ADVERTISEMENT

ಬಿಡುಗಡೆಯ ಹೊಸ್ತಿಲಿನಲ್ಲಿ ‘ರಾಧಾ ಸರ್ಚಿಂಗ್ ರಮಣ ಮಿಸ್ಸಿಂಗ್’

​ಪ್ರಜಾವಾಣಿ ವಾರ್ತೆ
Published 18 ಜೂನ್ 2020, 9:44 IST
Last Updated 18 ಜೂನ್ 2020, 9:44 IST
ಸಂಜನಾ ಬುರ್ಲಿ ಮತ್ತು ರಾಘವ್‌
ಸಂಜನಾ ಬುರ್ಲಿ ಮತ್ತು ರಾಘವ್‌   

‘ರಾಧಾ ಸರ್ಚಿಂಗ್ ರಮಣ ಮಿಸ್ಸಿಂಗ್’ ಚಿತ್ರದ ಚಿತ್ರೀಕರಣ ಮುಗಿದಿದ್ದು ಸದ್ಯ ಚಿತ್ರೀಕರಣೋತ್ತರ ಕೆಲಸಗಳು ಭರದಿಂದ ನಡೆಯುತ್ತಿವೆಯಂತೆ. ಡಿಟಿಎಸ್‌ ಮತ್ತು ಸಿಜಿ ಕೆಲಸಗಳನ್ನು ಕೈಗೆತ್ತಿಕೊಂಡಿದ್ದು, ಸದ್ಯದಲ್ಲೇ ಚಿತ್ರ ಬಿಡುಗಡೆಯ ಹಂತಕ್ಕೆ ಬರಲಿದೆ. ಚಿತ್ರ ಬಿಡುಗಡೆಯ ದಿನಾಂಕ ನಿಗದಿಪಡಿಸಲು ಲಾಕ್‌ಡೌನ್‌ ತೆರವಾಗುವುದನ್ನು ಎದುರು ನೋಡುತ್ತಿದ್ದೇವೆ ಎನ್ನುತ್ತಾರೆ ಚಿತ್ರದ ನಿರ್ದೇಶಕ ಎಂ.ಎನ್‌.ಶ್ರೀಕಾಂತ್‌.

ಚಿತ್ರರಂಗವೇ ಪುರುಷ ಪ್ರಧಾನವಾಗಿದೆ. ಪುರುಷ ಪ್ರಧಾನ ಚಿತ್ರಗಳೇ ಹೆಚ್ಚುಬರುತ್ತಿವೆ. ಮಹಿಳಾ ಪ್ರಧಾನಚಿತ್ರಗಳ ಸಂಖ್ಯೆ ಕಡಿಮೆ ಎಂದು ಮಾತಿಗಾರಂಭಿಸಿದ ಮೈಸೂರಿನವರಾದ ಶ್ರೀಕಾಂತ್‌,‘ರಾಧಾ ಸರ್ಚಿಂಗ್ ರಮಣ ಮಿಸ್ಸಿಂಗ್’ ಚಿತ್ರ ಮಹಿಳಾ ಪ್ರಧಾನವಾಗಿದೆ. ಇದೊಂದು ಅಂತರ್‌ಧರ್ಮೀಯ ಪ್ರೇಮಕಥೆಯ ಚಿತ್ರ. ನಾಯಕ ಹಿಂದೂ. ನಾಯಕಿ ಕ್ರೈಸ್ತೆ. ಕಾಲೇಜಿನಲ್ಲಿ ಇಬ್ಬರ ನಡುವೆ ಪ್ರೀತಿ ಅರಳುತ್ತದೆ. ಈ ಪ್ರೇಮ ಜೋಡಿಗಳ ಮೇಲೆ ದುರುಳ ವಿದ್ಯಾರ್ಥಿಗಳ ಕಣ್ಣು ಬೀಳುತ್ತದೆ. ನಾಯಕನನ್ನುದುರಳ ವಿದ್ಯಾರ್ಥಿಗಳ ಗುಂಪು ಅಪಹರಿಸುತ್ತದೆ. ಈ ಅಪಹರಣಕ್ಕೆ ನಿಜವಾದ ಕಾರಣವೇನು? ‘ಮಿಸ್ಸಿಂಗ್‌’ ಆದ ರಮಣನನ್ನು ‘ಸರ್ಚಿಂಗ್‌’ ಮಾಡಲು ರಾಧಾ ಪಡುವ ಪಾಡೇನು? ಏನೆಲ್ಲಾ ಸವಾಲು ಎದುರಿಸುತ್ತಾಳೆ, ಹೇಗೆಲ್ಲಾ ಹೋರಾಟ ನಡೆಸುತ್ತಾಳೆ ಎನ್ನುವ ಕಥೆಯನ್ನು ‌ಸಸ್ಪೆನ್ಸ್‌ ಮತ್ತು ಥ್ರಿಲ್ಲರ್‌ ಮಾದರಿಯಲ್ಲಿ ಹೇಳಿದ್ದೇನೆ ಎಂದು ಮಾತು ವಿಸ್ತರಿಸಿದರು.

