ADVERTISEMENT

ಫೆಬ್ರುವರಿ 26ರಿಂದ ಬೆಂಗಳೂರು ಅಂತರರಾಷ್ಟ್ರೀಯ ಸಿನಿಮೋತ್ಸವ

​ಪ್ರಜಾವಾಣಿ ವಾರ್ತೆ
Published 29 ಜನವರಿ 2020, 13:34 IST
Last Updated 29 ಜನವರಿ 2020, 13:34 IST
ಕರ್ನಾಟಕ ಚಲನಚಿತ್ರ ಅಕಾಡೆಮಿ ಅಧ್ಯಕ್ಷ ಸುನೀಲ್‌ ಪುರಾಣಿಕ್‌ ನಿರ್ಮಾಪಕರ ಸಂಘದ ಮುಖಂಡರೊಂದಿಗೆ ಸಭೆ ನಡೆಸಿದರು.
ಕರ್ನಾಟಕ ಚಲನಚಿತ್ರ ಅಕಾಡೆಮಿ ಅಧ್ಯಕ್ಷ ಸುನೀಲ್‌ ಪುರಾಣಿಕ್‌ ನಿರ್ಮಾಪಕರ ಸಂಘದ ಮುಖಂಡರೊಂದಿಗೆ ಸಭೆ ನಡೆಸಿದರು.   

ಬೆಂಗಳೂರು: 12ನೇ ಬೆಂಗಳೂರು ಅಂತರರಾಷ್ಟ್ರೀಯ ಸಿನಿಮೋತ್ಸವ ಅದ್ಧೂರಿಯಾಗಿ ನಡೆಸಲು ರಾಜ್ಯ ಚಲನಚಿತ್ರ ಅಕಾಡೆಮಿ ತೀರ್ಮಾನಿಸಿದೆ.

ಅಕಾಡೆಮಿಯ ನೂತನ ಅಧ್ಯಕ್ಷ ಸುನೀಲ್ ಪುರಾಣಿಕ್ ಅವರು, ಸಿನಿಮೋತ್ಸವಯಶಸ್ವಿಯಾಗಿ ನಡೆಸುವ ನಿಟ್ಟಿನಲ್ಲಿಕರ್ನಾಟಕ ಚಲನಚಿತ್ರ ವಾಣಿಜ್ಯ ಮಂಡಳಿಯ ಪದಾಧಿಕಾರಿಗಳು ಮತ್ತು ನಿರ್ಮಾಪಕರ ಸಂಘದ ಪದಾಧಿಕಾರಿಗಳ ಜತೆ ಮಂಗಳವಾರ ಪ್ರತ್ಯೇಕ ಸಭೆ ನಡೆಸಿದರು.

ಚಿತ್ರೋತ್ಸವದ ಉದ್ಘಾಟನೆ ಮತ್ತು ಸಮಾರೋಪದಲ್ಲಿ ಚಿತ್ರರಂಗಕ್ಕೆ ಸಂಬಂಧಿಸಿದ ಎಲ್ಲರೂ ಸಕ್ರಿಯವಾಗಿ ಪಾಲ್ಗೊಳ್ಳುವ ಸಂಬಂಧ ಸಭೆಯಲ್ಲಿ ಚರ್ಚಿಸಲಾಯಿತು. ಪದಾಧಿಕಾರಿಗಳು, ನಿರ್ದೇಶಕರು ಮತ್ತು ನಿರ್ಮಾಪಕರು ಚಿತ್ರೋತ್ಸವದಲ್ಲಿ ಯಾವುದೇ ಅವ್ಯವಸ್ಥೆ,ಆಭಾಸಗಳು ಆಗದಂತೆ ಮುನ್ನೆಚ್ಚರಿಕೆಗಳನ್ನು ತೆಗೆದುಕೊಳ್ಳುವ ಬಗ್ಗೆ ಸಲಹೆಗಳನ್ನು ನೀಡಿದರು.

