ADVERTISEMENT

ಪಾಪ ಪುಣ್ಯದ ಸುಳಿಯಲ್ಲಿ ಅವತಾರ ಪುರುಷ

​ಪ್ರಜಾವಾಣಿ ವಾರ್ತೆ
Published 25 ಏಪ್ರಿಲ್ 2019, 11:47 IST
Last Updated 25 ಏಪ್ರಿಲ್ 2019, 11:47 IST
Simple Suni
Simple Suni   

ಮನರಂಜನೆಯ ಚೌಕಟ್ಟಿನೊಳಗೇ ಪ್ರಯೋಗಗಳಿಗೆ ಒಡ್ಡಿಕೊಳ್ಳುವ ನಿರ್ದೇಶಕ ಸಿಂಪಲ್‌ ಸುನಿ. ಇದೀಗ ಅವರು ‘ಅವತಾರ ಪುರುಷ’ ಚಿತ್ರದ ಮೂಲಕ ಹೊಸ ಪ್ರಯೋಗಕ್ಕೆ ಮುಂದಾಗಿದ್ದಾರೆ. ಚಿತ್ರದ ಹೆಸರು ಪುರಾಣದ ಕಥೆಯೊಂದರ ಸೂಚನೆಯಂತೆ ಕಾಣುತ್ತಿದ್ದರೆ, ಚಿತ್ರದ ಪಾತ್ರವರ್ಗದತ್ತ ದೃಷ್ಟಿ ಹಾಯಿಸಿದರೆ ಅದಕ್ಕೆ ವಿರುದ್ಧವಾದ ಚಿತ್ರಣವೊಂದು ಕಾಣಸಿಗುತ್ತದೆ. ಇತ್ತೀಚೆಗೆ ಹಾಸ್ಯ ಚಿತ್ರಗಳ ಮೂಲಕ ಸರಣಿ ಗೆಲುವು ದಾಖಲಿಸುತ್ತಿರುವ ಶರಣ್‌ ಈ ಚಿತ್ರದ ನಾಯಕ. ಪೌರಾಣಿಕ ಸಿನಿಮಾದಲ್ಲಿ ಶರಣ್‌ ಅವರನ್ನು ನಾಯಕನಾಗಿ ಊಹಿಸಿಕೊಳ್ಳುವುದೂ ಕಷ್ಟ ಅಲ್ಲವೇ? ಅವರಿಗೆ ಜತೆಯಾಗಿ ಆಶಿಕಾ ರಂಗನಾಥ್‌ ಕೂಡ ಇದ್ದಾರೆ.

ಈ ಕುರಿತು ಕೇಳಿದರೆ ನಿರ್ದೇಶಕ ಸುನಿ ಇನ್ನಷ್ಟು ಗೊಂದಲಕ್ಕೆ ಕೆಡವುತ್ತಾರೆ. ‘ಶರಣ್‌ ಅವರ ಪ್ಲಸ್‌ ಪಾಯಿಂಟ್‌ ಎಂದರೆ ಹಾಸ್ಯ. ಅವರ ಚಿತ್ರಗಳಲ್ಲಿ ಸಾಮಾನ್ಯವಾಗಿ ಇರುವ ಹಾಸ್ಯ ಈ ಚಿತ್ರದಲ್ಲಿಯೂ ಇರುತ್ತದೆ’ ಎನ್ನುತ್ತಾರೆ.

