ಪ್ರತಿಷ್ಠೆಗಾಗಿ ಚಿತ್ರೋತ್ಸವ ಸಂಘಟಿಸುವ ಮನಸ್ಥಿತಿ ಬದಲಾಗಬೇಕು. ಸಿನಿಮಾಗಳ ಮೊದಲ (ಪ್ರೀಮಿಯರ್) ಪ್ರದರ್ಶನಕ್ಕೆ ಚಿತ್ರೋತ್ಸವ ವೇದಿಕೆ ಆಗಬಾರದು ಎಂಬ ಅಭಿಪ್ರಾಯ ಈ ಸಲವೂ ಕೇಳಿ ಬಂತು.
––––
ಇತ್ತೀಚೆಗೆ ಪಣಜಿಯಲ್ಲಿ ನಡೆದ 55ನೆಯ ಅಂತರರಾಷ್ಟ್ರೀಯ ಚಲನಚಿತ್ರೋತ್ಸವ ಕಳೆದ ವರ್ಷಕ್ಕಿಂತ ಭಿನ್ನವಾಗಿರಲಿಲ್ಲ. ಕಾನ್ಸ್, ವೆನಿಸ್, ಬರ್ಲಿನ್ ಇತ್ಯಾದಿ ಜಾಗತಿಕ ಚಿತ್ರೋತ್ಸವಗಳ ಮಟ್ಟಕ್ಕೆ ಪಣಜಿ ಚಿತ್ರೋತ್ಸವವನ್ನು ಸಂಘಟಿಸಬೇಕೆಂಬ ಪ್ರಯತ್ನ ಸ್ವಾಗತಾರ್ಹವಾದರೂ, ಪ್ರದರ್ಶನಗೊಳ್ಳುವ ಸಿನಿಮಾಗಳ ಆಯ್ಕೆ ವಿಷಯದಲ್ಲಿ ಹೆಚ್ಚಿನ ಆಸಕ್ತಿ ತೋರುವ ಅಗತ್ಯವಿದೆ. ನ್ಯಾಷನಲ್ ಫಿಲ್ಮ್ ಡೆವಲಪ್‌ಮೆಂಟ್ ಕಾರ್ಪೊರೇಷನ್(ಎನ್‌ಎಫ್‌ಡಿಸಿ) ಇತ್ತ ಕಡೆ ಗಮನ ಹರಿಸಬೇಕು ಎನ್ನುವುದು ಚಿತ್ರೋತ್ಸವಕ್ಕೆ ಬಂದ ಬಹುತೇಕ ಪ್ರತಿನಿಧಿಗಳ ಅನಿಸಿಕೆ.
ಈ ವರ್ಷ ಸಿನಿಮಾ ಪ್ರದರ್ಶನ ತೆರೆಗಳ ಸಂಖ್ಯೆ ಹೆಚ್ಚಾಗಿತ್ತು. ಪಣಜಿ, ಪೊರ್ವರಿಂ ಅಲ್ಲದೆ ಪೋಂಡಾ ಮತ್ತು ಮಡಗಾಂವ್‌ಗಳಲ್ಲಿ ಪ್ರದರ್ಶನಕ್ಕೆ ವ್ಯವಸ್ಥೆ ಮಾಡಿದ್ದರು. ಈ ನಾಲ್ಕೂ ಕೇಂದ್ರಗಳಲ್ಲಿ ನಡೆದ ಎಲ್ಲ ಪ್ರದರ್ಶನಗಳೂ ಹೌಸ್‌ಫುಲ್ ಆಗಿದ್ದವು. ಚಿತ್ರೋತ್ಸವದಲ್ಲಿ ಹೆಚ್ಚಿನ ಸಂಖ್ಯೆಯ ಜನ ಭಾಗಿಯಾದರು ಎನ್ನುವುದು ಸಮಾಧಾನದ ಸಂಗತಿ. ಆದರೆ ಸಿನಿಮಾಗಳನ್ನು ನೋಡಿದವರ ಅಭಿಪ್ರಾಯವೇನು ಎನ್ನುವುದು ಗೊತ್ತಾಗಲಿಲ್ಲ. ಜಾಗತೀಕರಣ, ಭಯೋತ್ಪಾದನೆ, ವಿಶ್ವ ವ್ಯಾಪಿಯಾಗಿರುವ ರಾಜಕೀಯ ಅಸ್ಥಿರತೆ, ಯುದ್ಧ ಭೀತಿ, ಮಾರುಕಟ್ಟೆ ಹಾಗೂ ಸಾಮಾಜಿಕ ವ್ಯವಸ್ಥೆಯಲ್ಲಿನ ಪಲ್ಲಟಗಳನ್ನು ಪರೋಕ್ಷವಾಗಿ ಧ್ವನಿಸುವ ಸಿನಿಮಾಗಳನ್ನು ಸಾಮಾನ್ಯ ಪ್ರತಿನಿಧಿಗಳು ಗ್ರಹಿಸುವುದು ಕಷ್ಟ. ಸಿನಿಮಾ ನೋಡಿ ಹೊರ ಜಗತ್ತನ್ನು ಅರ್ಥ ಮಾಡಿಕೊಳ್ಳುವುದು ಇನ್ನೂ ಕಷ್ಟ. ಬಹುತೇಕ ಸಿನಿಮಾಗಳಲ್ಲಿ ಬದಲಾಗುತ್ತಿರುವ ಸಾಮಾಜಿಕ ವ್ಯವಸ್ಥೆಯ ವಿಭಿನ್ನ ಮುಖಗಳ ಪ್ರತಿಫಲನವಿತ್ತು.
ಭಾರತೀಯ ಪನೋರಮಾ ವಿಭಾಗದಲ್ಲಿ ಮುಖ್ಯವಾಹಿನಿಯ ಕಮರ್ಷಿಯಲ್ ಸಿನಿಮಾಗಳನ್ನು ಆಯ್ಕೆ ಮಾಡುವ ಅಗತ್ಯ ಇಲ್ಲ ಎನ್ನುವುದು ಆಯ್ಕೆ ಸಮಿತಿಗೆ ಅರ್ಥವಾಗುತ್ತಿಲ್ಲ. ಈ ವಿಭಾಗದಲ್ಲಿ ಎಲ್ಲ ಪ್ರಾದೇಶಿಕ ಸಿನಿಮಾಗಳಿಗೂ ಸಮಾನ ಅವಕಾಶ ಸಿಗಬೇಕು ಎನ್ನುವ ಒತ್ತಾಯ ಈ ಸಲವೂ ಕೇಳಿ ಬಂತು. ಎನ್‌ಎಫ್‌ಡಿಸಿ ಮತ್ತು ಆಯ್ಕೆ ಸಮಿತಿಗಳು ಈ ಅಭಿಪ್ರಾಯಗಳನ್ನು ಗಮನಿಸಬೇಕು. ಅತ್ಯುತ್ತಮ ಭಾರತೀಯ ಸಿನಿಮಾಗಳನ್ನು ವಿದೇಶಿ ಸಿನಿಮಾಗಳ ಜತೆಯಲ್ಲಿ ಪ್ರದರ್ಶಿಸಬೇಕು. ಸಿನಿಮಾಗಳ ಆಯ್ಕೆ ಪಾರದರ್ಶಕವಾಗಿರಬೇಕು. ಈ ಸಲ ಚಿತ್ರೋತ್ಸವಕ್ಕೆ ಬಂದ ವಿದೇಶಿ ಪ್ರತಿನಿಧಿಗಳ ಸಂಖ್ಯೆ ಹೆಚ್ಚಿರಲಿಲ್ಲ. ಸಿನಿಮಾಗಳ ಜೊತೆಯಲ್ಲಿ ಬಂದ ಒಬ್ಬಿಬ್ಬರು ತಂತ್ರಜ್ಞರನ್ನು ಹೊರತುಪಡಿಸಿದರೆ ಪ್ರತಿನಿಧಿಗಳ ಸಂಖ್ಯೆ ವಿರಳವಾಗಿತ್ತು. ಭಾರತದಲ್ಲೇ ನೆಲೆಸಿರುವ ವಿದೇಶಿಯರು, ಪ್ರವಾಸಕ್ಕೆ ಬಂದ ವಿದೇಶಿಯರೂ ಚಿತ್ರೋತ್ಸವದತ್ತ ಮುಖ ಮಾಡಲಿಲ್ಲ.
