ADVERTISEMENT

ಖ್ಯಾತ ಸಂಗೀತ ನಿರ್ದೇಶಕನಿಗೆ ನುಡಿನಮನ: ಚಿತ್ರೋತ್ಸವದಲ್ಲಿ ವಿಜಯ ಭಾಸ್ಕರ್‌ ನೆನಪು

​ಪ್ರಜಾವಾಣಿ ವಾರ್ತೆ
Published 5 ಮಾರ್ಚ್ 2024, 23:30 IST
Last Updated 5 ಮಾರ್ಚ್ 2024, 23:30 IST
<div class="paragraphs"><p>ವಿಜಯ ಭಾಸ್ಕರ್‌ ಜನ್ಮಶತಮಾನೋತ್ಸವದ ಹಿನ್ನೆಲೆಯಲ್ಲಿ ನಡೆದ ನುಡಿನಮನ ಕಾರ್ಯಕ್ರಮದಲ್ಲಿ ಸಂಗೀತ ಸಂಯೋಜಕ, ಡೆಕ್ಕನ್‌ ಹೆರಾಲ್ಡ್‌ ಸಹ ಸಂಪಾದಕ ಎಸ್‌.ಆರ್‌. ರಾಮಕೃಷ್ಣ, ವಿಜಯ ಭಾಸ್ಕರ್‌ ಅವರ ಪುತ್ರಿಯರಾದ ಶಂಕರಿ ಅನಂತ್‌, ಮಂಗಳ ಗೌರಿ ಭಾಗವಹಿಸಿದ್ದರು </p></div>

ವಿಜಯ ಭಾಸ್ಕರ್‌ ಜನ್ಮಶತಮಾನೋತ್ಸವದ ಹಿನ್ನೆಲೆಯಲ್ಲಿ ನಡೆದ ನುಡಿನಮನ ಕಾರ್ಯಕ್ರಮದಲ್ಲಿ ಸಂಗೀತ ಸಂಯೋಜಕ, ಡೆಕ್ಕನ್‌ ಹೆರಾಲ್ಡ್‌ ಸಹ ಸಂಪಾದಕ ಎಸ್‌.ಆರ್‌. ರಾಮಕೃಷ್ಣ, ವಿಜಯ ಭಾಸ್ಕರ್‌ ಅವರ ಪುತ್ರಿಯರಾದ ಶಂಕರಿ ಅನಂತ್‌, ಮಂಗಳ ಗೌರಿ ಭಾಗವಹಿಸಿದ್ದರು

   

–ಪ್ರಜಾವಾಣಿ ಚಿತ್ರ  

ಬೆಂಗಳೂರು: ‘ಜಯತು ಜಯ ವಿಠಲ..’, ‘ಹಾಡೊಂದ ಹಾಡುವೆ ನೀ ಕೇಳು ಮಗುವೆ..’, ‘ಹಾವಿನ ದ್ವೇಷ..’, ‘ಹೂವೊಂದು ಬಳಿ ಬಂದು..’ ಹೀಗೆ ಕನ್ನಡಿಗರ ಮನಸ್ಸಿನಲ್ಲಿ ಸದಾ ಹಸಿರಾಗಿರುವ ನೂರಾರು ಹಾಡುಗಳಿಗೆ ಸಂಗೀತ ನೀಡಿದ್ದ ಸಂಗೀತ ನಿರ್ದೇಶಕ ದಿವಂಗತ ವಿಜಯ ಭಾಸ್ಕರ್‌ ಜನ್ಮಶತಮಾನೋತ್ಸವ ವರ್ಷವಿದು.

ADVERTISEMENT

ನಗರದ ಒರಾಯನ್‌ ಮಾಲ್‌ನಲ್ಲಿ ನಡೆಯುತ್ತಿರುವ 15ನೇ ಬೆಂಗಳೂರು ಅಂತರರಾಷ್ಟ್ರೀಯ ಚಿತ್ರೋತ್ಸವದಲ್ಲಿ ಮಂಗಳವಾರ(ಮಾರ್ಚ್‌ 5) ವಿಜಯ ಭಾಸ್ಕರ್‌ ಜನ್ಮಶತಮಾನೋತ್ಸವದ ಅಂಗವಾಗಿ ನುಡಿನಮನ ಕಾರ್ಯಕ್ರಮ ನಡೆಯಿತು. ವಿಜಯ ಭಾಸ್ಕರ್‌ ಅವರ ಸಂಗೀತ ಹಾಗೂ ವ್ಯಕ್ತಿತ್ವದ ನೆನಪುಗಳ ಮೆಲುಕು ಇದರಲ್ಲಿ ವಿಶೇಷವಾಗಿತ್ತು.  

