ADVERTISEMENT

‘ಆ್ಯಪಲ್‌ ಕೇಕ್’ನಲ್ಲಿ ಅರಳಿದ ಕನಸುಗಳು

​ಪ್ರಜಾವಾಣಿ ವಾರ್ತೆ
Published 4 ಅಕ್ಟೋಬರ್ 2018, 19:45 IST
Last Updated 4 ಅಕ್ಟೋಬರ್ 2018, 19:45 IST
ಶುಭರಕ್ಷಾ
ಶುಭರಕ್ಷಾ   

ಎಲ್ಲ ಸಿಹಿ ತಿನಿಸುಗಳಿಗೂ ಒಂದೊಂದು ರುಚಿ, ಬಣ್ಣ, ಸ್ವಾದ ಇರುತ್ತದೆ. ಬೇಕರಿಯಲ್ಲಿ ಅಳಿದುಳಿದ ಸಿಹಿ ತಿನಿಸುಗಳನ್ನು ಬಳಸಿ ತಯಾರಿಸುವ ಆ್ಯಪಲ್‌ ಕೇಕ್‌ಗೂ ಉತ್ತಮ ರುಚಿ ಕೊಡಬಲ್ಲ ಸ್ವಾದಿಷ್ಟವಿದೆ. ಮನುಷ್ಯನ ವ್ಯಕ್ತಿತ್ವವನ್ನು ‘ಆ್ಯಪಲ್‌ ಕೇಕ್‌’ನಲ್ಲಿ ಕಟ್ಟಿಕೊಡಲು ಹೊರಟಿದ್ದಾರೆ ನಿರ್ದೇಶಕ ರಂಜಿತ್‌ಕುಮಾರ್‌ ಗೌಡ.

ದಶಕಗಳ ಜೊತೆಯಲ್ಲಿದ್ದ ಸ್ನೇಹಿತರ ತಂಡ ಒಟ್ಟಾಗಿ ನಿರ್ಮಿಸಿರುವ ಚಿತ್ರ ಇದು. ಟೊರೊಂಟೊ ಫಿಲ್ಮ್‌ ಫೆಸ್ಟಿವಲ್‌ನ ವಿಶೇಷ ಜ್ಯೂರಿ ವಿಭಾಗದಲ್ಲಿ ಪ್ರದರ್ಶನಕ್ಕೂ ಈ ಸಿನಿಮಾ ಆಯ್ಕೆಯಾಗಿದೆ. ಸಮಾಜದಲ್ಲಿರುವ ಎಲ್ಲ ರೀತಿಯ ಪಾತ್ರಗಳು, ಸನ್ನಿವೇಶಗಳು, ನಡುವೆಯೇ ಕಚಗುಳಿ ಇಡುವುದರೊಂದಿಗೆ ಮನಮಿಡಿಯುವ ವಿಷಯಗಳ ಹೂರಣ ‘ಆ್ಯಪಲ್‌ ಕೇಕ್‌’ನಲ್ಲಿದೆ ಎಂಬುದು ಚಿತ್ರತಂಡದ ಹೇಳಿಕೆ.

‘ನಾವು ಪಾತ್ರಗಳ ವೈಭವೀಕರಣ ಮಾಡಿಲ್ಲ. ಪ್ರತಿಯೊಬ್ಬರ ಜೀವನದಲ್ಲಿ ನಡೆದ ನೈಜ ಘಟನಾವಳಿಗಳ ಚಿತ್ರಣವೇ ಈ ಸಿನಿಮಾ’ ಎಂದರು ನಿರ್ದೇಶಕ ರಂಜಿತ್‌ಕುಮಾರ್‌ ಗೌಡ.

ADVERTISEMENT

ಬೆಂಗಳೂರು, ಮಂಗಳೂರು, ಮಂಡ್ಯ ಮತ್ತು ಉತ್ತರ ಕರ್ನಾಟಕ ಭಾಗದ ಹುಡುಗರು ಹಲವು ಕನಸುಗಳನ್ನು ಕಾಣುತ್ತಾರೆ. ಅವುಗಳ ಈಡೇರಿಕೆಗಾಗಿ ಒಂದೆಡೆ ಸೇರುತ್ತಾರೆ. ಅವರ ಸಂಸ್ಕೃತಿ, ಅಭಿರುಚಿ ಭಿನ್ನವಾಗಿರುತ್ತವೆ. ಅವರೆಲ್ಲರ ನಡುವಿನ ಹೊಂದಾಣಿಕೆ ಸುತ್ತ ಕಥೆ ಸಾಗಲಿದೆಯಂತೆ. ಚಿತ್ರದಲ್ಲಿ ಎಲ್ಲಿಯೂ ದ್ವಂದ್ವಾರ್ಥದ ಸಂಭಾಷಣೆ ಬಳಸಿಲ್ಲ. ಬಿಳಿಹಾಳೆಯಂತಹ ಮನಸ್ಸಿನೊಂದಿಗೆ ಸಿನಿಮಾ ಪ್ರವೇಶಿಸಿದಾಗ ಅದರೊಳಗೆ ಒಳ್ಳೆಯ ಬಣ್ಣಗಳನ್ನು ತುಂಬಬಹುದು. ಅದನ್ನೇ ಚಿತ್ರ ಕಟ್ಟಿಕೊಡಲಿದೆ ಎನ್ನುವುದು ಚಿತ್ರತಂಡ ವಿವರಣೆ.

ಈ ಚಿತ್ರ ಕನ್ನಡ ಸೇರಿದಂತೆ ತಮಿಳು, ತೆಲುಗು ಭಾಷೆಯಲ್ಲಿಯೂ ತೆರೆ ಕಾಣಲಿದೆ. ಚಿತ್ರದ ಮೂರು ಹಾಡುಗಳಿಗೆ ಶ್ರೀಧರ್‌ ಕಶ್ಯಪ್ ಸಂಗೀತ ಸಂಯೋಜಿಸಿದ್ದಾರೆ. ಎ.ಆರ್‌. ನಿರಂಜನ್ ಬಾಬು ಅವರ ಛಾಯಾಗ್ರಹಣವಿದೆ. ಅರವಿಂದ್‌ ಕುಮಾರ್‌ ಗೌಡ ಬಂಡವಾಳ ಹೂಡಿದ್ದಾರೆ. ವಿಜಯ್‌ ಶಂಕರ್, ಅರವಿಂದ್‌ ಕುಮಾರ್‌ ಗೌಡ, ಕೃಷ್ಣ ಹನಗಿ, ಶುಭರಕ್ಷ, ಚೈತ್ರಾ ಶೆಟ್ಟಿ, ರಂಗಸ್ವಾಮಿ, ಹರಿಚಂದ್ರ ತಾರಾಗಣದಲ್ಲಿದ್ದಾರೆ. ಇದೇ ವೇಳೆ ಚಿತ್ರದ ಆಡಿಯೊ ಮತ್ತು ಟ್ರೇಲರ್‌ ಅನ್ನು ಬಿಡುಗಡೆ ಮಾಡಲಾಯಿತು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.