ADVERTISEMENT

ಬಾಲುಗೆ ಒಂದು ಹಿಟ್ ಬೇಕು

​ಪ್ರಜಾವಾಣಿ ವಾರ್ತೆ
Published 22 ಮೇ 2020, 6:32 IST
Last Updated 22 ಮೇ 2020, 6:32 IST
ಕಪಟನಾಟಕ ಪಾತ್ರಧಾರಿ ಚಿತ್ರದಲ್ಲಿ ಸಂಗೀತಾ ಭಟ್‌ ಜೊತೆ ಬಾಲು ನಾಗೇಂದ್ರ
ಕಪಟನಾಟಕ ಪಾತ್ರಧಾರಿ ಚಿತ್ರದಲ್ಲಿ ಸಂಗೀತಾ ಭಟ್‌ ಜೊತೆ ಬಾಲು ನಾಗೇಂದ್ರ   

ಬಾಲು ನಾಗೇಂದ್ರ ಅವರು ನಾಯಕನಾಗಿ ನಟಿಸಿದ ಸಿನಿಮಾಗಳು ಎರಡು – ‘ಹುಲಿರಾಯ’ ಮತ್ತು ‘ಕಪಟ ನಾಟಕ ಪಾತ್ರಧಾರಿ’. ಅದಕ್ಕೂ ಮೊದಲು ಬಾಲು ಅವರು ‘ಕಡ್ಡಿಪುಡಿ’, ‘ಅಣ್ಣಾ ಬಾಂಡ್’ ಚಿತ್ರಗಳಲ್ಲೂ ಕಾಣಿಸಿಕೊಂಡಿದ್ದರು.

ಲಾಕ್‌ಡೌನ್‌ ಅವಧಿಯಲ್ಲಿ ಬಾಲು ಅವರು ಬರವಣಿಗೆಯ ಕೆಲಸದಲ್ಲಿ ತೊಡಗಿಸಿಕೊಂಡಿದ್ದು, ತಮ್ಮ ಮುಂದಿನ ಸಿನಿಮಾದ ಸ್ಕ್ರಿಪ್ಟ್‌ ಸಿದ್ಧಪಡಿಸುವ ಕಾರ್ಯದಲ್ಲಿ ಬ್ಯುಸಿಯಾಗಿ ಇದ್ದಾರೆ.

ಸಿನಿಮಾ ಕುರಿತು ಪ್ರಶ್ನಿಸಿದಾಗ, ‘ಒಂದು ಸಿನಿಮಾ ಕೆಲಸ ಶುರು ಮಾಡಿದ್ದೇನೆ. ಅದರ ಬಗ್ಗೆ ಮಾಹಿತಿಯನ್ನು ಮುಂದಿನ ದಿನಗಳಲ್ಲಿ ನೀಡುವೆ’ ಎಂದು ಹೇಳುತ್ತಾರೆ ಬಾಲು.

ADVERTISEMENT

ಅವರ ‘ಹುಲಿರಾಯ’ ಹಾಗೂ ‘ಕಪಟ ನಾಟಕ ಪಾತ್ರಧಾರಿ’ ಸಿನಿಮಾಗಳು ‘ಹಿಟ್’ ಆಗಲಿಲ್ಲ. ‘ನನಗೆ ಈಗ ಒಂದು ಹಿಟ್ ಸಿನಿಮಾ ಬೇಕು. ಹಿಟ್ ಎಂಬ ಪದವನ್ನು ನಾನು ನಿರ್ದಿಷ್ಟ ಅರ್ಥದಲ್ಲಿ ಬಳಸಿದ್ದೇನೆ. ನಾನು ನಾಯಕನಾಗಿ ನಟಿಸಿದ ಎರಡೂ ಸಿನಿಮಾಗಳು ಸುದ್ದಿ ಮಾಡಿದವು. ಅವುಗಳಲ್ಲಿನ ನನ್ನ ಅಭಿನಯವನ್ನು ವೀಕ್ಷಕರು ಮೆಚ್ಚಿಕೊಂಡರು. ಆದರೆ, ಆ ಎರಡು ಸಿನಿಮಾಗಳು ಸಿನಿಮಾ ಮಂದಿರಗಳಲ್ಲಿ ಹೆಚ್ಚು ಸದ್ದು ಮಾಡಲಿಲ್ಲ. ಹೆಚ್ಚು ಜನ ಅವುಗಳನ್ನು ಸಿನಿಮಾ ಮಂದಿರಗಳಲ್ಲಿ ವೀಕ್ಷಿಸಲಿಲ್ಲ. ಅದರ ಪರಿಣಾಮವಾಗಿ, ಆ ಎರಡು ಸಿನಿಮಾ ತಂಡಗಳಿಗೆ ಅಗತ್ಯವಾದ ಮಾರುಕಟ್ಟೆ ಬೆಳೆಯಲಿಲ್ಲ. ಸಿನಿಮಾಗಳು ಥಿಯೇಟರ್ ಮೂಲಕ ವೀಕ್ಷಕರಿಗೆ ತಲುಪಿದಾಗ ದೊಡ್ಡ ಹಿಟ್ ಆದಂತೆ’ ಎಂದರು ಬಾಲು.