ವಿಜಯ ಭಾಸ್ಕರ್‌ ಅವರೊಂದಿಗೆ ಒಡನಾಡಿದ ಸಂದರ್ಭಗಳನ್ನು ನೆನಪಿಸಿಕೊಳ್ಳುತ್ತಾ ಮಾತು ಆರಂಭಿಸಿದ ಸಂಗೀತ ಸಂಯೋಜಕ, ಡೆಕ್ಕನ್‌ ಹೆರಾಲ್ಡ್‌ ಸಹ ಸಂಪಾದಕ ಎಸ್‌.ಆರ್‌. ರಾಮಕೃಷ್ಣ, ‘ವಿಜಯ ಭಾಸ್ಕರ್‌ ಅವರು ಭಾರತದ ಪ್ರಮುಖ ಸಂಗೀತ ಸಂಯೋಜಕರಾಗಿದ್ದರು. ‘ಶ್ರೀ ರಾಮ ಪೂಜ’ ಅವರು ಸಂಗೀತ ಸಂಯೋಜಿಸಿದ್ದ ಮೊದಲ ಸಿನಿಮಾ. ಅಲ್ಲಿಂದಾಚೆಗೆ 700ಕ್ಕೂ ಅಧಿಕ ಸಿನಿಮಾಗಳಿಗೆ ಅವರು ಸಂಗೀತ ನೀಡಿದ್ದರು. ಮುಂಬೈನಲ್ಲಿ ನೌಶಾದ್‌ ಅವರ ಆರ್ಕೆಸ್ಟ್ರಾದಲ್ಲಿ ಕೆಲಸ ಆರಂಭಿಸಿ, ಕನ್ನಡದಲ್ಲಿ ಹಲವು ಭಕ್ತಿ ಪ್ರಧಾನ ಚಿತ್ರಗಳಿಗೆ ಸಂಗೀತ ನೀಡಿದರು. ಪುಟ್ಟಣ್ಣ ಕಣಗಾಲ್‌–ವಿಜಯ ಭಾಸ್ಕರ್‌ ಅವರದ್ದು ಹಿಟ್‌ ಕಾಂಬಿನೇಷನ್‌. ‘ನಾಗರಹಾವು’ ಚಿತ್ರದಿಂದ ವಿಜಯ ಭಾಸ್ಕರ್‌ ಅವರ ಸಂಗೀತದ ಶೈಲಿ ಬದಲಾಗುತ್ತಾ ಹೋಯಿತು. ಒಂದು ರೀತಿ ಡ್ರಮಾಟಿಕ್‌ ಸಂಯೋಜನಾ ಶೈಲಿಯದು. ಅದೇ ರೀತಿ ಹೀರೊಗೆ ಒಂದು ಥೀಮ್‌ ಸಂಗೀತವನ್ನು ನೀಡಲು ಆರಂಭಿಸಿದ್ದು ಇವರೇ. ‘ನಾಗರಹಾವು’ ಚಿತ್ರದ ಹೀರೊ ಥೀಮ್‌ ಸಂಗೀತ ಇದಕ್ಕೆ ಉದಾಹರಣೆ. ಇದು ಇಂದಿಗೂ ಸಿನಿಮಾದಲ್ಲಿ ಪ್ರೇರಣೆಯಾಗಿ ಉಳಿದಿದೆ’ ಎಂದರು.

‘ಚಲನಚಿತ್ರ ಸಂಗೀತದಲ್ಲಿ ಹಲವು ಪ್ರಯೋಗಗಳನ್ನು ವಿಜಯ ಭಾಸ್ಕರ್‌ ಮಾಡಿದರು. ‘ನಾಗರಹಾವು’ ಚಿತ್ರದಲ್ಲಿನ ‘ಚಿತ್ರದುರ್ಗದ ಕಲ್ಲಿನ ಕೋಟೆ..’ ಹಾಡಿನಲ್ಲಿ ಲಾವಣಿ ಶೈಲಿಯಿದೆ. ಕೆಲವು ನಿರ್ದಿಷ್ಟ ವಾದ್ಯಗಳನ್ನಷ್ಟೇ ಅವರು ಬಳಸುತ್ತಿದ್ದರು. ಸರಳವಾದ ಸಂಗೀತ ಅವರ ಪ್ರಮುಖ ಗುರುತಾಗಿತ್ತು. ಕಮರ್ಷಿಯಲ್‌ ಸಿನಿಮಾಗಳ ಜೊತೆಗೆ ಕಲಾತ್ಮಕ ಸಿನಿಮಾಗಳಿಗೂ ಅವರು ಸಂಗೀತ ಸಂಯೋಜನೆ ಮಾಡುತ್ತಿದ್ದರು. ಅವರಿಗೆ ಇದ್ದ ಸಾಹಿತ್ಯದ ಬಗೆಗಿನ ಒಲವನ್ನು ಅವರ ಸಂಗೀತದ ಮುಖಾಂತರ ನಾವು ತಿಳಿದುಕೊಳ್ಳಬಹುದು’ ಎಂದು ರಾಮಕೃಷ್ಣ ಹೇಳಿದರು. 

ವಿಜಯ ಭಾಸ್ಕರ್‌ ಅವರ ಕಿರಿಯ ಪುತ್ರಿ ಮಂಗಳ ಗೌರಿ ಉಪಸ್ಥಿತರಿದ್ದರು. 

ತಂದೆಯ ಪ್ರಪಂಚ ಸಂಗೀತವೇ ಆಗಿತ್ತು. ನಮ್ಮೊಂದಿಗೆ ಅವರ ಒಡನಾಟ ಕಡಿಮೆಯೇ ಇತ್ತು ಎನ್ನಬಹುದು. ಆದರೆ ನಾವು ಬೆಳೆದು ದೊಡ್ಡವರಾಗಿ ಅವರು ಸಂಯೋಜಿಸಿದ ಹಾಡುಗಳನ್ನು ಕೇಳಿದಾಗ ನಮಗಾದ ಹೆಮ್ಮೆ ಮಾತಿನಲ್ಲಿ ಕಟ್ಟಿಕೊಡಲು ಅಸಾಧ್ಯ.
–ಶಂಕರಿ ಅನಂತ್‌ ವಿಜಯ ಭಾಸ್ಕರ್‌, ಹಿರಿಯ ಪುತ್ರಿ

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.