ADVERTISEMENT

ಅರ್ಜುನ್ ಕಾಯ ತಾಪತ್ರಯ

ದೇಹಾಕಾರ ವ್ಯತ್ಯಾಸ ಹೊಂದಿರುವ ನಟ

ವಿಶಾಖ ಎನ್.
Published 5 ಜೂನ್ 2019, 19:30 IST
Last Updated 5 ಜೂನ್ 2019, 19:30 IST
ಅರ್ಜುನ್‌ ಕಪೂರ್
ಅರ್ಜುನ್‌ ಕಪೂರ್   

‘ಚಿತ್ರೋದ್ಯಮಕ್ಕೆ ಚಿರಪರಿಚಿತವಾದ ಕುಟುಂಬ ನಮ್ಮದೆನ್ನುವುದು ವಿಶೇಷಣವಷ್ಟೇ ಅಲ್ಲ, ಅದೊಂದು ಹೊರೆ. ಅಂಥ ಕುಟುಂಬಗಳಲ್ಲಿ ಹುಟ್ಟಿದ್ದು ನಮ್ಮ ತಪ್ಪೇನೂ ಅಲ್ಲ’– ನಟ ಅರ್ಜುನ್ ಕಪೂರ್ ಹೀಗೆ ಪ್ರತಿಕ್ರಿಯಿಸಲು ಇರುವ ಕಾರಣ ಒಂದೆರಡಲ್ಲ.

ದಡೂತಿ ದೇಹದ ಕೊಬ್ಬನ್ನೆಲ್ಲ ಕರಗಿಸಿಕೊಂಡು ‘ಇಷ್ಕ್‌ಜಾದೆ’ ಹಿಂದಿ ಸಿನಿಮಾ ಮೂಲಕ ಅವರು ಪದಾರ್ಪಣೆ ಮಾಡಿದಾಗ, ಹಿಂದೆ ಅವರ ಕಾಲೆಳೆದಿದ್ದ ಅನೇಕರು ಹುಬ್ಬೇರಿಸಿದ್ದರು. 50 ಕೆ.ಜಿಯಷ್ಟು ದೇಹತೂಕ ಇಳಿಸಿಕೊಂಡು ಕ್ಯಾಮೆರಾ ಮುಂದೆ ನಿಲ್ಲುವುದು ತಮಾಷೆಯಲ್ಲ. ಹಾಗೆ ನೋಡಿದರೆ ಅರ್ಜುನ್, ರಣವೀರ್‌ ಸಿಂಗ್‌ ಓರಗೆಯವರು.

ಇಬ್ಬರೂ ಬಣ್ಣದ ಲೋಕದಲ್ಲಿ ಛಾಪು ಮೂಡಿಸುವ ಮೊದಲೇ ಪರಿಚಿತರು. ‘ಗುಂಡೇ’ ಸಿನಿಮಾದಲ್ಲಿ ಪೋಟಿಗೆ ಬಿದ್ದಂತೆ ಇಬ್ಬರೂ ಅಭಿನಯಿಸಿದ್ದವರು. ಈಗ ರಣವೀರ್‌ ಸಾಕಷ್ಟು ಮೆಟ್ಟಿಲುಗಳನ್ನು ಏರಿದ್ದರೆ, ಅರ್ಜುನ್‌ ಪದೇ ಪದೇ ಆರೋಗ್ಯದ ಸಮಸ್ಯೆ ಎದುರಿಸಿಯೇ ಕ್ಯಾಮೆರಾ ಕಣ್ಣಿನ ಎದುರು ನಿಲ್ಲಬೇಕಾಗಿ ಬಂದಿದೆ.

ADVERTISEMENT

ಅರ್ಜುನ್‌ ದೇಹ ಭಾರತದ ಬಹುತೇಕ ಯುವಕರಷ್ಟು ಸಹಜವಾಗಿಲ್ಲ. ಅದು ಹೆಚ್ಚು ಅಗಲ. ಎರಡು ಕೆ.ಜಿ ತೂಕ ಹೆಚ್ಚಾದರೂ ಹತ್ತು ಕೆ.ಜಿ ಹೆಚ್ಚಾಗಿಬಿಟ್ಟಿತೇನೋ ಎನ್ನುವಂತೆ ಕಾಣುವ ಕಾಯ. ಕುತ್ತಿಗೆ ಹಾಗೂ ತೋಳುಗಳ ಭಾಗದಲ್ಲಿ ಆಗೀಗ ಯಮಯಾತನೆ ಕಾಣಿಸಿಕೊಳ್ಳುತ್ತದೆ. ಹಾಗಾದಾಗ ಜಿಮ್‌ನಲ್ಲಿ ಬೆವರಿಳಿಸುವುದೂ ಬಲು ಕಷ್ಟ.