ಸದ್ಯಕ್ಕೆ ಕೇರಳದ ಹಳೆಯ ಮನೆಯೊಂದರಲ್ಲಿ ‘ಅವತಾರ ಪುರುಷ’ನ ಚಿತ್ರೀಕರಣ ನಡೆಯುತ್ತಿದೆ. ‘ಈ ಚಿತ್ರದ ಕಥೆಗೆ ಹಳೆಯ, ಸಾಂಪ್ರದಾಯಿಕ ನೋಟವುಳ್ಳ ಮನೆ ಬೇಕಿತ್ತು. ಮನೆಯೊಳಗೇ ಬಾವಿ ಇರುವ, ಪಕ್ಕದಲ್ಲಿಯೇ ಕಲ್ಯಾಣಿ ಇರುವ ಜಾಗಕ್ಕಾಗಿ ಹುಡುಕುತ್ತಿದ್ದೆವು. ನಮ್ಮ ಮನಸ್ಸಿಗೆ ಹೊಂದುವಂಥ ಮನೆ ಇಲ್ಲಿ ಸಿಕ್ಕಿತು. ಹೀಗಾಗಿ ಈ ಮನೆಯನ್ನೇ ಚಿತ್ರೀಕರಣಕ್ಕಾಗಿ ಆಯ್ದುಕೊಂಡೆವು’ ಎಂದು ಸುನಿ ವಿವರಿಸುತ್ತಾರೆ. ಹಾಗಾದರೆ ಇದೇನು ಹಾರರ್ ಕಥೆಯೇ ಎಂದು ಕೇಳಿದರೆ ‘ಖಂಡಿತ ಅಲ್ಲ’ ಎಂದು ತಲೆಯಾಡಿಸುತ್ತಾರೆ. ‘ರಾಮಾಯಣ ಮತ್ತು ಮಹಾಭಾರತದ ಹಲವು ಸನ್ನಿವೇಶಗಳು ಹೇಗೆ ನಡೆದಿರಬಹುದು ಎಂಬುದನ್ನು ಕಲ್ಪಿಸಿಕೊಂಡು ಕಟ್ಟಿದ ಕಥೆ ಇದು. ಪಾಪ, ಪುಣ್ಯಗಳ ಕುರಿತು ಈ ಕಥೆ ಇದೆ. ಸಾಕಷ್ಟು ಆಧ್ಯಾತ್ಮಿಕ ಅಂಶಗಳೂ ಸಿನಿಮಾದಲ್ಲಿವೆ’ ಎಂಬುದು ಅವರ ವಿವರಣೆ.

ADVERTISEMENT

ಶೇ. 50 ಚಿತ್ರೀಕರಣ ಈಗಾಗಲೇ ಮುಗಿದಿದೆ. ಕೇರಳದ ನಂತರ ಶೃಂಗೇರಿಯಲ್ಲಿಯೂ ಕೆಲವು ದಿನಗಳ ಚಿತ್ರೀಕರಣಕ್ಕೆ ಯೋಜನೆ ಹಾಕಿಕೊಳ್ಳಲಾಗಿದೆ. ನಂತರ ಮಳೆಗಾಲದಲ್ಲಿ ಮತ್ತೆ ಕೇರಳಕ್ಕೆ ತೆರಳಿ ಇನ್ನೂ ಕೆಲವು ದಿನಗಳ ಚಿತ್ರೀಕರಣ ನಡೆಸಲಾಗುತ್ತದೆಯಂತೆ.

ಚರಣ್‌ರಾಜ್‌ ಸಂಗೀತ ಸಂಯೋಜಿಸುತ್ತಿದ್ದಾರೆ. ‘ರಂಗಿತರಂಗ’ ಮತ್ತು ‘ರಾಜರಥ’ ಸಿನಿಮಾಗಳಿಗೆ ಛಾಯಾಗ್ರಹಣ ಮಾಡಿದ್ದ ವಿಲಿಯಮ್‌ ಡೇವಿಡ್‌ ಅವರೇ ‘ಅವತಾರ ಪುರುಷ’ನಿಗೂ ಕ್ಯಾಮೆರಾ ಹಿಡಿದಿದ್ದಾರೆ. ಅಕ್ಟೋಬರ್‌ ತಿಂಗಳಲ್ಲಿ ಚಿತ್ರವನ್ನು ತೆರೆಗೆ ತರುವ ಆಲೋಚನೆಯಲ್ಲಿ ಸುನಿ ಇದ್ದಾರೆ.

ಕೃಪೆ: ಸುಧಾ

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.