ಬೆಂಗಳೂರು: ಪಾರ್ವತಮ್ಮ ರಾಜ್‍ಕುಮಾರ್ ಹುಟ್ಟುಹಾಕಿದ ಚಲನಚಿತ್ರ ನಿರ್ಮಾಣ ಸಂಸ್ಥೆ 'ಶ್ರೀ ವಜ್ರೇಶ್ವರಿ ಕಂಬೈನ್ಸ್' ಇದೀಗ 50ರ ಸಂಭ್ರಮದಲ್ಲಿದೆ. ಈ ವಿಶೇಷ ಸಂದರ್ಭದಲ್ಲಿ ಅಶ್ವಿನಿ ಪುನೀತ್ ರಾಜ್‌ಕುಮಾರ್ ಅವರು ಸಾಮಾಜಿಕ ಮಾಧ್ಯಮದಲ್ಲಿ ವಿಡಿಯೊವೊಂದನ್ನು ಹಂಚಿಕೊಂಡಿದ್ದಾರೆ.
'1975ರಲ್ಲಿ ಸ್ಥಾಪನೆಯಾದ ಶ್ರೀ ವಜ್ರೇಶ್ವರಿ ಕಂಬೈನ್ಸ್ ಸಂಸ್ಥೆಯ ಭವ್ಯ ಪರಂಪರೆಗೆ 50 ವರ್ಷಗಳ ಸಂಭ್ರಮಾಚರಣೆ. ಈ ಪಯಣದ ಪ್ರತಿಯೊಂದು ನೆನಪು, ಪ್ರತಿಯೊಂದು ಮೈಲಿಗಲ್ಲು. ಇಂದಿಗೂ ಜೀವಂತವಾಗಿದೆ' ಎಂದು ಅವರು ಇನ್‌ಸ್ಟಾಗ್ರಾಮ್‌ನಲ್ಲಿ ಬರೆದುಕೊಂಡಿದ್ದಾರೆ.
ವಜ್ರೇಶ್ವರಿ ಕಂಬೈನ್ಸ್ ಜೊತೆಗೆ ನಿರ್ಮಾಪಕಿ ಪಾರ್ವತಮ್ಮ ರಾಜ್‌ಕುಮಾರ್, ಪೂರ್ಣಿಮಾ ಎಂಟರ್‌ಪ್ರೈಸಸ್, ದಾಕ್ಷಾಯಿಣಿ ಕಂಬೈನ್ಸ್ ಹೆಸರಿನಲ್ಲಿ ನಿರ್ಮಾಣ ಸಂಸ್ಥೆಗಳನ್ನೂ ಹುಟ್ಟುಹಾಕಿದ್ದರು. ಈ ಸಾಧನೆ ಬಗ್ಗೆ ಪುನೀತ್ ಪತ್ನಿ ಅಶ್ವಿನಿ ವಿಶೇಷ ವಿಡಿಯೊವನ್ನು ಹಂಚಿಕೊಂಡಿದ್ದಾರೆ.
ವಿಡಿಯೊದಲ್ಲಿ ಪಾರ್ವತಮ್ಮ ರಾಜ್‌ಕುಮಾರ್ ಅವರ ಮಾತುಗಳನ್ನು ಕೇಳಬಹುದು. ನನ್ನ ಐವರು ಮಕ್ಕಳು ನನ್ನ ಕಣ್ಣುಗಳಿದ್ದಂತೆ. ನನಗೆ 4 ಮಕ್ಕಳು ಹುಟ್ಟಿದ ಬಳಿಕ ಚಿತ್ರ ನಿರ್ಮಾಣಕ್ಕೆ ಬಂದೆ. ಪುನೀತ್ 25 ದಿನಗಳ ಮಗುವಾಗಿದ್ದಾಗ ಅವನಿಂದಲೇ ಕ್ಯಾಮೆರಾ ಸ್ವಿಚ್ ಆನ್ ಮಾಡಿಸಿದ್ದೆ ಎಂದು ಪಾರ್ವತಮ್ಮ ಹೇಳಿರುವುದು ವಿಡಿಯೊದಲ್ಲಿದೆ.
ಬಳಿಕ ಅಶ್ವಿನಿ ಮಾತನಾಡಿದ್ದು, ಅಮ್ಮ, ಅಪ್ಪಾಜಿ ಕೇವಲ ಸಿನಿಮಾಗಳನ್ನು ನಿರ್ಮಾಣ ಮಾಡಲಿಲ್ಲ. ಚಂದನವನದ ಪರಂಪರೆಯನ್ನು ಎತ್ತಿ ಹಿಡಿದರು. ಅವರು ನಿರ್ಮಿಸಿದ 86 ಸಿನಿಮಾಗಳಲ್ಲಿ 75 ಸಿನಿಮಾಗಳು ಹಿಟ್ ಆದವು. ಆನಂದ್' ಆಗಿ ಬಂದ ಶಿವಣ್ಣ, ಚಿರಂಜೀವಿ ಸುಧಾಕರ ಆಗಿ ಬಂದ ರಾಘಣ್ಣ, 'ಅಪ್ಪು' ಆಗಿ ಬಂದ ನನ್ನ ಅಪ್ಪು.. ಸಿನಿಮಾಗಳು ಇತಿಹಾಸ ಆಯ್ತು. ಜೊತೆಗೆ ಹೆಸರುಗಳು ಶಾಶ್ವತವಾಗಿ ಅಚ್ಚಳಿಯದೇ ಉಳಿಯಿತು. ಹಾಗೆಯೇ ಸಿದ್ದಾರ್ಥ ಆಗಿ ವಿನಯ್, ಈಗ ಎಕ್ಕ ಆಗಿ ಯುವ.. ವಜೇಶ್ವರಿ ಬರೀ ನಮ್ಮ ಪರಿವಾರದ ಸಂಸ್ಥೆ ಮಾತ್ರವಲ್ಲ. ಇದು ಎಲ್ಲಾ ಅಭಿಮಾನಿಗಳು, ತಂತ್ರಜ್ಞರು, ನಟ, ನಟಿಯರು ಕಟ್ಟಿರುವ ಕನಸಿನ ಅರಮನೆ ವಜೇಶ್ವರಿ ಕಂಬೈನ್ಸ್ ಎಂದು ಹೇಳಿದ್ದಾರೆ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.