ADVERTISEMENT

Saroja Devi: ಸಿದ್ದರಾಮಯ್ಯ, ಸರ್ಜಾ, ಕಾರ್ತಿಯಿಂದ ಅಂತಿಮ ದರ್ಶನ

​ಪ್ರಜಾವಾಣಿ ವಾರ್ತೆ
Published 16 ಜುಲೈ 2025, 0:04 IST
Last Updated 16 ಜುಲೈ 2025, 0:04 IST
ನಟಿ ಬಿ.ಸರೋಜಾದೇವಿ ಅವರ ಪ್ರಾರ್ಥಿವ ಶರೀರಕ್ಕೆ ಮುಖ್ಯಮಂತ್ರಿ ಸಿದ್ದರಾಮಯ್ಯ ಅಂತಿಮ ನಮನ ಸಲ್ಲಿಸಿದರು. ನಟ ಸುಂದರ್‌ ರಾಜ್‌ ಇದ್ದಾರೆ. 
ನಟಿ ಬಿ.ಸರೋಜಾದೇವಿ ಅವರ ಪ್ರಾರ್ಥಿವ ಶರೀರಕ್ಕೆ ಮುಖ್ಯಮಂತ್ರಿ ಸಿದ್ದರಾಮಯ್ಯ ಅಂತಿಮ ನಮನ ಸಲ್ಲಿಸಿದರು. ನಟ ಸುಂದರ್‌ ರಾಜ್‌ ಇದ್ದಾರೆ.    

ಬೆಂಗಳೂರು: ಮುಖ್ಯಮಂತ್ರಿ ಸಿದ್ದರಾಮಯ್ಯ ಸೇರಿದಂತೆ ಚಿತ್ರರಂಗದ ಕಲಾವಿದರು ಮಂಗಳವಾರ (ಜುಲೈ 15) ನಟಿ ಬಿ.ಸರೋಜಾದೇವಿ ಅವರ ಪಾರ್ಥಿವ ಶರೀರದ ಅಂತಿಮ ದರ್ಶನ ಪಡೆದು ಪುಷ್ಪನಮನ ಅರ್ಪಿಸಿದರು.  

‘ಕನ್ನಡ ಚಿತ್ರರಂಗ ಬೆಳೆಯಲು ಅಪಾರ ಕೊಡುಗೆಯನ್ನು ಸರೋಜಾದೇವಿಯವರು ನೀಡಿದ್ದಾರೆ. ಮಲ್ಲೇಶ್ವರದಲ್ಲಿ ಅವರು ವಾಸವಿದ್ದ ಮನೆಯ ರಸ್ತೆಗೆ ಬಿ.ಸರೋಜಾದೇವಿಯವರ ಹೆಸರು ಇಡುವ ಬಗ್ಗೆ ಪಾಲಿಕೆ ಜೊತೆ ಮಾತನಾಡುತ್ತೇನೆ’ ಎಂದು ಇದೇ ವೇಳೆ ಸಿದ್ದರಾಮಯ್ಯ ಹೇಳಿದರು. 

ನಟರಾದ ಅರ್ಜುನ್‌ ಸರ್ಜಾ, ಕಾರ್ತಿ ಹಾಗೂ ವಿಶಾಲ್‌ ಅವರೂ ಪಾರ್ಥಿವ ಶರೀರದ ಅಂತಿಮ ದರ್ಶನ ಪಡೆದರು. ‘ಸರೋಜಾದೇವಿ ಅಮ್ಮ ಇಲ್ಲದೇ ಇರುವುದನ್ನು ನೆನಪಿಸಿಕೊಂಡಾಗ ಕಷ್ಟವಾಗುತ್ತಿದೆ. ಅಮ್ಮ ಅಂದರೆ ಬಹಳ ಪ್ರೀತಿ ನನಗೆ. ಈ ಮನೆಯಲ್ಲಿ ಬಹಳಷ್ಟು ನೆನಪುಗಳು ಇವೆ. ಚಿತ್ರರಂಗದಲ್ಲಿ ಈಗಿರುವ ಯುವಜನತೆಗೆ ಮಾದರಿ ಅವರು’ ಎಂದು ಭಾವುಕರಾದರು ವಿಶಾಲ್‌. ‘ನಾನು ಚಿಕ್ಕವನಾಗಿದ್ದಾಗಲಿಂದಲೂ ಅವರನ್ನು ನೋಡಿದ್ದೇನೆ. ನಾವು ಇವತ್ತು ಪ್ಯಾನ್‌ ಇಂಡಿಯಾ ಎನ್ನುತ್ತೇವೆ. ಸರೋಜಾದೇವಿಯಮ್ಮ ಆವತ್ತೇ ನಾಲ್ಕು ಭಾಷೆಗಳಲ್ಲಿ ಹಲವು ದಶಕಗಳ ಕಾಲ ನಾಯಕಿಯಾಗಿ ಇದ್ದವರು. ಅಭಿನಯ ಸರಸ್ವತಿ, ಕನ್ನಡದ ಪೈಂಗಿಳಿ ಎಂದು ಅವರನ್ನು ನಮ್ಮ ಜನ ಮುದ್ದಾಗಿ ಕರೆಯುತ್ತಿದ್ದರು. ಎಲ್ಲಾ ಸೂಪರ್‌ಸ್ಟಾರ್‌ಗಳ ಜೊತೆಗೆ ನಾಯಕಿಯಾಗಿ ನಟಿಸಿದ್ದಾರೆ. ಎಲ್ಲರ ಮನಸ್ಸಿನಲ್ಲಿ ಅವರು ಶಾಶ್ವತವಾಗಿ ಇರಲಿದ್ದಾರೆ’ ಎಂದರು ಕಾರ್ತಿ.       

ADVERTISEMENT
ನಟಿ ಬಿ.ಸರೋಜಾದೇವಿ ಅವರ ಪ್ರಾರ್ಥಿವ ಶರೀರಕ್ಕೆ ಮುಖ್ಯಮಂತ್ರಿ ಸಿದ್ದರಾಮಯ್ಯ ಅಂತಿಮ ನಮನ ಸಲ್ಲಿಸಿದರು.
ಅವರ ವ್ಯಕ್ತಿತ್ವವೇ ನಮ್ಮನ್ನು ಅಲ್ಲಿಂದ ಇಲ್ಲಿಗೆ ಕರೆತಂದಿದೆ. ನನಗೆ ಅವರು ತಾಯಿ ಸ್ವರೂಪ. ಮಗನೇ ಎಂದು ಅಕ್ಕರೆಯಿಂದ ಕರೆಯುತ್ತಿದ್ದರು. ಅವರು ಚೆನ್ನೈಗೆ ಬಂದರೆ ನಮಗೆ ಹಬ್ಬ. ಅವರ ಗುಣ ಮಾತು ನಮ್ಮನ್ನು ಸೆಳೆಯುತ್ತಿತ್ತು.
ಅರ್ಜುನ್‌ ಸರ್ಜಾ ನಟ

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.