ADVERTISEMENT

ಸಿನಿ ಉತ್ಸವದ ಮಾತು ಕತೆ

ಎಸ್.ರಶ್ಮಿ
Published 25 ಫೆಬ್ರುವರಿ 2019, 20:00 IST
Last Updated 25 ಫೆಬ್ರುವರಿ 2019, 20:00 IST
   

ಎಲ್ಲಿದ್ದೆ? ಐದರಲ್ಲಿ...
ಹೇಗಿತ್ತು.. ಸಖತ್ತಾಗಿತ್ತು.. ನೀನು ?
7ರಲ್ಲಿದ್ದೆ. ಪರವಾಗಿ ಇಲ್ಲ...
ಮುಂದೆಲ್ಲಿ ಒಂಬತ್ತು ಅಥವಾ ಹತ್ತು ಅಂದ್ಕೊಂಡಿದೀನಿ.
ಕ್ಯೂ ನೋಡಿ ನಿರ್ಧರಿಸುವೆ.
ನಾನೂ ಅಷ್ಟೆ, ನಾಲ್ಕು ಅಥವಾ ಐದು..
ನಾಳೆ ರಜಾನಾ...
ಹಂ ಮತ್ತೆ.. ಕೊಡದೇ ಇದ್ರೆ ರಜಾ ಹಾಕಿ, ಸಿಕ್ಕ ಸಿಕ್ಕ ಸಿನಿಮಾ ನೋಡೋದೇನೆ

ಪುಟ 103 ಓದು... ನೋಡಬಹುದು ಅಲ್ವಾ... ಕೆಲವೊಮ್ಮೆ ಇಲ್ಲಿ ಬರದಿರೋದೆ ಒಂಥರಾ ಇರ್ತದೆ, ಸಿನಿಮಾನೇ ಇನ್ನೊಂಥರಾ ಇರ್ತದೆ... 107 ಪುಟ ತೆಗಿ... ಯಾವುದು ಹೋಗೋದು... ಅದು ಇನ್ನೊಂದಿನ ಸಹ ಇದೆ. ಇದು ಇವೊತ್ತು ಮಾತ್ರ ಇರೋದು. ಇದನ್ನೇ ಇವೊತ್ತು ನೋಡೋಣ...

ನಾನು ಒಂದೆರಡು ವಾರಗಳ ವಾರದ ರಜೆ ಕೂಡಿಹಾಕಿದ್ದೆ. ನಾಳೆ ನಾಳಿದ್ದು ಫುಲ್‌ 5 ಸಿನಿಮಾ ನೋಡಿಯೇ ತೀರೋದು..

ADVERTISEMENT

ತಮಾಶೆ ಹೇಳ್ತೀನಿ ಕೇಳು, ‘ದಿ ಬ್ರಾ’ ಚಿತ್ರ ನೋಡಲು ಸಾಲಿನಲ್ಲಿ ನಿಂತಿದ್ನಾ. ಯಾವ ಚಿತ್ರದ ಸಾಲಿದು ಅಂತ ಎಲ್ಲ ಕೇಳೋರೆ.. ಹೇಳೋಕೆ ಮೊದಲೆಲ್ಲ ಮುಜುಗರ ಆಯ್ತು. ಆಮೇಲೆ, ನೋಡೋದೆ ಉಂಟಂತೆ ಹೇಳೋಕ್ಕೇನು ಅಂತ ಹೇಳಲಾರಂಭಸಿದೆ... ನಗು

ಅಲ್ಲಾ, ಯಾವ ಸಿನಿಮಾ ನೋಡಿದ್ರೂ ಎಲ್ಲದರಲ್ಲೂ ಅನಿಷ್ಟಕ್ಕೆ ಶನೈಶ್ವರನೇ ಕಾರಣ ಎಂಬಂತೆ ಗಂಡನಾದವನು ಹೆಂಡ್ತಿಯ ಮೇಲೆ ರೇಗ್ತಾನೆ ಇರ್ತಾನಲ್ಲ... ವಿಶ್ವದ ಪತಿಗಳ ಬಗೆಗಿನ ಈ ಧೋರಣೆ ಎಲ್ಲ ಸಂಸ್ಕೃತಿಯಲ್ಲಿದೆ ನೋಡು..

ಅದೇ ಅಂತೀನಿ, ಈ ಸಿನಿಮಾ ನೋಡಿದಾಗಲೆಲ್ಲ... ನಮ್ಮನೆ ಕಥೆನೇ ಎಷ್ಟೋ ವಾಸಿ ಅನಿಸುತ್ತೆ..

