ADVERTISEMENT

‘ಅರ್ಜುನ್ ಗೌಡ’ನ ಆಟ ನವೆಂಬರ್‌ನಲ್ಲಿ

​ಪ್ರಜಾವಾಣಿ ವಾರ್ತೆ
Published 26 ಸೆಪ್ಟೆಂಬರ್ 2019, 19:30 IST
Last Updated 26 ಸೆಪ್ಟೆಂಬರ್ 2019, 19:30 IST
   

ಪ್ರಜ್ವಲ್ ದೇವರಾಜ್ ಅಭಿನಯದ ‘ಅರ್ಜುನ್ ಗೌಡ’ ಚಿತ್ರದ ಚಿತ್ರೀಕರಣವು ಬಹುತೇಕ ಪೂರ್ಣಗೊಂಡಿದೆ. ಚಿತ್ರದ ಒಂದೆರಡು ದೃಶ್ಯಗಳ ಚಿತ್ರೀಕರಣ ಮಾತ್ರ ಬಾಕಿ ಇದೆ. ಉಳಿದಿರುವ ಭಾಗಗಳ ಚಿತ್ರೀಕರಣ ವಿದೇಶದಲ್ಲಿ ನಡೆಯಲಿದ್ದು, ನವೆಂಬರ್‌ ತಿಂಗಳಲ್ಲಿ ಚಿತ್ರ ತೆರೆಗೆ ಬರುವ ನಿರೀಕ್ಷೆ ಇದೆ.

ಇದು ರಾಮು ಅವರು ನಿರ್ಮಿಸುತ್ತಿರುವ ಚಿತ್ರ. ಚಿತ್ರದ ಆ್ಯಕ್ಷನ್‌ ಟೀಸರ್‌ಅನ್ನು ಡೈನಾಮಿಕ್ ಸ್ಟಾರ್ ದೇವರಾಜ್ ಬಿಡುಗಡೆ ಮಾಡಿದ್ದರು. ದೇವರಾಜ್ ಅವರ ಕುಟುಂಬಕ್ಕೂ, ರಾಮು ಅವರಿಗೂ ಒಂದು ನಂಟು ಇದೆ. ಹಿಂದೆ, ರಾಮು ನಿರ್ಮಾಣದ ‘ಲಾಕಪ್‌ ಡೆತ್‌’ ಸಿನಿಮಾದಲ್ಲಿ ದೇವರಾಜ್ ಅಭಿನಯಿಸಿದ್ದರು. ಈಗ ಅವರ ಪುತ್ರ ಪ್ರಜ್ವಲ್ ಅವರು ರಾಮು ನಿರ್ಮಾಣದ ಸಿನಿಮಾದಲ್ಲಿ ನಟಿಸುತ್ತಿದ್ದಾರೆ.

ಶಂಕರ್ ಅವರು ಈ ಚಿತ್ರದ ನಿರ್ದೇಶನದ ಹೊಣೆ ಹೊತ್ತಿದ್ದಾರೆ. ಧರ್ಮವಿಶ್ ಸಂಗೀತ ನಿರ್ದೇಶನದ ಈ ಚಿತ್ರಕ್ಕೆ ಜೈಆನಂದ್ ಅವರ ಛಾಯಾಗ್ರಹಣ ಇದೆ.ಪ್ರಜ್ವಲ್ ದೇವರಾಜ್ ಅವರಲ್ಲದೆ, ಪ್ರಿಯಾಂಕ ತಿಮ್ಮೇಶ್, ಸಾಧು ಕೋಕಿಲ, ರೇಖಾ, ಕಡ್ಡಿಪುಡಿ ಚಂದ್ರು, ಅರವಿಂದ್, ದೀಪಕ್ ಶೆಟ್ಟಿ, ಪ್ರಕಾಶ್, ಯಮುನ ಶ್ರೀನಿಧಿ, ಭಜರಂಗಿ ಚೇತನ್ ತಾರಾಬಳಗದಲ್ಲಿ ಇದ್ದಾರೆ.

ADVERTISEMENT

‘ಈ ಸಿನಿಮಾದಲ್ಲಿ ಪ್ರಜ್ವಲ್ ಅವರು ಮೂರು ಗೆಟಪ್‌ಗಳಲ್ಲಿ ಕಾಣಿಸಿಕೊಳ್ಳಲಿದ್ದಾರೆ.ರೊಮ್ಯಾಂಟಿಕ್‌ ಆ್ಯಕ್ಷನ್‌ ಚಿತ್ರ ಇದು. ಸಾಮಾನ್ಯ ಮನುಷ್ಯ ನಾರ್ಮಲ್ ಆಗಿರಬಾರದು. ಬೇರೆ ತರಹವೇ ಇರಬೇಕು ಎಂಬುದೇ ಚಿತ್ರದ ಹೂರಣ’ ಎಂದು ಚಿತ್ರತಂಡ ಈ ಹಿಂದೆಯೇ ತಿಳಿಸಿದೆ.

‘ನನ್ನದು ಒಂಥರಾ ಜಗಮೊಂಡನ ಪಾತ್ರ. ಯಾವುದೇ ಕೆಲಸ ಮಾಡಿದರೂ ಸರಿಯಾಗಿಯೇ ಮಾಡುತ್ತೇನೆ. ಯಾರಿಗೂ ಕೇರ್ ಮಾಡದ ಹುಡುಗ’ ಎಂದು ಪ್ರಜ್ವಲ್ ತಮ್ಮ ಪಾತ್ರದ ಬಗ್ಗೆ ಹೇಳಿದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.