ADVERTISEMENT

ಭೀಮಣ್ಣನ ಬಯಲಾಟದ ಬದುಕು

​ಪ್ರಜಾವಾಣಿ ವಾರ್ತೆ
Published 1 ಆಗಸ್ಟ್ 2019, 19:30 IST
Last Updated 1 ಆಗಸ್ಟ್ 2019, 19:30 IST
ಬರಗೂರು ರಾಮಚಂದ್ರಪ್ಪ
ಬರಗೂರು ರಾಮಚಂದ್ರಪ್ಪ   

ಬಯಲಾಟ- ಜನಪದ ಕಲೆಗಳಲ್ಲಿಯೇ ‘ಗಂಡುಕಲೆ’. ಇದು ಗ್ರಾಮೀಣರ ಮನರಂಜನೆಯ ಭಾಗವೂ ಹೌದು. ಆಧುನಿಕತೆಯ ಬಿರುಗಾಳಿಗೆ ಸಿಲುಕಿ ಬಯಲಾಟ ಕಲಾವಿದರ ಬದುಕು ಸಂಕಷ್ಟಕ್ಕೆ ಸಿಲುಕಿದೆ. ಈ ಕಲೆಯನ್ನೇ ಜೀವನದ ಉಸಿರಾಗಿಸಿಕೊಂಡ ಅನಕ್ಷರಸ್ಥ ಕಲಾವಿದನ ಸುತ್ತ ‘ಬಯಲಾಟದ ಭೀಮಣ್ಣ’ ಚಿತ್ರಕ್ಕಾಗಿ ಕಥೆ ಹೊಸೆದಿದ್ದಾರೆ ನಿರ್ದೇಶಕ ಬರಗೂರು ರಾಮಚಂದ್ರಪ್ಪ.

ಚಿತ್ರದ ಆಡಿಯೊ ಬಿಡುಗಡೆಗೆ ಬಂದಿದ್ದ ಚಿತ್ರತಂಡ ಸಿನಿಮಾ ಬಗ್ಗೆ ಮಾಹಿತಿ ಹಂಚಿಕೊಂಡಿತು. ‘ನಾನು 20 ವರ್ಷದ ಹಿಂದೆ ಈ ಪಾತ್ರದಲ್ಲಿ ನಟಿಸಿದ್ದರೆ ಇನ್ನೂ ಚೆನ್ನಾಗಿ ಕುಣಿಯುತ್ತಿದ್ದೆ’ ಎಂದು ಮಾತು ಆರಂಭಿಸಿದರು ಭೀಮಣ್ಣನ ಪಾತ್ರಧಾರಿ ನಟ ಸುಂದರರಾಜ್.

‘ಬರಗೂರು ಮೇಷ್ಟ್ರು ಜೊತೆಗೆ ನನಗೆ ಹಲವು ವರ್ಷಗಳಿಂದ ಒಡನಾಟವಿದೆ. ಅವರು ಕಲಾವಿದರನ್ನು ದುಡಿಸಿಕೊಳ್ಳುವ ರೀತಿಗೆ ನಾನು ಬೆರಗಾಗಿದ್ದೇನೆ’ ಎಂದರು.

ADVERTISEMENT

ಬರಗೂರು ರಾಮಚಂದ್ರಪ್ಪ ಅವರ ನಿರ್ದೇಶನದ ‘ಬೆಕ್ಕು’ ಚಿತ್ರದ ಮೂಲಕ ಸಂಗೀತ ನಿರ್ದೇಶನಕ್ಕೆ ಕಾಲಿಟ್ಟವರು ಗಾಯಕಿ ಶಮಿತಾ ಮಲ್ನಾಡ್‌. ಭೀಮಣ್ಣನ ಕುಣಿತಕ್ಕೂ ಸಂಗೀತ ನೀಡಿದ ಖುಷಿ ಅವರ ಮೊಗದಲ್ಲಿತ್ತು. ‘ಮೇಷ್ಟ್ರು ಜೊತೆಗೆ ನನಗಿದು ಮೂರನೇ ಚಿತ್ರ’ ಎಂದು ಖುಷಿ ಹಂಚಿಕೊಂಡರು ಶಮಿತಾ.

ನಾಯಕ ನಟ ರಂಜಿತ್‌ಗೆ ಇದು ಮೊದಲ ಚಿತ್ರ. ‘ಮೇಷ್ಟ್ರು ಅವರು ನನ್ನ ಪ್ರತಿಭೆ ಗುರುತಿಸಿ ಪಾತ್ರ ನೀಡಿದ್ದಾರೆ. ಈ ಸಿನಿಮಾದಿಂದ ನಾನು ಸಾಕಷ್ಟು ಕಲಿತೆ’ ಎಂದು ಹೇಳಿಕೊಂಡರು.

ಚಿತ್ರದಲ್ಲಿ ಐದು ಹಾಡುಗಳಿದ್ದು, ಐಪಿಎಸ್‌ ಅಧಿಕಾರಿ ಡಿ. ರೂಪಾ, ನಟ ಸಂಚಾರಿ ವಿಜಯ್, ಹನುಮಂತಪ್ಪ ಬಟ್ಟೂರು, ಸುಂದರರಾಜ್‌ ಕಂಠದಾನ ಮಾಡಿದ್ದಾರೆ. ಕಥೆ, ಚಿತ್ರಕಥೆ, ಸಾಹಿತ್ಯ, ಸಂಭಾಷಣೆಯ ಜವಾಬ್ದಾರಿಯನ್ನು ಬರಗೂರು ರಾಮಚಂದ್ರಪ್ಪ ಅವರೇ ಹೊತ್ತಿದ್ದಾರೆ.

ಕೃಷ್ಣವೇಣಿ ನಂಜಪ್ಪ ಕಾಳೇಗೌಡ ಮತ್ತು ಧನಲಕ್ಷ್ಮಿ ಕೃಷ್ಣ‍ಪ್ಪ ಚಿತ್ರಕ್ಕೆ ಆರ್ಥಿಕ ಇಂಧನ ಒದಗಿಸಿದ್ದಾರೆ. ನಟ ರವಿಚಂದ್ರನ್‌ ಚಿತ್ರತಂಡಕ್ಕೆ ಶುಭ ಕೋರಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.