ಮಂಗಳೂರು, ಮೈಸೂರು, ಬೆಂಗಳೂರು, ಹಾಸನ ಕಡೆಗಳಲ್ಲಿ 60 ದಿನಗಳ ಕಾಲ ಚಿತ್ರೀಕರಣ ನಡೆದಿದೆ. ಮೂರು ಭಾಷೆಗಳ ಚಿತ್ರರಂಗದಲ್ಲಿಕೆಲಸ ಮಾಡಿರುವ ಅನುಭವ ಸ್ವತಂತ್ರ ನಿರ್ದೇಶನದ ಆತ್ಮವಿಶ್ವಾಸವನ್ನು ಹೆಚ್ಚಿಸಿದೆ. ಇದು ನನ್ನ ಮೊದಲ ನಿರ್ದೇಶನದ ಚಿತ್ರ. ಸಹಜವಾಗಿಯೇ ಚಿತ್ರದ ಮೇಲೆ ಅಪಾರ ನಿರೀಕ್ಷೆಗಳಿವೆ.ಚಿತ್ರದ ರಚನೆ ಮತ್ತು ಸಾಹಸ ನಿರ್ದೇಶನವನ್ನು ಯಶಸ್ವಿಯಾಗಿ ನಿಭಾಯಿಸಿರುವ ಹೆಮ್ಮೆಯಿದೆ ಎನ್ನುವ ಮಾತು ಸೇರಿಸಿದರು.

ADVERTISEMENT

ಸೆಲಬ್ರಿಟಿ ಫೋಟೋಗ್ರಾಫರ್ ಆಗಿ ಗುರುತಿಸಿಕೊಂಡಿರುವ ರಾಘವ್‍ ನಾಯಕನಾಗಿ ಈ ಚಿತ್ರದ ಮೂಲಕ ಸ್ಯಾಂಡಲ್‌ವುಡ್‌ಗೆ ಕಾಲಿಡುತ್ತಿದ್ದಾರೆ. ‘ವಿಕೆಂಡ್‍’ ಚಿತ್ರದಲ್ಲಿ ನಾಯಕಿಯಾಗಿ ನಟಿಸಿದ್ದ ಸಂಜನಾ ಬುರ್ಲಿ ನಾಯಕಿಯಾಗಿ ನಟಿಸಿದ್ದಾರೆ. ಅವರುಪಾತ್ರಕ್ಕಾಗಿ ಬುಲೆಟ್ ಬೈಕ್‌ ಸವಾರಿ ಕಲಿತು, ಗಟ್ಟಿಗಿತ್ತಿಯಾಗಿ ಕಾಣಿಸಿಕೊಂಡಿದ್ದಾರಂತೆ.

ತೆಲುಗಿನ ಗೋಪಿನಾಥ್‍ ಭಟ್, ಯಮುನಾ ಶ್ರೀನಿಧಿ, ರೇಖಾ, ಜಾನ್, ಪ್ರದೀಪ್‍ ತಿಪಟೂರು, ಚಿರಾಗ್‍ ಗೌಡ, ಗುರುಹೆಗಡೆ ತಾರಾಗಣದಲ್ಲಿದ್ದಾರೆ.

ಮೈಸೂರು ಮೂಲದವರಾದ ಅಮೆರಿಕನ್‌ ಪ್ರಜೆ ಯಶಸ್ವಿ ಶಂಕರ್ ಅವರು ಈ ಚಿತ್ರಕ್ಕೆ ಬಂಡವಾಳ ಹೂಡಿದ್ದಾರೆ. ಟಾಲಿವುಡ್‍ನ ನವನೀತ್‍ಚರಿ ಸಂಗೀತ ಸಂಯೋಜಿಸಿದ್ದು,ಸಂತೋಷ್‍ ನಾಯಕ್ ಸಾಹಿತ್ಯ ಬರೆದಿರುವನಾಲ್ಕು ಹಾಡುಗಳಿಗೆ ಸೋನುನಿಗಮ್, ಅನುರಾಧಾ ಭಟ್ ಮತ್ತು ನವೀನ್‍ ಸಜ್ಜು ಧ್ವನಿಯಾಗಿದ್ದಾರೆ. ಛಾಯಾಗ್ರಹಣ ವಿಶ್ವಜೀತ್‍ರಾವ್, ಸಂಕಲನ ವಿಜೇತ್‍ಚಂದ್ರ, ನೃತ್ಯ ಕಲೈ-ಹರಿಕೃಷ್ಣ ನಿರ್ವಹಿಸಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.