ADVERTISEMENT

ಮೂರು ಅವತಾರಗಳಲ್ಲಿ ಸೂರ್ಯ

​ಪ್ರಜಾವಾಣಿ ವಾರ್ತೆ
Published 9 ಜುಲೈ 2019, 19:45 IST
Last Updated 9 ಜುಲೈ 2019, 19:45 IST
ಬಂದೋಬಸ್ತ್‌ ಚಿತ್ರದಲ್ಲಿ ಸೂರ್ಯ
ಬಂದೋಬಸ್ತ್‌ ಚಿತ್ರದಲ್ಲಿ ಸೂರ್ಯ   

ಸೂರ್ಯ, ಮೋಹನ್‌ಲಾಲ್‌ ಮುಖ್ಯಪಾತ್ರದಲ್ಲಿ ನಟಿಸಿರುವ ‘ಬಂದೋಬಸ್ತ್‌’ ಟೀಸರ್‌ ಬಿಡುಗಡೆಯಾಗಿದ್ದು, ಚಿತ್ರದ ಕುರಿತಾದ ಕುತೂಹಲವನ್ನು ಹೆಚ್ಚು ಮಾಡಿದೆ. ಲೈಕಾ ಪ್ರೊಡಕ್ಷನ್ಸ್‌ ನಿರ್ಮಾಣದ ಈ ಚಿತ್ರದ 1.43 ನಿಮಿಷದ ಟೀಸರ್‌ ತಮಿಳು ಹಾಗೂ ತೆಲುಗು ಭಾಷೆಗಳಲ್ಲಿ ಬಿಡುಗಡೆಯಾಗಿದ್ದು, ಒಂದೇ ದಿನದಲ್ಲಿ 2 ಲಕ್ಷಕ್ಕೂ ಹೆಚ್ಚು ಜನರು ವೀಕ್ಷಿಸಿದ್ದಾರೆ.

ಟೀಸರ್‌ನಲ್ಲಿ ರಾಜಕಾರಣಿ ಪಾತ್ರದಲ್ಲಿ ಮೋಹನ್‌ಲಾಲ್‌ ಹಾಗೂ ಸೂರ್ಯನ ನಟನೆಯು ಚಿತ್ರಕತೆಯ ಬಗ್ಗೆ ಕುತೂಹಲ ಕೆರಳಿಸಿದ್ದು, ಇದು ಆ್ಯಕ್ಷನ್‌ ಥ್ರಿಲ್ಲರ್‌ ಸಿನಿಮಾ. ಭಯೋತ್ಪಾದನೆ ಕೃತ್ಯವು ಭಾರತ– ಪಾಕಿಸ್ತಾನದ ಮೇಲೆ ಬೀರುವ ಪರಿಣಾಮ, ಎರಡು ದೇಶಗಳ ಸಂಬಂಧ, ರೈತರು ಅನುಭವಿಸುತ್ತಿರುವ ಸಂಕಟಗಳು, ನದಿ ನೀರಿನ ಹಂಚಿಕೆ ವಿಚಾರ, ಭಾರತೀಯ ಸೇನೆಯ ರಹಸ್ಯ ಕಾರ್ಯಾಚರಣೆ– ಈ ವಿಚಾರಗಳನ್ನು ಸಿನಿಮಾ ಕತೆ ಒಳಗೊಂಡಿವೆ.

‘ಘಜಿನಿ’, ‘ಸಿಂಗಂ’ ಚಿತ್ರಗಳ ಮೂಲಕ ತೆಲುಗು ಪ್ರೇಕ್ಷಕರ ಮನ ಗೆದ್ದಿರುವ ಸೂರ್ಯ, ನಾಯಕನಟನಾಗಿ ನಟಿಸುತ್ತಿರುವ ಈ ಹೊಸ ಚಿತ್ರ ಆ ಚಿತ್ರಗಳಷ್ಟೇ ನಿರೀಕ್ಷೆಯನ್ನು ಹುಟ್ಟು ಹಾಕಿದೆ. ಇದರಲ್ಲಿ ಮೂರು ಅವತಾರಗಳಲ್ಲಿ ಸೂರ್ಯ ನಟಿಸಿದ್ದು, ಕಮಾಂಡೋ, ಮುಸ್ಲಿಂ ವ್ಯಕ್ತಿ ಕಥೀರ್‌ ಹಾಗೂ ಸುಭಾಷ್‌ ಎಂಬ ಮೂರು ಪಾತ್ರಗಳಲ್ಲಿ ನಟಿಸಿದ್ದಾರೆ.

ADVERTISEMENT

ಮಲಯಾಳಂ ನಟ ಮೋಹನ್‌ಲಾಲ್‌ ಮತ್ತೊಂದು ಪ್ರಧಾನ ಪಾತ್ರದಲ್ಲಿದ್ದಾರೆ. ನಿಜಜೀವನದಲ್ಲೂ ದಂಪತಿಗಳಾಗಿರುವ ಆರ್ಯ– ಸಯ್ಯೇಶಾ ಸೈಗಲ್ ಅವರು ತಮ್ಮ ಮದುವೆಯ ಬಳಿಕ ಮೊದಲ ಬಾರಿಗೆ ಈ ಚಿತ್ರದಲ್ಲಿ ಜೋಡಿಯಾಗಿ ನಟಿಸುತ್ತಿದ್ದಾರೆ.

ಈ ಚಿತ್ರದ ಟೀಸರ್‌ ಅನ್ನು ರಾನಾ ದಗ್ಗುಬಾಟಿ ತಮ್ಮ ಟ್ವಿಟ್ಟರ್‌ ಖಾತೆಯಲ್ಲಿ ಹಂಚಿಕೊಂಡಿದ್ದರು. ಈ ಚಿತ್ರದ ಹಾಡುಗಳು ಸದ್ಯದಲ್ಲೇ ಬಿಡುಗಡೆಯಾಗಲಿವೆ ಎಂದು ಚಿತ್ರತಂಡ ಮಾಹಿತಿ ನೀಡಿದೆ. ಚಿತ್ರ ಆಗಸ್ಟ್‌ 30ಕ್ಕೆ ಬಿಡುಗಡೆಯಾಗಲಿದ್ದು, ಬೊಮ್ಮನ್ ಇರಾನಿ, ಪೂರ್ಣ, ನಾಗಿನೀಡು ಮೊದಲಾದವರು ಪ್ರಮುಖ ಪಾತ್ರಗಳಲ್ಲಿ ನಟಿಸಲಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.