ಗುಣಮಟ್ಟದ ಸಿನಿಮಾಗಳ ಕೊರತೆ
ಚಿತ್ರೋತ್ಸವದಲ್ಲಿ ಪ್ರದರ್ಶನವಾದ 200ಕ್ಕೂ ಹೆಚ್ಚು ಸಿನಿಮಾಗಳ ಪೈಕಿ ಅತ್ಯುತ್ತಮ ಎನ್ನಬಹುದಾದವುಗಳ ಸಂಖ್ಯೆ ವರ್ಷದಿಂದ ವರ್ಷಕ್ಕೆ ಇಳಿಮುಖವಾಗುತ್ತಿದೆ. ಹತ್ತು ಸಿನಿಮಾಗಳನ್ನು ನೋಡಿದರೆ ಮೂರು ಅಥವಾ ನಾಲ್ಕು ಸಿನಿಮಾಗಳು ಇದ್ದುದರಲ್ಲಿ ಉತ್ತಮವಾಗಿರುತ್ತವೆ. ಉಳಿದವು ಸಾಮಾನ್ಯ ಸಿನಿಮಾಗಳು. ಡಿಜಿಟಲ್ ತಂತ್ರಜ್ಞಾನದ ಸಾಧ್ಯತೆಗಳು, ಕೃತಕ ಬುದ್ಧಿಮತ್ತೆ ಇತ್ಯಾದಿಗಳನ್ನು ಬಳಸಿಕೊಂಡು ಉತ್ತಮ ಸಿನಿಮಾಗಳನ್ನು ನಿರ್ಮಿಸುವ ಪ್ರಯತ್ನ ನಡೆಯುತ್ತಿದೆ. ಆದರೂ ಗುಣಮಟ್ಟದ ಸಿನಿಮಾಗಳ ನಿರ್ಮಾಣ ಆಗುತ್ತಿಲ್ಲ. ಹೀಗೇಕೆ? ಜಾಗತಿಕ ಸಿನಿಮಾಗಳ ಗುಣಮಟ್ಟದಲ್ಲೂ ಕುಸಿತ ಕಾಣುತ್ತಿದೆ ಎಂಬ ಪ್ರಶ್ನೆಯನ್ನು ಪ್ರತಿನಿಧಿಗಳು ಸಣ್ಣಮಟ್ಟದಲ್ಲಿ ಅಲ್ಲಲ್ಲಿ ಚರ್ಚಿಸಿದರು. ಹಾಗೆ ನೋಡಿದರೆ ಇದೊಂದು ಬಗೆಯ ಗೊಣಗಾಟ. ಪಣಜಿ ಚಿತ್ರೋತ್ಸವದ ಗುಣಮಟ್ಟವೂ ವರ್ಷದಿಂದ ವರ್ಷಕ್ಕೆ ಕುಸಿಯುತ್ತದೆ. ಕೋಟ್ಯಂತರ ರೂಪಾಯಿ ಖರ್ಚು ಮಾಡಿ ದೇಶದ ಉದ್ದಗಲದಲ್ಲಿ ಚಿತ್ರೋತ್ಸವಗಳನ್ನು ನಡೆಸುವ ಅಗತ್ಯವಿದೆಯೇ? ಎಂಬುದು ಪ್ರಶ್ನೆ.