ADVERTISEMENT

ಸಿನಿಮೋತ್ಸವದ ಕಲಾತ್ಮಕ ನಿರ್ದೇಶಕ ವಿದ್ಯಾಶಂಕರ್, ಚಿತ್ರೋತ್ಸವದ ಸಿದ್ಧತೆಯ ಮಾಹಿತಿ ಹಂಚಿಕೊಂಡರು.

ಸಭೆಯಲ್ಲಿ ವಾಣಿಜ್ಯ ಮಂಡಳಿಯ ಅಧ್ಯಕ್ಷ ಡಿ.ಆರ್.ಜೈರಾಜ್‌, ಉಪಾಧ್ಯಕ್ಷ ಉಮೇಶ ಬಣಕಾರ್‌, ನಿರ್ದೇಶಕ ನಾಗಣ್ಣ, ಗೌರವ ಕಾರ್ಯದರ್ಶಿಗಳಾದ ಎನ್.ಎಂ. ಸುರೇಶ್‌, ಎ.ಗಣೇಶ್, ನರಸಿಂಹಲು, ಕೆ.ಸಿ.ಎನ್. ಚಂದ್ರಶೇಖರ್‌, ಕೆ.ವಿ. ಚಂದ್ರಶೇಖರ್‌, ಸಾ.ರಾ.ಗೋವಿಂದು, ಥಾಮಸ್‌ ಡಿʼಸೋಜಾ, ನಿರ್ಮಾಪಕರ ಸಂಘದ ಅಧ್ಯಕ್ಷ ಡಿ.ಕೆ. ರಾಮಕೃಷ್ಣ, ಉಪಾಧ್ಯಕ್ಷ ಎಂ.ಜಿ. ರಾಮಮೂರ್ತಿ, ಜಂಟಿ ಕಾರ್ಯದರ್ಶಿ ರಮೇಶ್‌ ಯಾದವ್‌, ಖಜಾಂಚಿ ಆರ್.ಎಸ್.‌ ಗೌಡ, ಕಾರ್ಯಕಾರಿ ಸಮಿತಿ ಸದಸ್ಯರಾದ ಸುಂದರರಾಜ್‌, ಪ್ರಮೀಳಾ ಜೋಷಾಯಿ, ನಂದಿಹಾಳ್‌, ಅಂಚೆಹಳ್ಳಿ ಶಿವಕುಮಾರ್‌, ಅಕಾಡೆಮಿ ರಿಜಿಸ್ಟ್ರಾರ್‌ ಹಿಮಂತರಾಜು ಇದ್ದರು.

ಫೆಬ್ರುವರಿ 26ಕ್ಕೆ ಚಿತ್ರೋತ್ಸವ ಆರಂಭವಾಗಲಿದ್ದು, ಮಾರ್ಚ್‌ 4ಕ್ಕೆ ಮುಗಿಯಲಿದೆ. ಕಂಠೀರವ ಒಳಾಂಗಣ ಕ್ರೀಡಾಂಗಣದಲ್ಲಿ ಉದ್ಘಾಟನೆ, ವಿಧಾನಸೌಧದ ಬ್ಯಾಂಕ್ವೆಟ್‌ ಹಾಲ್‌ನಲ್ಲಿ ಸಮಾರೋಪ ಸಮಾರಂಭ ಹಮ್ಮಿಕೊಳ್ಳಲಾಗಿದೆ. 26ರಿಂದ ಓರಾಯನ್‌ ಮಾಲ್‌ನ ಮಲ್ಟಿಫ್ಲೆಕ್ಸ್‌ ಚಿತ್ರಮಂದಿರಗಳಲ್ಲಿ ಚಲನಚಿತ್ರಗಳ ಪ್ರದರ್ಶನ ನಡೆಯಲಿದೆ.

