ADVERTISEMENT

ಮಾರ್ಚ್‌.23ರಿಂದ ಬೆಂಗಳೂರು ಅಂತರರಾಷ್ಟ್ರೀಯ ಚಲನಚಿತ್ರೋತ್ಸವ

ಪ್ರಜಾವಾಣಿ ವೆಬ್‌ ಡೆಸ್ಕ್‌ 
Published 7 ಫೆಬ್ರುವರಿ 2023, 16:10 IST
Last Updated 7 ಫೆಬ್ರುವರಿ 2023, 16:10 IST
   

ಬೆಂಗಳೂರು: ಬೆಂಗಳೂರು ಅಂತರರಾಷ್ಟ್ರೀಯ ಚಲನಚಿತ್ರೋತ್ಸವದ 14ನೇ ಆವೃತ್ತಿ ಮಾರ್ಚ್‌.23ರಿಂದ ಪ್ರಾರಂಭವಾಗಲಿದೆ ಎಂದು ಕರ್ನಾಟಕ ಚಲನಚಿತ್ರ ಅಕಾಡೆಮಿ ಅಧ್ಯಕ್ಷ ಅಶೋಕ್ ಕಶ್ಯಪ್ ಪ್ರಜಾವಾಣಿಗೆ ತಿಳಿಸಿದರು.

ಮಂಗಳವಾರ ಚಲನಚಿತ್ರೋತ್ಸವ ಸಲಹಾ ಸಮಿತಿ ಸಭೆ ನಡೆದಿದ್ದು, ಸಭೆಯಲ್ಲಿ ಚಿತ್ರೋತ್ಸವದ ದಿನಾಂಕದ ಚರ್ಚೆಯಾಗಿದೆ. ಬುಧವಾರ ನಡೆಯಲಿರುವ ಸಂಘಟನಾ ಸಮಿತಿ ಸಭೆ ಬಳಿಕ ಕಂದಾಯ ಸಚಿವ ಆರ್‌.ಅಶೋಕ್‌ ಅವರೊಂದಿಗೆ ಮುಖ್ಯಮಂತ್ರಿಗಳನ್ನು ಭೇಟಿ ಮಾಡಿ ದಿನಾಂಕ ಅಧಿಕೃತವಾಗಿ ಘೋಷಿಸುತ್ತೇವೆ. ಸರ್ಕಾರದಿಂದ ಅನುದಾನ ಬಿಡುಗಡೆ ಪ್ರಕ್ರಿಯೆ ಕೂಡ ಮುಗಿದಿದೆ ಎಂದು ಕಶ್ಯಪ್‌ ಹೇಳಿದರು.

ಮಂಗಳವಾರ ನಗರದಲ್ಲಿ ನಡೆದ ಪುನೀತ್‌ ರಾಜ್‌ಕುಮಾರ್‌ ರಸ್ತೆ ನಾಮಕರಣ ಕಾರ್ಯಕ್ರಮದಲ್ಲಿ ಮುಖ್ಯಮಂತ್ರಿ ಬಸವರಾಜ್‌ ಬೊಮ್ಮಾಯಿ ಚಿತ್ರೋತ್ಸವದ ಅಧಿಕೃತ ಲಾಂಛನವನ್ನು ಕೂಡ ಬಿಡುಗಡೆಗೊಳಿಸಿದ್ದಾರೆ. ಈ ತಿಂಗಳ ಅಂತ್ಯದಲ್ಲಿ ಚಿತ್ರೋತ್ಸವ ಮತ್ತು ಸ್ಪರ್ಧಾ ವಿಭಾಗದ ಚಲನಚಿತ್ರಗಳಿಗೆ ಆಹ್ವಾನಿಸಲಾಗುವುದು. ಎಲ್ಲವೂ ಆನ್‌ಲೈನ್‌ ಆಗಿರುವುದರಿಂದ ಸಮಯಾಭಾವ ಗುಣಮಟ್ಟದ ಚಿತ್ರಗಳ ಆಯ್ಕೆಗೆ ಹೆಚ್ಚಿನ ಪರಿಣಾಮ ಬೀರುವುದಿಲ್ಲ ಎಂದು ಸಮಿತಿ ತಿಳಿಸಿದೆ.

