ಇಬ್ರಾಹಿಂ ಹಾಗೂ ಸೈಫ್ ಅಲಿ ಖಾನ್
ಪಿಟಿಐ ಚಿತ್ರ
ಮುಂಬೈ: ಚಾಕು ದಾಳಿಯಲ್ಲಿ ತೀವ್ರವಾಗಿ ಗಾಯಗೊಂಡ ಬಾಲಿವುಡ್ ನಟ ಸೈಫ್ ಅಲಿ ಖಾನ್ ಅವರನ್ನು ಅವರ ಹಿರಿಯ ಪುತ್ರ ಇಬ್ರಾಹಿಂ ಆಟೋ ರಿಕ್ಷಾದಲ್ಲಿ ಕರೆತಂದು ಲೀಲಾವತಿ ಆಸ್ಪತ್ರೆಗೆ ದಾಖಲಿಸಿದ ಪರಿಣಾಮ, ಸಕಾಲದಲ್ಲಿ ಅವರಿಗೆ ಚಿಕಿತ್ಸೆ ಸಿಗಲು ಸಾಧ್ಯವಾಗಿದೆ.
ಆರು ಕಡೆ ಇರಿದ ಗಾಯದಿಂದ ರಕ್ತಸಿಕ್ತರಾಗಿ ಬಿದ್ದಿದ್ದ ಸೈಫ್ ಅವರನ್ನು ತಕ್ಷಣ ಆಸ್ಪತ್ರೆಗೆ ದಾಖಲಿಸಲು ಕಾರು ಸಿದ್ಧವಿರಲಿಲ್ಲ. ಆದರೆ ಅಮೂಲ್ಯ ಸಮಯವನ್ನು ಅದಕ್ಕಾಗಿ ವ್ಯರ್ಥ ಮಾಡುವ ಬದಲು, ಬಾಂದ್ರಾದಲ್ಲಿ ಲಭ್ಯವಿದ್ದ ಆಟೋ ರಿಕ್ಷಾ ಪಡೆದು 2 ಕಿ.ಮೀ. ದೂರದಲ್ಲಿರುವ ಆಸ್ಪತ್ರೆಗೆ ಇಬ್ರಾಹಿಂ ಕರೆತಂದಿದ್ದಾರೆ.
ಈ ಕುರಿತ ವಿಡಿಯೊ ಸಾಮಾಜಿಕ ಮಾಧ್ಯಮದಲ್ಲಿ ಹರಿದಾಡುತ್ತಿದ್ದು, ಸೈಫ್ ಮನೆಯಲ್ಲಿ ಆಟೋ ನಿಂತಿದೆ. ಅವರ ಪತ್ನಿ ನಟಿ ಕರೀನಾ ಕಪೂರ್ ಖಾನ್ ಅವರು ಮನೆಯ ಕೆಲಸಗಾರರೊಂದಿಗೆ ಮಾತನಾಡುತ್ತಿದ್ಧಾರೆ.
54 ವರ್ಷದ ನಟ ಸೈಫ್‌ಗೆ ಆರು ಕಡೆ ಇರಿಯಲಾಗಿದೆ ಎಂದೆನ್ನಲಾಗಿದೆ. ಇದರಿಂದಾಗಿ ಅವರ ಕುತ್ತಿಗೆಯಲ್ಲಿ ಆಳವಾದ ಗಾಯವಾಗಿದೆ. ಬುಧವಾರ ನಡುರಾತ್ರಿ ಆಗಂತುಕನೊಬ್ಬ ಮನೆಯೊಳಗೆ ನುಗ್ಗಿದ್ದ, ಆತನೊಂದಿಗಿನ ಕಾದಾಟದಲ್ಲಿ ಸೈಫ್‌ಗೆ ಚಾಕುವಿನಿಂದ ಇರಿದಿದ್ದಾನೆ. ಲೀಲಾವತಿ ಆಸ್ಪತ್ರೆಯ ವೈದ್ಯರು ಎರಡು ಶಸ್ತ್ರ ಚಿಕಿತ್ಸೆ ನಡೆಸಿದ್ದಾರೆ. ಸೈಫ್ ಸದ್ಯ ಅಪಾಯದಿಂದ ಪಾರಾಗಿದ್ದಾರೆ ಎಂದು ವೈದ್ಯರು ಹೇಳಿದ್ದಾರೆ.
ತನಿಖೆ ಕೈಗೊಂಡಿದ್ದು, ಸೈಫ್ ಮನೆ ಹಾಗೂ ಅಕ್ಕಪಕ್ಕದ ಸಿಸಿಟಿವಿ ಕ್ಯಾಮೆರಾಗಳನ್ನು ಪರಿಶೀಲಿಸಲಾಗುತ್ತಿದೆ. ಆಗಂತುಕನು, ಸೈಫ್ ಅವರ ಮನೆಯ ಆವರಣದೊಳಗೆ ಮೊದಲೇ ಪ್ರವೇಶಿಸಿದ್ದ, ನಂತರ ದಾಳಿ ನಡೆಸಿರುವ ಸಾಧ್ಯತೆ ಇದೆ ಎಂದು ಪೊಲೀಸರು ಹೇಳಿದ್ದಾರೆ.
ಹಲ್ಲೆ ನಡೆಸಿದಾತ ಸೈಫ್ ಮನೆಗೆಲಸದವರಲ್ಲಿ ಯಾರೋ ಒಬ್ಬರಿಗೆ ನಿಕಟನಾಗಿರುವ ಸಾಧ್ಯತೆ ಇದೆ. ಇದರಿಂದಾಗಿ ಮನೆ ಆವರಣದೊಳಗೆ ಸುಲಭವಾಗಿ ಪ್ರವೇಶ ಪಡೆದಿದ್ದಾನೆ ಎಂದು ಪೊಲೀಸರು ಅಂದಾಜಿಸಿದ್ದಾರೆ ಎಂದು ಮೂಲಗಳು ಹೇಳಿವೆ.
ಘಟನೆಯಿಂದ ಇಡೀ ಬಾಲಿವುಡ್ ಬೆಚ್ಚಿದೆ. ನಟಿ ಪೂಜಾ ಭಟ್ ಅವರು ಆಘಾತ ವ್ಯಕ್ತಪಡಿಸಿದ್ದು, ಬಾಂದ್ರಾ ಪ್ರದೇಶದಲ್ಲಿ ಪೊಲೀಸ್ ಬಂದೋಬಸ್ತ್ ಹೆಚ್ಚಿಸುವಂತೆ ಮುಖ್ಯಮಂತ್ರಿ ದೇವೇಂದ್ರ ಫಡಣವೀಸ್ ಅವರನ್ನು ಆಗ್ರಹಿಸಿದ್ದಾರೆ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.