ಅಲ್ಲಾ, ಇರಾನಿ, ಸ್ಪ್ಯಾನಿಷ್‌, ಜರ್ಮನ್‌, ಪೊಲಿಷ್‌, ಕಜಕಿಸ್ತಾನ್‌ ಯಾವ ಭಾಷೆ ಚಿತ್ರದಲ್ಲಿಯೂ ಇಂಗ್ಲಿಷ್‌ ಬಳಸೋದೆ ಇಲ್ಲ. ಶುಕ್ರಮ್‌, ಹಬೀಬಿ ಇಂಥ ಪದಗಳನ್ನೆಲ್ಲ ನಾವೇ ಕಲತ್ವಿ. ಫೋನ್‌ ನಂಬರ್‌ ಸಹ ಅವರದ್ದೇ ಭಾಷೆಯಲ್ಲಿ ಹೇಳ್ತಾರೆ. ಸಬ್‌ಟೈಟಲ್ಸ್‌ ಓದದೇ ಇದ್ರೆ ಅರ್ಥನೇ ಆಗಲ್ಲ. ನಮ್ಮ ಕನ್ನಡದ ಸಿನಿಮಾ ನೋಡು, ಕ್ರಿಯಾಪದಗಳಿಗಷ್ಟೆ ಕನ್ನಡ ಎಂಬತೆ ಆಗಿದೆ. ಅಷ್ಟು ಸರಳವಾಗಿ ಇಂಗ್ಲಿಷ್‌ ಬಳಸ್ತೀವಲ್ಲ...

ಸಿನಿಮಾಲೋಕದವರೇನಾದರೂ ಈ ಸಿನಿಮಾಗಳನ್ನು ನೋಡಿದ್ರೆ ಅವರು ಪ್ರತಿಜ್ಞೆ ಮಾಡಬೇಕು. ಒಂದೇ ಒಂದು ಇಂಗ್ಲಿಷ್‌ ಪದವಿಲ್ಲದ ಸಿನಿಮಾ ಮಾಡ್ತೀನಿ ಅಂತ. ಅಷ್ಟಾದರೂ ಪ್ರೇರಣೆ ಸಿಗ್ಬೇಕು ನೋಡಪ್ಪ...

ಸೀಟ್‌ ಸಿಕ್ತಾ..? ಹಿಂದಿನ ಸೀಟುಗಳನ್ನೆಲ್ಲ ಜ್ಯುರಿಗಳಿಗೆ ಅಂತ ಹೇಳಿ ನಮಗೆ ಕೂರೋಕ್ಕೆ ಬಿಡಲ್ಲ. ಸಿನಿಮಾ ಶುರುವಾದ ಮೇಲೆ, ಸ್ವಯಂ ಸೇವಕರ ಸ್ನೇಹಿತರೇ ಹಿಂಬದಿಯ ಕಳ್ಳದಾರಿಯಿಂದ ಬಂದು ಕೂತ್ಕೋತಾರೆ...

ಅಬ್ಬಾ ಸೀನಿಯರ್‌ ಸಿಟಿಜನ್‌ ಆಗುವ ಲಾಭ ಅಂದ್ರೆ ಇದೊಂದು.. ಪ್ರತ್ಯೇಕ ಸಾಲು ಅವರಿಗೆ. ನನಗಿನ್ಯಾವಾಗ ವಯಸ್ಸಾಗುವುದೋ.. ತಲೆ ಮಾತ್ರ ಬೆಳ್ಳಗಾಗಿದೆ. ಡೈ ಮಾಡದೇ ಇದ್ರೆ, ನಂಗೂ ಒಳಗೆ ಬಿಡ್ತಿದ್ರೇನೋ..

ಹಸಿವು ಅಂದ್ರೆ ಹಸಿವು ಕಣ್ರಿ. ಪಿವಿಆರ್‌ನೋರು ಬರೀ ಜಂಕ್‌ ಫುಡ್‌ ಮಾರಾಟ ಮಾಡ್ತಿದಾರೆ... ಮುಂದಿನ ಸಲವಾದರೂ ಪುಳಿಯೋಗರೆ, ಮೊಸರನ್ನ, ಬಿಸಿಬೇಳೆಬಾತ್‌ ಕೊಡಬಾರದಾ? ಹೋಗ್ಲಿ, ದೋಸೆ ಸುರಳಿ ಸುತ್ತಿದರೂ ಸರಿ.. ಹೊಟ್ಟೆಗೆ ಹಿತವಾಗುವಂಥದ್ದೇನಾದರೂ ಕೊಡಬೇಕ್ರಿ..

ಚಹಾ, ಕಾಫಿಗೆ ಅಷ್ಟು ದುಡ್ಡು ಕೊಡೋಕೆ ಬೇಜಾರು.. ಕುಡೀದೆ ಇದ್ರೂ ಬೇಜಾರು.. ಸದ್ಯ ಕುಡಿಯುವ ನೀರಿದೆ. ಸ್ವಚ್ಛವಾದ ಶೌಚಾಲಯ ವ್ಯವಸ್ಥೆ ಇದೆ...
ಬೆಳಗ್ಗೆಯಿಂದು ಮೂರು ಚಿತ್ರ ಆಗಿದೆ. ಇನ್ನೊಂದು ನೋಡ್ಬೇಕಿದೆ. ಆಮೇಲೆ ಮನೆಕಡೆಗೆ... ಮನಸಿನೊಳಗೆಲ್ಲ ಕಸಿವಿಸಿ.. ಆದರೂ ನಾಳೆ ಬೆಳಗ್ಗೆನೇ ಬರಬೇಕೆಂಬ ಕಾತರ.

ಸಿಗಣ ನಾಳೆ, ಇಲ್ಲಾಂದ್ರೆ ಮುಂದಿನ ವರ್ಷ...

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.