ADVERTISEMENT

ತೀರ್ಪುಗಾರರ ಸಮಿತಿಯಲ್ಲಿ ಪ್ರಶಸ್ತಿ ವಿಜೇತರು
ಹಿಂದಿನ ಚಿತ್ರೋತ್ಸವದಲ್ಲಿ ನಡೆದ ಯಾವ ಲೋಪ ದೋಷಗಳು ಮರುಕಳಿಸದಂತೆ ಈ ಸಲ ಸಮಿತಿ ಎಚ್ಚರಿಕೆ ವಹಿಸುತ್ತಿದೆ. ‘ನಮ್ಮಲ್ಲಿ ರಾಷ್ಟ್ರ, ರಾಜ್ಯ ಪ್ರಶಸ್ತಿ ಪಡೆದ ಸಾಕಷ್ಟು ಗಣ್ಯರು, ಹಿರಿಯರು ಇದ್ದಾರೆ. ನಾನು ಕೂಡ ಸಿನಿಮಾ ರಂಗದಲ್ಲಿ 4 ದಶಕಗಳ ಅನುಭವ ಹೊಂದಿರುವೆ. ಹೀಗಾಗಿ ಯಾರಿಗೂ ಅನ್ಯಾಯವಾಗಲು ಬಿಡುವುದಿಲ್ಲ. ಸಿನಿಮಾ ಯಾವತ್ತಿಗೂ ಸಿನಿಮಾ. ಹೀಗಾಗಿ ಈ ಸಲದ ಆಯ್ಕೆಯಲ್ಲಿ ಎಡ, ಬಲದ ವಿವಾದ ನುಸುಳುವುದಿಲ್ಲ. ಚಿತ್ರ ಆಯ್ಕೆ ಸಮಿತಿಯಲ್ಲಿ ಪ್ರಶಸ್ತಿ ವಿಜೇತರೇ ಮುನ್ನೆಲೆಯಲ್ಲಿರುತ್ತಾರೆ’ ಎಂದು ಕಶ್ಯಪ್‌ ಹೇಳಿದರು.

ನಾಳೆ ಸಂಘಟನಾ ಸಮಿತಿ ಸಭೆ:
ಈ ಸಲ ಚಿತ್ರೋತ್ಸವದಲ್ಲಿ ಸ್ಥಳೀಯ, ದೇಶೀಯ ಮತ್ತು ಅಂತರರಾಷ್ಟ್ರೀಯ ಮಟ್ಟದಲ್ಲಿ ಗುರುತಿಸಿಕೊಂಡ ಅತ್ಯುತ್ತಮ ಚಿತ್ರಗಳು ಸೇರಿ ಸುಮಾರು 300 ಸಿನಿಮಾ ಪ್ರದರ್ಶನಕ್ಕೆ ಸಮಿತಿ ಆಲೋಚಿಸಿದೆ. ಆಯ್ಕೆಗಾಗಿ ಸೂಕ್ತ ಮಾನದಂಡ ಮತ್ತು ನಿಯಮಗಳನ್ನು ಸಿದ್ಧಪಡಿಸಲಾಗಿದ್ದು ನಾಳೆ ನಡೆಯಲಿರುವ ಸಂಘಟನಾ ಸಮಿತಿ ಸಭೆಯಲ್ಲಿ ಇದಕ್ಕೊಂದು ಅಂತಿಮ ರೂಪ ಸಿಗಲಿದೆ.

ಮಾನ್ಯತೆಗೆ ಧಕ್ಕೆ ಇಲ್ಲ:
‘ಹಿಂದಿನ ವರ್ಷ ಮಾ.3ರಂದು ಚಿತ್ರೋತ್ಸವ ನಡೆದಿತ್ತು. ಈ ಸಲ ಮಾ.23ಕ್ಕೆ ನಡೆಯುತ್ತಿದೆ. ಬೆಂಗಳೂರು ಚಿತ್ರೋತ್ಸವಕ್ಕೆ ಸಿಕ್ಕ ಎಫ್‌ಐಎಪಿಎಫ್‌ನಂತಹ ಮಾನ್ಯತೆಗೆ ಯಾವುದೇ ಧಕ್ಕೆಯಾಗುವುದಿಲ್ಲ. ಬೇರೆ ಚಿತ್ರೋತ್ಸವಗಳ ಜತೆ ಸಂಘರ್ಷವಾಗಬಾರದು ಎಂಬ ಕಾರಣಕ್ಕಷ್ಟೆ ಪ್ರತಿ ವರ್ಷ ಒಂದೇ ನಿರ್ದಿಷ್ಟ ದಿನದಂದು ಅಥವಾ ಆ ತಿಂಗಳಲ್ಲಿ ಚಿತ್ರೋತ್ಸವ ನಡೆಸಬೇಕು ಎಂಬ ನಿಯಮವಿದೆ’
ಅಶೋಕ್‌ ಕಶ್ಯಪ್‌, ಕರ್ನಾಟಕ ಚಲನಚಿತ್ರ ಅಕಾಡೆಮಿ ಅಧ್ಯಕ್ಷ

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.