‘ಈಗ ಒಟಿಟಿ ವೇದಿಕೆಗಳು ಮುಂಚೂಣಿಯಲ್ಲಿ ಇರುವ ಕಾರಣ, ಅಲ್ಲಿಯೂ ಜನ ಸಿನಿಮಾ ವೀಕ್ಷಿಸಬೇಕು ಎಂಬ ಮಾತು ನಿಜ’ ಎನ್ನುವ ಮಾತನ್ನೂ ಅವರು ಸೇರಿಸಲು ಮರೆಯಲಿಲ್ಲ.

‘ನನಗೆ ಪಾತ್ರಗಳ ಆಯ್ಕೆಯಲ್ಲಿ ತಪ್ಪು ಮಾಡಿಬಿಟ್ಟೆ ಎಂದು ಯಾವತ್ತೂ ಅನ್ನಿಸಿಲ್ಲ. ಮುಂದೆಯೂ ಹಾಗೆ ಅನ್ನಿಸುವುದಿಲ್ಲ. ನಾನು ಹಲವು ಸಿನಿಮಾಗಳನ್ನು ಒಪ್ಪಿಕೊಳ್ಳುತ್ತಿಲ್ಲ. ಅಪರೂಪಕ್ಕೆ ಒಂದು ಸಿನಿಮಾ ಮಾಡುತ್ತಿದ್ದೇನೆ. ಅವಕಾಶಗಳು ಬರುತ್ತಿಲ್ಲ ಎಂದಲ್ಲ; ಅವು ಬರುತ್ತಿವೆ. ಆದರೆ ಕೆಲವು ಸಿನಿಮಾಗಳನ್ನು ಕೆಲವು ನಿರ್ದಿಷ್ಟ ಕಾರಣಗಳಿಂದಾಗಿ ತಿರಸ್ಕರಿಸಿದ್ದು ಇದೆ. ಈವರೆಗಿನ ಯಾವ ನಿರ್ಧಾರದ ಬಗ್ಗೆಯೂ ಬೇಸರ ಇಲ್ಲ. ಸಿನಿಮಾ ಹಿಟ್ ಆಗಲಿ, ಆಗದೆ ಇರಲಿ ನನ್ನ ಕಾಯಕ ನಿಷ್ಠೆಯ ಕಾರಣದಿಂದಾಗಿ ಅವುಗಳಲ್ಲಿನ ಪಾತ್ರವನ್ನು ನಿಭಾಯಿಸಿದ್ದೇನೆ. ಹುಲಿರಾಯ ಚಿತ್ರದ ಸುರೇಶನ ಪಾತ್ರವನ್ನು ಆ ಪಾತ್ರದ ಕಾರಣಕ್ಕಾಗಿಯೇ ಮಾಡಿದ್ದೆ. ಪಾತ್ರವನ್ನು ನಂಬಿ ಜವಾಬ್ದಾರಿ ನಿಭಾಯಿಸಿದೆ. ಸಿನಿಮಾ ಹಿಟ್ ಆಗುವುದು ಅಥವಾ ಸೋಲುವುದು ನನ್ನನ್ನು ವಿಚಲಿತಗೊಳಿಸುವುದಿಲ್ಲ. ಹಿಟ್ ಆಗಿದ್ದಿದ್ದರೆ ಒಳ್ಳೆಯ ಸ್ಟಾರ್ ಪಟ್ಟ ಸಿಗುತ್ತಿತ್ತು. ಆದರೆ, ಆ ಪಾತ್ರವನ್ನು ಆಯ್ಕೆ ಮಾಡಿಕೊಂಡಿದ್ದಕ್ಕೆ, ಅದನ್ನು ನಿಭಾಯಿಸಿದ್ದಕ್ಕೆ ನನಗೆ ಹೆಮ್ಮೆ ಇದೆ’ ಎಂದು ತಮ್ಮ ಹಿಂದಿನ ಪಾತ್ರಗಳ ಮೇಲೊಂದು ನೋಟ ಹರಿಸುತ್ತ ಹೇಳಿದರು.

ಜೊತೆಗೆ ಒಂದು ಮಾತನ್ನು ಸೇರಿಸಿದರು. ‘ನಾನು ಬಹಳ ಕೆಳ ಹಂತದಿಂದ ಸಿನಿಮಾ ರಂಗಕ್ಕೆ ಬಂದವನು. ಬಡತನವನ್ನು ಕಂಡವರಿಗೆ ಕಷ್ಟ ನಿಭಾಯಿಸುವುದು ಕಷ್ಟವಲ್ಲ! ನನ್ನನ್ನು ನಂಬಿ ಇನ್ನೊಬ್ಬರು ಹಣ ಹೂಡಿಕೆ ಮಾಡುತ್ತಾರೆ ಎಂಬುದೇ ಒಂದು ಹೆಮ್ಮೆ’ ಎಂದರು.