‘ಚಿತ್ರಗಳ ಆಯ್ಕೆ ಪಾರದರ್ಶಕವಾಗಿರಲಿದೆ’

‘ಬೆಂಗಳೂರು ಅಂತರರಾಷ್ಟ್ರೀಯ ಸಿನಿಮೋತ್ಸವಕ್ಕೆ ಚಿತ್ರಗಳ ಆಯ್ಕೆಯನ್ನು ಅತ್ಯಂತ ಪಾರದರ್ಶಕವಾಗಿ ನಡೆಸಲು ಎಲ್ಲ ರೀತಿಯ ಕ್ರಮ ತೆಗೆದುಕೊಂಡಿದ್ದೇವೆ’ ಎಂದು ರಾಜ್ಯ ಚಲನಚಿತ್ರ ಅಕಾಡೆಮಿ ಅಧ್ಯಕ್ಷ ಸುನೀಲ್‌ ಪುರಾಣಿಕ್‌ ತಿಳಿಸಿದ್ದಾರೆ.

ಈ ಬಾರಿಯ ಸಿನಿಮೋತ್ಸವಕ್ಕೆ ಕನ್ನಡ ಚಿತ್ರಗಳ ಆಯ್ಕೆ ಮೊದಲೇ ನಡೆದಿದ್ದು, ಸಂಭಾವ್ಯ ಪಟ್ಟಿ ಸಾಮಾಜಿಕ ಜಾಲತಾಣದಲ್ಲಿ ಹರಿದಾಡುತ್ತಿರುವ ಬಗ್ಗೆ ಕನ್ನಡ ಚಲನಚಿತ್ರ ನಿರ್ಮಾಪಕರು ಮತ್ತು ನಿರ್ದೇಶಕರು ಹಾಗೂ ತಂತ್ರಜ್ಞರ ಪರವಾಗಿ ಅಕಾಡೆಮಿಗೆ ದೂರಿನ ಪತ್ರವೊಂದು ಸಲ್ಲಿಕೆಯಾಗಿರುವ ಬಗ್ಗೆ ಅವರು ಈಪ್ರತಿಕ್ರಿಯೆ ನೀಡಿದ್ದಾರೆ.

‘ಸಿನಿಮೋತ್ಸವಕ್ಕೆ ಚಿತ್ರಗಳ ಆಯ್ಕೆ ಪಾರದರ್ಶಕವಾಗಿ ನಡೆಸಲು ಹೊರರಾಜ್ಯಗಳಿಂದ ಜ್ಯೂರಿಗಳನ್ನು ಕರೆಸಿದ್ದೇವೆ. ಅವರು ಸಿನಿಮಾ ವೀಕ್ಷಣೆ ಮಾಡಿ, ಗುಣಮಟ್ಟದ ಚಿತ್ರಗಳನ್ನು ಆಯ್ಕೆ ಮಾಡುತ್ತಾರೆ. ಸಾಮಾಜಿಕ ಜಾಲತಾಣದಲ್ಲಿ ಹರಿದಾಡುತ್ತಿರುವ ಪಟ್ಟಿಮೂರ್ಖತನದಿಂದ ಕೂಡಿದೆ. ಊಹೆ ಮೇಲೆ ಚಿತ್ರಗಳ ಪಟ್ಟಿ ತಯಾರಿಸಿ ನಮ್ಮನ್ನು ಅವಮಾನ ಮಾಡುವ ಉದ್ದೇಶ ಇದರಲ್ಲಿ ಇದ್ದಂತಿದೆ. ಇದೊಂದು ವ್ಯವಸ್ಥಿತ ಸಂಚು.ಈ ಬಗ್ಗೆ ನಾನು ತಲೆ ಕೆಡಿಸಿಕೊಳ್ಳುವುದಿಲ್ಲ’ ಎಂದು ಅವರು ‘ಪ್ರಜಾವಾಣಿ’ಗೆ ಪ್ರತಿಕ್ರಿಯಿಸಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.