ಚಿತ್ರೋತ್ಸವದ ಅಂಗವಾಗಿ ವ್ಯವಸ್ಥೆ ಮಾಡಿದ್ದ ಸಂವಾದಗಳಲ್ಲಿ ಸಿನಿಮಾ ರಂಗದಲ್ಲಿ ಮಹಿಳೆಯರಿಗೆ ರಕ್ಷಣೆ, ಕಥಾ ನಿರೂಪಣೆ, ತಂತ್ರಜ್ಞಾನದ ಹೊಸ ಆವಿಷ್ಕಾರಗಳು, ಸಿನಿಮಾ ನಿರ್ಮಾಣದಲ್ಲಿ ಕೃತಕ ಬುದ್ಧಿಮತ್ತೆಯ ಬಳಕೆ, ಅನಿಮೇಷನ್ ಹಾಗೂ ಜನ್ಮ ಶತಮಾನೋತ್ಸದ ಆಚರಣೆ ನಡೆಯುತ್ತಿರುವ ತೆಲುಗು ನಟ ಅಕ್ಕಿನೇನಿ ನಾಗೇಶ್ವರ ರಾವ್, ಬೆಂಗಾಲಿ ಚಿತ್ರರಂಗದ ತಪನ್ ಸಿನ್ಹಾ ಅವರ ಸಿನಿಮಾ ಜೀವನ ಮತ್ತು ಸಾಧನೆಗಳನ್ನು ಮೆಲುಕು ಹಾಕುವ ಚರ್ಚೆಗಳು ನಡೆದವು. ಭಾರತೀಯ ಸಿನಿಮಾಗಳಿಗೆ ಜಾಗತಿಕ ಮಾರುಕಟ್ಟೆ ಮತ್ತು ಹಣಕಾಸಿನ ಪ್ರಾಯೋಜಕತ್ವ ಒದಗಿಸಿ ಕೊಡುವ ಫಿಲ್ಮ್ ಬಜಾರ್ ಸಹ ಯಶಸ್ವಿಯಾಯಿತು.
ಗಮನ ಸೆಳೆದ ಶೆಫರ್ಡ್
ಚಿತ್ರೋತ್ಸವದಲ್ಲಿ ಹೆಚ್ಚು ಸದ್ದು ಮಾಡಿದ್ದು ಮತ್ತು ಮೆಚ್ಚುಗೆ ಗಳಿಸಿದ್ದು ಕೆನಡಾ ದೇಶದ ಸಿನಿಮಾ ‘ಶೆಫರ್ಡ್’. ಪತ್ರಿಕೆಯೊಂದರ ಜಾಹೀರಾತು ನೋಡಿದ ಮಥ್ಯಾಸ್ ಎಂಬ ಯುವಕ ಕುರಿ ಕಾಯುವ ವೃತ್ತಿಗೆ ಸೇರುತ್ತಾನೆ. ಕುರಿ ಸಾಕಣೆಯಲ್ಲಿ ತರಬೇತಿ ಪಡೆದು ದೊಡ್ಡ ಮಂದೆಯನ್ನು ನಿರ್ವಹಿಸುವ ಜವಾಬ್ದಾರಿ ಹೊರುತ್ತಾನೆ. ವೃತ್ತಿಯಲ್ಲಿನ ಅವನ ಕಾರ್ಯಕ್ಷಮತೆ ಮತ್ತು ಬದ್ಧತೆ ಹಾಗೂ ಪ್ರಕೃತಿಯೊಂದಿಗಿನ ಅನುಸಂಧಾನ, ಎದುರಾಗುವ ಅಡಚಣೆಗಳನ್ನು ಕಟ್ಟಿಕೊಡುತ್ತ, ಶತಮಾನಗಳಷ್ಟು ಹಳೆಯ ಸಾಂಪ್ರದಾಯಿಕ ವೃತ್ತಿಯ ಮೇಲೆ ‘ಶೆಫರ್ಡ್’ ಬೆಳಕು ಚೆಲ್ಲುತ್ತದೆ. ಪರ್ವತ ಪರಿಸರದಲ್ಲಿ ನೂರಾರು ಕುರಿಗಳ ಮಂದೆಯನ್ನು ಮುನ್ನಡೆಸುವ ದೃಶ್ಯಗಳು ಈ ಸಿನಿಮಾಕ್ಕೆ ದೃಶ್ಯ ಭವ್ಯತೆಯನ್ನು ತಂದುಕೊಟ್ಟಿವೆ.