‘ತೇವರ್’ ಸಿನಿಮಾದಲ್ಲಿ ಅಭಿನಯಿಸುವಾಗ ನನಗೆ ವಿಪರೀತ ಕುತ್ತಿಗೆ ನೋವಿತ್ತು. ಆ್ಯಕ್ಷನ್ ಸಿನಿಮಾ ಅದಾಗಿದ್ದರಿಂದ ಫಿಟ್‌ ಆಗಿ ಇರುವುದು ಅನಿವಾರ್ಯ. ದಿನವೂ ಪಡಿಪಾಟಲು ಪಡುತ್ತಲೇ ಚಿತ್ರೀಕರಣದ ಸ್ಥಳಕ್ಕೆ ಹೋಗುತ್ತಿದ್ದೆ. ವರ್ಕ್‌ಔಟ್‌ನಿಂದ ಎಲ್ಲೆಲ್ಲಿ ನೋವಿತ್ತು ಎಂದು ಈಗ ನೆನಪಿಸಿಕೊಂಡರೆ ಅಬ್ಬಾ ಎನಿಸುತ್ತದೆ’ ಎನ್ನುತ್ತಾರೆ ಅರ್ಜುನ್.

ಪ್ರತಿಕೂಲ ಪರಿಸ್ಥಿತಿಗಳಲ್ಲೂ ಅರ್ಜುನ್‌ ದೇಹ ದಂಡಿಸುವುದನ್ನು ಬಿಡುವುದಿಲ್ಲ. ಸರಳ ವ್ಯಾಯಾಮವನ್ನು ಇಂಗ್ಲಿಷ್‌ನಲ್ಲಿ ‘ಪೈಲೇಟ್ಸ್‌’ ಎಂದು ಕರೆಯುತ್ತಾರೆ. ಕುತ್ತಿಗೆ ಹಾಗೂ ಭುಜದ ನೋವನ್ನು ಅರ್ಜುನ್‌ ಮೀರತೊಡಗಿದ್ದು ಅಂಥ ವ್ಯಾಯಾಮದಿಂದಲೇ.‘ಎರಡು ದಿನ ವ್ಯಾಯಾಮ ತಪ್ಪಿಸಿದರೂ ನನ್ನ ದೇಹಾಕಾರದಲ್ಲಿ ವ್ಯತ್ಯಾಸ ಗೊತ್ತಾಗುತ್ತದೆ. ಚಿಕ್ಕಂದಿನಿಂದಲೂ ಈ ಸಮಸ್ಯೆಗೆ ಮುಖಾಮುಖಿಯಾಗುತ್ತಲೇ ಬಂದವನು ನಾನು. ಅದಕ್ಕೇ ವಾರಕ್ಕೆ ಆರು ದಿನ ವರ್ಕ್‌ಔಟ್‌ ತಪ್ಪಿಸುವುದಿಲ್ಲ. ಕೆಲವೊಮ್ಮೆ ರಾತ್ರಿ 1 ಗಂಟೆಗೆ ಮನೆಗೆ ತಲುಪುವುದಿದೆ. ಹಾಗಿದ್ದರೂ ಮರುದಿನ ಬೆಳಿಗ್ಗೆ ಲಘು ವ್ಯಾಯಾಮವನ್ನಾದರೂ ಮಾಡದೇ ಇರುವುದಿಲ್ಲ. ಅಷ್ಟೆಲ್ಲ ಮಾಡಿಯೂ ನೋವು ಕಾಣಿಸಿಕೊಂಡಾಗ ದೇಹ ಸ್ಥಿತಿಯಲ್ಲಿ ಏರುಪೇರಾಗುತ್ತದೆ.

‘ನನ್ನ ಮೊದಲ ಆರು ಸಿನಿಮಾಗಳ ಪೈಕಿ ನಾಲ್ಕು ಸಾಹಸಪ್ರಧಾನ. ದೇಹಾಕಾರ ಸಮಪರ್ಕವಾಗಿ ಇರುವಂತೆ ನೋಡಿಕೊಳ್ಳುವುದು, ಸ್ಟಂಟ್‌ಗಳನ್ನು ಮಾಡುವುದು ಅನಿವಾರ್ಯವಿತ್ತು. ಈಗ ಆ ಸಿನಿಮಾಗಳ ಕೆಲವು ದೃಶ್ಯಗಳನ್ನು ನೋಡಿದರೆ ಆಗ ಪಟ್ಟಂಥ ಯಾತನೆ ನೆನಪಾಗುತ್ತದೆ’ ಎನ್ನುವ ಅರ್ಜುನ್‌ ಮಾತಿನಲ್ಲಿ ವಿಷಾದವೂ ಬೆರೆತಿದೆ.ದೀರ್ಘಾವಧಿಯ ನಂತರ ಅರ್ಜುನ್‌ ನಟಿಸಿರುವ ‘ಇಂಡಿಯಾಸ್‌ ಮೋಸ್ಟ್‌ ವಾಂಟೆಡ್’ ಹಿಂದಿ ಸಿನಿಮಾ ಬಿಡುಗಡೆಯಾಗಿದೆ. ವರ್ಷಗಳ ಹಿಂದಿನ ಚಿತ್ರಗಳಲ್ಲಿನ ಅವರ ದೇಹಾಕಾರಕ್ಕೆ ಹೋಲಿಸಿದರೆ ಇದರಲ್ಲಿ ಅವರು ಹೆಚ್ಚು ದಪ್ಪ ಕಾಣುತ್ತಾರೆ. ತಮ್ಮ ದೇಹಾಕಾರಕ್ಕೆ ತಕ್ಕ ಪಾತ್ರಗಳೇ ಸೃಷ್ಟಿಯಾದರೂ ಆಗಬಹುದು ಎನ್ನುವ ನಿರೀಕ್ಷೆಯಲ್ಲಿ ಅವರಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.