಾನಿಗಳು ಸಾಮಾಜಿಕ ಜಾಲತಾಣಗಳಲ್ಲಿ ಅವರನ್ನು ಮನದುಂಬಿ ಹರಿಸಿದರು.

ಅನುಷ್ಕಾ ಬಗ್ಗೆ ಅಭಿಮಾನ ವ್ಯಕ್ತಪಡಿಸುವ ಅಭಿಮಾನಿಗಳ ಹಲವು ಸಾಲುಗಳಲ್ಲಿ ಇದು ಹೆಚ್ಚು ಹಿಟ್‌ ಆಗಿದೆ: ಚೆಂದನೆಯ ಹುಡುಗಿಯರೆಲ್ಲ ಹೀರೊಯಿನ್‌ ಆಗಬಹುದು, ಆದರೆ ಎಲ್ಲಾ ಹೀರೊಯಿನ್‌ಗಳು, ಅನುಷ್ಕಾ ಆಗಲು ಸಾಧ್ಯವಿಲ್ಲ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.