‘ಐ ಆ್ಯಮ್ ನೆವೆಂಕಾ’ (ಸ್ಪೇನ್) ಮಹಿಳೆಯರ ಮೇಲಿನ ಲೈಂಗಿಕ ದೌರ್ಜನ್ಯದ ಕಥೆಯನ್ನು ಕಟ್ಟಿಕೊಡುವ ಸಿನಿಮಾ. ಪೊನ್‌ಫೆರಡಾ ನಗರದ ಮೇಯರ್ ತನ್ನ ಪಕ್ಷದ ಸದಸ್ಯೆಯೊಬ್ಬಳನ್ನು ಲೈಂಗಿಕವಾಗಿ ಶೋಷಿಸುವ ಸಂದರ್ಭಗಳನ್ನು ನಾಟಕೀಯವಾಗಿ ಅನಾವರಣಗೊಳಿಸುವ ಸಿನಿಮಾ. 2003ರಲ್ಲಿ ನಡೆದ ನೈಜ ಘಟನೆ ಕುರಿತದ್ದು. ಈ ಪ್ರಕರಣದ ಸಂತ್ರಸ್ತೆ ನೆವೆಂಕಾಗೆ ಜನ ಮತ್ತು ನ್ಯಾಯಾಲಯಗಳು ಒತ್ತಾಸೆಯಾಗಿ ನಿಲ್ಲುತ್ತವೆ. ಆರೋಪಿಗೆ ಶಿಕ್ಷೆ ಆಗುತ್ತದೆ.
ನಿರ್ದೇಶಕರ ಚೊಚ್ಚಲ ಸಿನಿಮಾ ವಿಭಾಗದಲ್ಲಿ ಪ್ರದರ್ಶನವಾದ ರೊಮಾನಿಯಾ ದೇಶದದ ‘ನ್ಯೂ ಇಯರ್ ದಟ್ ನೆವರ್ ಕೇಮ್’, ಅಮೆರಿಕದ ಸಾರಾ ಫ್ರಿಡ್‌ಲ್ಯಾಂಡ್ ನಿರ್ದೇಶನದ ‘ಫೆಮಿಲಿಯರ್ ಟಚ್’, ತೆಲುಗಿನ ನಂದಕಿಶೋರ್ ಏಮನಿ ನಿರ್ದೇಶನದ ‘35 ಚಿನ್ನ ಕಥಾಕಾದು’, ಶಶಿ ಚಂದ್ರಕಾಂತ್ ಖಂಡಾರೆ ನಿರ್ದೇಶನದ ಮರಾಠಿ ಸಿನಿಮಾ ‘ಜಿಪ್ಸಿ‘ ಅಲ್ಲದೆ ಪನೋರಮಾ ವಿಭಾಗದಲ್ಲಿದ್ದ ಕನ್ನಡದ ‘ಕೆರೆಬೇಟೆ’, ‘ಮಿಕ್ಕ ಬಣ್ಣದ ಹಕ್ಕಿ’ ಸಿನಿಮಾಗಳೂ ಗಮನ ಸೆಳೆದವು.
ನಿರ್ದೇಶಕಿಯರ ದೃಢ ಹೆಜ್ಜೆಗಳು...
