ADVERTISEMENT

‘ಆಪ್ನೆ 2’: ಒಂದೇ ಪರದೆಯಲ್ಲಿ ಡಿಯೋಲ್ ಕುಟುಂಬದ ಮೂರು ತಲೆಮಾರು

​ಪ್ರಜಾವಾಣಿ ವಾರ್ತೆ
Published 30 ನವೆಂಬರ್ 2020, 6:50 IST
Last Updated 30 ನವೆಂಬರ್ 2020, 6:50 IST
ಆಪ್ನೆ ಚಿತ್ರದ ದೃಶ್ಯ
ಆಪ್ನೆ ಚಿತ್ರದ ದೃಶ್ಯ   

2007ರಲ್ಲಿ ತೆರೆ ಕಂಡ ‘ಆಪ್ನೆ’ ಚಿತ್ರದ ಮೂಲಕ ವೀಕ್ಷಕರ ಹೃದಯ ಗೆದ್ದ ಡಿಯೋಲ್ ಕುಟುಂಬ ಈಗ ಆ ಚಿತ್ರದ ಸೀಕ್ವೆಲ್ ಮೂಲಕ ಮತ್ತೆ ತೆರೆ ಮೇಲೆ ಬರುತ್ತಿದೆ. ಈ ಬಗ್ಗೆ ಸಾಮಾಜಿಕ ಜಾಲತಾಣದಲ್ಲಿ ಘೋಷಿಸಿದ್ದಾರೆ ಧರ್ಮೇಂದ್ರ. ಅಪ್ನೆ ಸೀಕ್ವೆಲ್‌ನಲ್ಲಿ ಡಿಯೋಲ್ ಅಭಿಮಾನಿಗಳಿಗೆ ಇನ್ನೂ ಒಂದು ಖುಷಿ ಸುದ್ದಿ ಇದೆ. ಅದೇನೆಂದರೆ ಆ ಕುಟುಂಬದ ಮೂರು ತಲೆಮಾರಿನವರು ಈ ಚಿತ್ರದಲ್ಲಿ ನಟಿಸುತ್ತಿದ್ದಾರೆ. ಧರ್ಮೇಂದ್ರ, ಸನ್ನಿ ಡಿಯೋಲ್, ಬಾಬ್ಬಿ ಡಿಯೋಲ್ ಜೊತೆಗೆ ಕರಣ್ ಡಿಯೋಲ್ ಕೂಡ ಪರದೆ ಹಂಚಿಕೊಳ್ಳುತ್ತಿದ್ದಾರೆ.

ಈ ಚಿತ್ರಕ್ಕೆ ಅನಿಲ್ ಶರ್ಮಾ ನಿರ್ದೇಶನವಿದೆ. ಮುಂದಿನ ಮಾರ್ಚ್‌ಗೆ ಸಿನಿಮಾದ ಶೂಟಿಂಗ್ ಆರಂಭವಾಗುವ ಸಾಧ್ಯತೆ ಇದ್ದು 2021ರ ದೀಪಾವಳಿಗೆ ಬಿಡುಗಡೆಯಾಗಲಿದೆ. ಚಿತ್ರದ ಶೂಟಿಂಗ್ ಮುಂಬೈ ಹಾಗೂ ಲಂಡನ್‌ನಲ್ಲಿ ನಡೆಯಲಿದೆ. ಚಿತ್ರಕ್ಕೆ ಸಂಬಂಧಪಟ್ಟ ಕೆಲಸಗಳು ವೇಗವಾಗಿ ನಡೆಯುತ್ತಿವೆ.

ಬಾಲಿವುಡ್ ಲೆಜೆಂಡ್ ಧರ್ಮೇಂದ್ರ ‘ನನ್ನ ವೃತ್ತಿ ಬದುಕಿನಲ್ಲಿ ಆಪ್ನೆ ತುಂಬಾ ಉತ್ತಮವಾದ ಚಿತ್ರ. ಇಡೀ ಚಿತ್ರತಂಡದ ಪ್ರಯತ್ನಕ್ಕೆ ಪ್ರೇಕ್ಷಕರಿಂದ ಉತ್ತಮ ಪ್ರತಿಕ್ರಿಯೆ ವ್ಯಕ್ತವಾಗಿತ್ತು. ಈಗ ನನ್ನೀಡಿ ಕುಟುಂಬದೊಂದಿಗೆ ‘ಆಪ್ನೆ–2’ ಚಿತ್ರದಲ್ಲಿ ನಟಿಸುವ ಅವಕಾಶ ಸಿಕ್ಕಿದೆ. ನನ್ನ ಮಕ್ಕಳಾದ ಸನ್ನಿ, ಬಾಬ್ಬಿ ಹಾಗೂ ಮೊಮ್ಮಗ ಕರಣ್ ಈ ಸಿನಿಮಾದಲ್ಲಿ ನನ್ನೊಂದಿಗೆ ನಟಿಸುತ್ತಿದ್ದಾರೆ. ಇದು ತುಂಬಾ ವಿಶೇಷವಾದ ಚಿತ್ರ. ನಾನು ಶೂಟಿಂಗ್‌ಗಾಗಿ ಎದುರು ನೋಡುತ್ತಿದ್ದೇನೆ’ ಎಂದು ಸಾಮಾಜಿಕ ಜಾಲತಾಣದಲ್ಲಿ ಖುಷಿ ಹಂಚಿಕೊಂಡಿದ್ದಾರೆ.

ADVERTISEMENT

ಆಪ್ನೆಯಲ್ಲಿ ಧರ್ಮೇಂದ್ರ ಮಾಜಿ ಬಾಕ್ಸರ್‌ ಬಲ್‌ದೇವ್ ಚೌಧರಿ ಅವರ ಪಾತ್ರಕ್ಕೆ ಬಣ್ಣ ಹಚ್ಚಿದ್ದರು. ಅವರ ಮಕ್ಕಳಾದ ಅಂಗದ್ ಹಾಗೂ ಕರಣ್ ಪಾತ್ರದಲ್ಲಿ ಸನ್ನಿ ಹಾಗೂ ಬಾಬ್ಬಿ ಕಾಣಿಸಿಕೊಂಡಿದ್ದರು. ಸಿನಿಮಾದಲ್ಲಿ ಶಿಲ್ಪಾ ಶೆಟ್ಟಿ, ಕತ್ರಿನಾ ಕೈಫ್‌, ವಿಕ್ಟರ್ ಬ್ಯಾನರ್ಜಿ ಹಾಗೂ ದಿವ್ಯಾಸ ದತ್ತಾ ಮುಖ್ಯಭೂಮಿಕೆಯಲ್ಲಿದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.