ತಮ್ಮ ಕೆಲವು ಸಿನಿಮಾಗಳು ಏಕೆ ಹಿಟ್ ಆಗಲಿಲ್ಲ ಎಂಬುದಕ್ಕೆ ಬಾಲು ಕಾರಣ ನೀಡುತ್ತಾರೆ. ‘ಚೆನ್ನಾಗಿರದ ಸಿನಿಮಾಗಳು ಕೂಡ ಹಣವನ್ನು ಚೆನ್ನಾಗಿ ಸಂಪಾದಿಸಿದ ನಿದರ್ಶನಗಳು ಇವೆ. ಆದರೆ ನಾನು ಮಾಡಿದ ಸಿನಿಮಾಗಳು ಚೆನ್ನಾಗಿರಲಿಲ್ಲ ಎಂದಲ್ಲ. ಹಾಗಿದ್ದರೂ, ಆ ಸಿನಿಮಾಗಳನ್ನು ಜನರಿಗೆ ತಲುಪಿಸುವ ವಿಚಾರವಾಗಿ ಪೂರ್ಣ ಪ್ರಮಾಣದ ಕೆಲಸಗಳು ಆಗಲಿಲ್ಲ. ಪ್ರಚಾರದ ಕೆಲಸಗಳು ಪೂರ್ತಿಯಾಗಿ ಆಗಲಿಲ್ಲ. ಈ ಕಾರಣಕ್ಕಾಗಿ ಸಿನಿಮಾಗಳು ಹಿಟ್ ಆಗಲಿಲ್ಲ ಅನಿಸುತ್ತದೆ’ ಎಂದು ಹೇಳಿದರು.

ಮುಂದಿನ ಸಿನಿಮಾ ಹೇಗಿರಬೇಕು?

‘ನಿಮ್ಮ ಮುಂದಿನ ಸಿನಿಮಾ ಹಾಗೂ ಮುಂದಿನ ಪಾತ್ರ ಹೇಗಿರಬೇಕು’ ಎಂಬ ಪ್ರಶ್ನೆ ಕೇಳಿದಾಗ, ‘ನಾನು ನಿಭಾಯಿಸುವ ಪಾತ್ರ ಹಾಗೂ ಆ ಪಾತ್ರ ಇರುವ ಚಿತ್ರ ಜನರ ಮೇಲೆ ನಿಜವಾಗಿಯೂ ಪರಿಣಾಮ ಬೀರಲೇಬೇಕು ಎಂಬ ಉದ್ದೇಶ ಇಟ್ಟುಕೊಂಡು ಸ್ಕ್ರಿಪ್ಟ್‌ ಸಿದ್ಧಪಡಿಸುತ್ತ ಇದ್ದೇವೆ’ ಎಂಬ ಉತ್ತರ ನೀಡಿದರು.

‘ಹುಲಿರಾಯ ಚಿತ್ರದಲ್ಲಿ ನಾನೊಬ್ಬನೇ ಕಾಣುತ್ತಿದ್ದೆ ಎಂದು ಕೆಲವರು ಹೇಳಿದ್ದಿದೆ. ಪಾತ್ರವನ್ನೂ ಕಥೆಯನ್ನೂ ಆ ಮೂಲಕ ಇಡೀ ಸಿನಿಮಾವನ್ನೂ ಗಟ್ಟಿಯಾಗಿಸಬೇಕು ಎಂಬ ಉದ್ದೇಶವನ್ನು ಮನಸ್ಸಿನಲ್ಲಿ ಇಟ್ಟುಕೊಂಡು ಕೆಲಸ ಮಾಡುತ್ತ ಇದ್ದೇವೆ. ಇದರ ಜೊತೆಯಲ್ಲೇ, ನಾನು ಮುಂದೆ ನಿಭಾಯಿಸುವ ಪಾತ್ರವು ಮಾಸ್ ಆಗಿಯೂ ಕ್ಲಾಸ್ ಆಗಿಯೂ ಇರಬೇಕು ಎಂದು ಬಯಸುತ್ತಿದ್ದೇನೆ. ಹಾಗೆಯೇ, ಪಾತ್ರಕ್ಕೆ ನೈಜತೆ ಬೇಕು’ ಎಂದರು.

‘ಈ ವರ್ಷದ ಅಂತ್ಯದ ವೇಳೆಗೆ ಅಥವಾ ಮುಂದಿನ ವರ್ಷದ ಆರಂಭದಲ್ಲಿ ಒಂದು ಸಿನಿಮಾ ಕೊಡುವೆ’ ಎಂಬುದನ್ನು ಸೂಚ್ಯವಾಗಿ ಹೇಳಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.