ಈ ವರ್ಷ ಜಾಗತಿಕ ಸಿನಿಮಾರಂಗದಲ್ಲಿ ಮಹಿಳೆಯರ ಸಾಧನೆ ಗಮನಾರ್ಹ. ಪಣಜಿ ಚಿತ್ರೋತ್ಸವದ ಸ್ಪರ್ಧಾ ವಿಭಾಗದಲ್ಲಿ ಪ್ರದರ್ಶನವಾದ ಹದಿನೈದು ಸಿನಿಮಾಗಳ ಪೈಕಿ ಎಂಟನ್ನು ನಿರ್ದೇಶಿಸಿದವರು ಮಹಿಳೆಯರು. ಇವುಗಳಲ್ಲಿ ಮೂರ‍್ನಾಲ್ಕು ಅತ್ಯುತ್ತಮವಾಗಿದ್ದವು. ಹೆಚ್ಚು ಗಮನಸೆಳೆದ ಸಿನಿಮಾಗಳೆಂದರೆ ಸ್ಪೇನ್ ದೇಶದ ಇಸಿಯಾರ್ ಬೊಲ್ಲೈನ್ ನಿರ್ದೇಶನದ ‘ಐ ಆ್ಯಮ್ ನೆವೆಂಕಾ’ ಟರ್ಕಿ ದೇಶದ ಬೆಲ್ಕಿಸ್ ಬ್ಯಾರಕ್ ನಿರ್ದೇಶನದ ‘ಗುಲಿಝಾರ್’ ಇರಾನ್‌ನ ಮನ್‌ಜೆಹ್ ಹೆಕ್ಮತ್ ಮತ್ತು ಫಯೀಜ್ ಅಝೀಜ್‌ಖಾನಿ ನಿರ್ದೇಶನದ ‘ಫಿಯರ್ ಆ್ಯಂಡ್ ಟ್ರೆಂಬ್ಲಿಂಗ್’ ಕೆನಡಾದ ಸೋಫಿ ಡೆರಾಸ್ಪೆ ನಿರ್ದೇಶನದ ‘ಶೆಫರ್ಡ್’ ಫ್ರಾನ್ಸ್‌ನ ಲೂಯಿಸ್ ಕರ‍್ವೋಸಿಯೆರ್ ನಿರ್ದೇಶನದ ‘ಹೋಲಿ ಕೌ’. ಯೂರೋಪಿನ ಬಾಲ್ಟಿಕ್ ಪ್ರಾಂತ್ಯದ ಪುಟ್ಟ ದೇಶ ಲಿಥುವೇನಿಯಾದ ಸೌಲೆ ಬಿಲಿಯುವೈಟ್ ನಿರ್ದೇಶಿಸಿದ ಚೊಚ್ಚಲ ಚಿತ್ರ ‘ಟಾಕ್ಸಿಕ್’ ಚಿತ್ರೋತ್ಸವದ ಅತ್ಯುತ್ತಮ ಸಿನಿಮಾ ಪುರಸ್ಕಾರಕ್ಕೆ (₹40 ಲಕ್ಷ) ಪಾತ್ರವಾಗುತ್ತದೆ ಎಂದು ಯಾರೂ ಊಹಿಸಿರಲಿಲ್ಲ. ಅದೇನೇ ಇರಲಿ ಜಾಗತಿಕ ಸಿನಿಮಾ ರಂಗದಲ್ಲಿ ನಿರ್ದೇಶಕಿಯರು ದೃಢವಾದ ಹೆಜ್ಜೆ ಗುರುತುಗಳನ್ನು ಮೂಡಿಸುತ್ತಿದ್ದಾರೆ. ಈ ಬೆಳವಣಿಗೆ ಮುಂದಿನ ವರ್ಷಗಳಲ್ಲಿ ಭಾರತೀಯ ಸಿನಿಮಾದ ಪ್ರತಿಭಾವಂತೆಯರಿಗೆ ಉತ್ತೇಜನ ಆಗಬಹುದು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.