ಸ್ಯಾಂಡಲ್‌ವುಡ್‌ನ ಸಕ್ಸಸ್ ಜೋಡಿ ಎಂದು ಗುರುತಿಸಿಕೊಂಡಿರುವ ಸತೀಶ್ ನೀನಾಸಂ ಹಾಗೂ ರಚಿತಾರಾಮ್ ‘ಅಯೋಗ್ಯ–2’ ಸಿನಿಮಾ ಮೂಲಕ ಮತ್ತೆ ಪ್ರೇಕ್ಷಕರೆದುರಿಗೆ ಬರುತ್ತಿದ್ದಾರೆ. ಮಹೇಶ್ ಕುಮಾರ್ ನಿರ್ದೇಶನದ ಈ ಚಿತ್ರದ ಮುಹೂರ್ತ ಇತ್ತೀಚೆಗೆ ಬೆಂಗಳೂರಿನ ದೊಡ್ಡ ಗಣಪತಿ ದೇವಸ್ಥಾನದಲ್ಲಿ ನಡೆಯಿತು.
ಮುನೇಗೌಡ ಅವರು ತಮ್ಮ ಎಸ್ ವಿ ಸಿ ಪ್ರೊಡಕ್ಷನ್‌ನಡಿ ಈ ಸಿನಿಮಾ ನಿರ್ಮಾಣ ಮಾಡುತ್ತಿದ್ದಾರೆ. ನಿರ್ಮಾಪಕಿ ಅಶ್ವಿನಿ ಪುನೀತ್ ರಾಜ್‌ಕುಮಾರ್ ‘ಅಯೋಗ್ಯ-2’ ಚಿತ್ರಕ್ಕೆ ಕ್ಲ್ಯಾಪ್ ಮಾಡುವ ಮೂಲಕ ಚಿತ್ರೀಕರಣಕ್ಕೆ ಚಾಲನೆ ನೀಡಿದರು.
ಬಳಿಕ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಸತೀಶ್ ನೀನಾಸಂ, ‘ಸಿನಿಮಾಗಳಿಗೆ ನಿರ್ಮಾಪಕರಿಲ್ಲ ಎನ್ನುವ ಕೂಗು ಇದೆ. ಆದರೆ ‘ಅಯೋಗ್ಯ–2’ಗೆ ಕೋಟಿ ಕೋಟಿ ಸುರಿಯಲು ಸಿದ್ಧವಿರುವ ನಿರ್ಮಾಪಕರ ಸಾಲು ದೊಡ್ಡದಿತ್ತು. ಒಮ್ಮೆ ಸಿನಿಮಾ ಆರಂಭವಾದ ಮೇಲೆ ಪದೇ ಪದೇ ಸಮಸ್ಯೆಗಳು ಆಗಬಾರದು. ಎರಡನೇ ಭಾಗ ಎಂದ ಮೇಲೆ ಸಂಭಾವನೆಯಿಂದ ಹಿಡಿದು ಎಲ್ಲವೂ ದುಪ್ಪಟ್ಟು ಆಗಿರುತ್ತದೆ. ಹೀಗಿರುವ ಸಿನಿಮಾವನ್ನು ಹೊರುವಂತಹ ಸಾಮರ್ಥ್ಯ ಆ ನಿರ್ಮಾಪಕರಿಗೆ ಇರಬೇಕು. ಅಲ್ಲಿಂದೊಂದಿಷ್ಟು, ಇಲ್ಲಿಂದೊಂದಿಷ್ಟು ಹಣ ತಂದು ನಂತರ ಕಷ್ಟ ಆಗುತ್ತಿದೆ, ಮಾಡಲು ಸಾಧ್ಯವಾಗುತ್ತಿಲ್ಲ ಎನ್ನುವಂತಹವರನ್ನು ತುಂಬಾ ಸಿನಿಮಾದಲ್ಲಿ ನೋಡಿದ್ದೇವೆ. ಹೀಗಾಗಿಯೇ ಒಂದು ವರ್ಷದಿಂದ ಈ ಸಿನಿಮಾದ ಸ್ಕ್ರಿಪ್ಟ್ ಹಿಡಿದು ಕಾಯುತ್ತಿದ್ದೆವು. ಮುನೇಗೌಡ ಅವರ ಖಡಕ್ ಮಾತು, ಧೈರ್ಯ, ಬ್ಯಾಂಕ್ ಬ್ಯಾಲೆನ್ಸ್ ನಮಗೂ ಧೈರ್ಯ ತಂದಿತು. ಗುಣಮಟ್ಟದಲ್ಲಿ ಎಲ್ಲಿಯೂ ತಗ್ಗದೆ ಹೆಜ್ಜೆ ಇಡಲಿದ್ದೇವೆ. ಕನ್ನಡಕ್ಕೆ ಮಹೇಶ್ ಅವರ ರೀತಿಯ ನಿರ್ದೇಶಕರು ಬೇಕು. ನಮ್ಮ ನಿರ್ದೇಶಕರು ಬೇರೆ ಭಾಷೆಗಳಿಗೆ ಹೋಗುತ್ತಿದ್ದಾರೆ. ನಮ್ಮ ಇಂಡಸ್ಟ್ರಿ ಬೆಳೆಯಬೇಕಲ್ಲವೇ? ನಮ್ಮ ನಿರ್ದೇಶಕರು ಇಲ್ಲೇ ಇದ್ದುಕೊಂಡು ಬೇರೆಡೆಗೆ ಮುಟ್ಟಲಿ’ ಎಂದರು.
