ADVERTISEMENT

ಕೋವಿಡ್‌ ನಿಯಮ; ಚಿತ್ರಮಂದಿರಗಳಿಗೂ ವಿನಾಯಿತಿಗಾಗಿ ಸಿಎಂ ಜತೆ ಚರ್ಚಿಸುವೆ: ಶಿವಣ್ಣ

​ಪ್ರಜಾವಾಣಿ ವಾರ್ತೆ
Published 30 ಜನವರಿ 2022, 12:22 IST
Last Updated 30 ಜನವರಿ 2022, 12:22 IST
ನಟ ಶಿವರಾಜ್ ಕುಮಾರ್
ನಟ ಶಿವರಾಜ್ ಕುಮಾರ್   

ಮೈಸೂರು: ಎಲ್ಲಾ ಕ್ಷೇತ್ರಗಳಿಗೂ ಕೋವಿಡ್‌ ಕಠಿಣ ನಿಯಮಗಳಿಂದ ವಿನಾಯಿತಿ ನೀಡಿ ಚಿತ್ರಮಂದಿರಗಳಿಗೆ ಮಾತ್ರ ನೀಡಿಲ್ಲ. ಚಿತ್ರಮಂದಿರಗಳಿಗೂ ವಿನಾಯಿತಿ ನೀಡಬೇಕು ಎಂದು ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಅವರಲ್ಲಿ ಮನವಿ ಮಾಡುವೆ ಎಂದು ನಟ ಶಿವರಾಜ್ ಕುಮಾರ್ ತಿಳಿಸಿದರು.

‘ಮುಖ್ಯಮಂತ್ರಿ ಅವರು ಈ ಹಿಂದೆ ಸಾಕಷ್ಟು ಬರಿ ಚಿತ್ರೋದ್ಯಮಕ್ಕೆ ಅನುಕೂಲ ಮಾಡಿಕೊಟ್ಟಿದ್ದಾರೆ. ಈ ಬಾರಿಯೂ ನಮ್ಮ ಮನವಿಯನ್ನು ಪುರಸ್ಕರಿಸುತ್ತಾರೆ ಎಂಬ ವಿಶ್ವಾಸ ಇದೆ’ ಎಂದು ಇಲ್ಲಿ ಭಾನುವಾರ ಸುದ್ದಿಗಾರರಿಗೆ ಹೇಳಿದರು.

ಕೋವಿಡ್‌ ಜತೆಯಲ್ಲೇ ಬದುಕುಬೇಕಾದ ಅನಿವಾರ್ಯತೆ ಈಗ ಎದುರಾಗಿದೆ. ಅದಕ್ಕೆ ತಕ್ಕಂತಹ ವ್ಯವಸ್ಥೆಯನ್ನು ಎಲ್ಲ ಕ್ಷೇತ್ರಗಳಲ್ಲಿಯೂ ರೂಪಿಸಿಕೊಳ್ಳಬೇಕಿದೆ ಎಂದರು.

ADVERTISEMENT

‘ಪುನೀತ್‌ ರಾಜಕುಮಾರ್‌ ನಿಧನ ನೆನೆಸಿಕೊಂಡಾಗಲೆಲ್ಲ ನಮ್ಮ ಧ್ವನಿಯೇ ಬದಲಾಗುತ್ತದೆ. ಆ ನೋವನ್ನು ಸಂಪೂರ್ಣವಾಗಿ ಹೇಳಿಕೊಳ್ಳುವ ಸ್ಥಿತಿಯಲ್ಲಿಯೂ ನಾವಿಲ್ಲ. ಆ ನೋವಿನ ಜತೆಯೇ ಬದುಕು ಸಾಗಿಸುತ್ತಿದ್ದೇವೆ. ಪುನೀತ್‌ನದು ಅದ್ಭುತ ಆತ್ಮವಾಗಿರುವುದರಿಂದಲೆ ಜನರು ಇಂದಿಗೂ ಆತನನ್ನು ನೆನಸಿಕೊಳ್ಳುತ್ತಾರೆ. ಆತ ಗಳಿಸಿರುವ ಪ್ರೀತಿ ಕಂಡು ನನಗೆ ಹೆಮ್ಮೆಯಾಗುತ್ತಿದೆ’ ಎಂದು ಭಾವುಕರಾದರು.

‘ಇಲ್ಲಿನ ಶಕ್ತಿಧಾಮದ ಜವಾಬ್ದಾರಿ ನಮ್ಮ ಮೇಲಿದೆ. ಅಲ್ಲಿಗೆ ಬಂದು ಮಕ್ಕಳೊಡನೆ ಬೆರೆತರೆ ಮನಸ್ಸಿಗೆ ಬದಲಾವಣೆ ಉಂಟಾಗುತ್ತದೆ. ಅಲ್ಲೊಂದು ಶಾಲೆ ತೆರೆಯಲು ಅನುಮತಿ ಸಿಗುವ ವಿಶ್ವಾಸ ಇದೆ’ ಎಂದು ಹೇಳಿದರು.

ಇದಕ್ಕೂ ಮುನ್ನ ಅವರು ಇಲ್ಲಿನ ದಟ್ಟಗಳ್ಳಿಯಲ್ಲಿ ನಯನ ಕುಮಾರ‍್ಸ‍್ ಮಲ್ಟಿಸ್ಪೆಷಾಲಿಟಿ ಆಸ್ಪತ್ರೆ ಉದ್ಘಾಟಿಸಿ, ‘ಆಕಾಶವೇ ಬೀಳಲಿ ಮೇಲೆ ನಾನೆಂದು ನಿಮ್ಮವನು’ ಎಂಬ ಹಾಡು ಹಾಡುವ ಮೂಲಕ ಸಭಿಕರನ್ನು ರಂಜಿಸಿದರು.

‘ಪ್ರಾಣ ಎಂಬುದು ಎಲ್ಲರಿಗೂ ಒಂದೇ. ಇದನ್ನು ಅರಿತು ಬಡವರು ಮತ್ತು ಶ್ರೀಮಂತರು ಇಬ್ಬರಿಗೂ ಒಂದೇ ಬಗೆಯ ಚಿಕಿತ್ಸೆ ನೀಡಬೇಕು’ ಎಂದು ಕಿವಿಮಾತು ಹೇಳಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.