ರಚಿತಾರಾಮ್ ಮಾತನಾಡಿ, ‘ಅಯೋಗ್ಯ ಸೀಕ್ವೆಲ್‌ನಲ್ಲಿ ಹಿಂದಿನ ಸಿನಿಮಾದ ಎಲ್ಲರೂ ಇದ್ದೇವೆ. ಹೊಸಮುಖಗಳೂ ಇವೆ. ಮೊದಲ ಭಾಗಕ್ಕೆ ಒಳ್ಳೆಯ ಪ್ರತಿಕ್ರಿಯೆ ದೊರಕಿತ್ತು. ಆ ಸಿನಿಮಾದ ‘ಏನಮ್ಮಿ ಏನಮ್ಮಿ’ ಹಾಡಿಗೆ ಪರ್ಯಾಯ ಇಲ್ಲವೇ ಇಲ್ಲ. ಅದು ಮಾಸ್ಟರ್‌ಪೀಸ್. ಈ ಸಿನಿಮಾದಲ್ಲಿ ನನಗೆ ಲೇಡಿ ಸೂಪರ್‌ಸ್ಟಾರ್ ಎನ್ನುವ ಬಿರುದು ನೀಡಲಾಗಿದೆ. ಆದರೆ ನಾನು ಯಾವಾಗಲೂ ಅಭಿಮಾನಿಗಳ ಪ್ರೀತಿಯ ಬುಲ್ ಬುಲ್ ಆಗಿಯೇ ಇರುತ್ತೇನೆ’ ಎಂದರು.
‘ಅಯೋಗ್ಯ–2 ಮಾಡಬೇಕು ಎನ್ನುವುದು ಆರು ವರ್ಷಗಳ ಕನಸು. ಮೊದಲ ಭಾಗಕ್ಕಿಂತ ಸೀಕ್ವೆಲ್ ಅನ್ನು ಇನ್ನಷ್ಟು ಅದ್ಧೂರಿಯಾಗಿ ಮಾಡಲಿದ್ದೇವೆ. 23 ದಿನ ನಿರಂತರವಾಗಿ ಚಿತ್ರೀಕರಣ ನಡೆಯಲಿದ್ದು, ಮುಂದಿನ ವರ್ಷವೇ ಬಿಡುಗಡೆಗೆ ನಿರ್ಧರಿಸಿದ್ದೇವೆ’ ಎಂದು ಮಾಹಿತಿ ನೀಡಿದರು ನಿರ್ದೇಶಕ ಮಹೇಶ್.
ಚಿತ್ರಕ್ಕೆ ಅರ್ಜುನ್ ಜನ್ಯ ಸಂಗೀತ ನಿರ್ದೇಶನವಿರಲಿದೆ. ರವಿಶಂಕರ್, ಶಿವರಾಜ್ ಕೆ.ಆರ್. ಪೇಟೆ ಸೇರಿದಂತೆ ‘ಅಯೋಗ್ಯ’ ಸಿನಿಮಾದಲ್ಲಿ ಅಭಿನಯಿಸಿದ ಬಹುತೇಕ ಕಲಾವಿದರು ಸೀಕ್ವೆಲ್‌ನಲ್ಲೂ ಇರಲಿದ್ದಾರೆ. ಸೀಕ್ವೆಲ್‌ನಲ್ಲಿ ಮಂಜು ಪಾವಗಡ ಹೊಸಮುಖ. ಮಾಸ್ತಿ ಸಂಭಾಷಣೆ, ವಿಶ್ವಜಿತ್ ರಾವ್ ಛಾಯಾಚಿತ್ರಗ್ರಹಣ ಸಿನಿಮಾಗೆ ಇರಲಿದೆ.
‘ಅಯೋಗ್ಯ–2’ ಕನ್ನಡದ ಜೊತೆಗೆ ತಮಿಳು ತೆಲುಗಿನಲ್ಲೂ ಬಿಡುಗಡೆಯಾಗಲಿದೆ. ಮೊದಲ ಭಾಗ ಹಿಟ್ ಆದಮೇಲೆ ಬೇರೆ ಭಾಷೆಗೆ ಡಬ್ ಮಾಡಿದ್ದೆವು. ಆದರೀಗ ತಮಿಳು ಹಾಗೂ ತೆಲುಗಿನಲ್ಲೂ ಸಿನಿಮಾ ಮಾಡುತ್ತಿದ್ದೇವೆ.–ಮಹೇಶ್ ಕುಮಾರ್ ನಿರ್ದೇಶಕ
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.