ADVERTISEMENT

ಭಿನ್ನ ಪಾತ್ರಗಳನ್ನು ಮಾಡುವ ಹಪಹಪಿ: ನಟಿ ಭಾವನಾ

​ಪ್ರಜಾವಾಣಿ ವಾರ್ತೆ
Published 11 ಡಿಸೆಂಬರ್ 2025, 20:20 IST
Last Updated 11 ಡಿಸೆಂಬರ್ 2025, 20:20 IST
ಭಾವನಾ 
ಭಾವನಾ    

‘ಗಾಳಿಪಟ’ ಸಿನಿಮಾ ಮೂಲಕ ಮಿಂಚಿದ ನಟಿ ಭಾವನಾ ರಾವ್‌ ಬಳಿಕ ‘ಹೊಂದಿಸಿ ಬರೆಯಿರಿ’, ‘ಗ್ರೇ ಗೇಮ್ಸ್‌’ ಸೇರಿದಂತೆ ಹಲವು ಸಿನಿಮಾಗಳಲ್ಲಿ ನಟಿಸಿದ್ದರು. ಇದೀಗ ಜಡೇಶ್‌ ಕೆ.ಹಂಪಿ ನಿರ್ದೇಶನದ ‘ಲ್ಯಾಂಡ್‌ಲಾರ್ಡ್‌’ ಸಿನಿಮಾ ಮೂಲಕ ಮತ್ತೆ ತೆರೆಗೆ ಬರುತ್ತಿದ್ದಾರೆ. ರಾಜ್‌ ಈ ಸಿನಿಮಾದಲ್ಲಿ ಖಳನಾಯಕನಾಗಿ ಕಾಣಿಸಿಕೊಳ್ಳುತ್ತಿದ್ದು, ಭಾವನಾ ಅವರ ಜೋಡಿಯಾಗಿದ್ದಾರೆ. 

ಸಿನಿಪಯಣದ ಕುರಿತು ಮಾತನಾಡಿದ ಭಾವನಾ, ‘ಗಾಳಿಪಟ’ ಸಿನಿಮಾದಲ್ಲಿ ‘ಪಾವನಿ’ ಎಂಬ ಪಾತ್ರದ ಮೂಲಕ ನಾನು ಚಿತ್ರರಂಗಕ್ಕೆ ಬಂದೆ. ಅಲ್ಲಿಂದ ಇಲ್ಲಿಯವರೆಗಿನ ಸಿನಿಪಯಣದಲ್ಲಿ ನನಗೆ ಯಾವುದೇ ವಿಷಾದವಿಲ್ಲ. ಆದರೆ ತೃಪ್ತಿ ಇಲ್ಲ ಎನ್ನಬಹುದು. ಭಿನ್ನವಾದ ಪಾತ್ರಗಳನ್ನು ನಿರಂತರವಾಗಿ ಮಾಡಬೇಕು ಎನ್ನುವ ಹಪಹಪಿಯಲ್ಲಿ ಸದಾ ಇರುತ್ತೇನೆ. ಈ ಪಯಣದಲ್ಲಿ ಹಲವು ವಿಷಯಗಳನ್ನು ಕಲಿತಿದ್ದೇನೆ’ ಎಂದರು. 

‘ಲ್ಯಾಂಡ್‌ಲಾರ್ಡ್‌’ ಸಿನಿಮಾದಲ್ಲಿ ‘ಪದ್ಮ’ ಎಂಬ ಪಾತ್ರದಲ್ಲಿ ರಾಜ್‌ ಬಿ.ಶೆಟ್ಟಿ ಅವರ ಜೋಡಿಯಾಗಿ ನಟಿಸಿದ್ದೇನೆ. ಇದು ಪತ್ನಿಯಾಗಿಯೋ, ಪ್ರೇಯಸಿಯಾಗಿಯೋ ಎನ್ನುವುದನ್ನು ಸಿನಿಮಾದಲ್ಲೇ ನೋಡಬೇಕು. ಇದೊಂದು ಬಹಳ ಕಚ್ಚ ಲುಕ್‌ನಲ್ಲಿರುವ ಜಟಿಲವಾದ, ಸುಂದರ ಪಾತ್ರ. ಪ್ರೇಕ್ಷಕರ ಮನಸ್ಸಿನಲ್ಲಿ ಉಳಿಯುವಂಥ ‘ಪದ್ಮ’ಳಾಗಿ ಕಾಣಿಸಿಕೊಳ್ಳಲಿದ್ದೇನೆ. ಎಲ್ಲರಂತೆ ಒಂದು ಸಿನಿಮಾದ ಪಾತ್ರದಿಂದಾಗಿ ಮೂರು ಹೊಸ ಸಿನಿಮಾಗಳು ಸಿಗಲಿ ಎನ್ನುವ ನಿರೀಕ್ಷೆ ನನಗೂ ಇದೆ. ಕೆಲವೊಮ್ಮೆ ನಿರೀಕ್ಷೆ ಅತಿಯಾಗಿ ಬೇಸರ ಉಂಟಾಗಿದ್ದೂ ಇದೆ. ಹಾಗಾಗಿ ಹೆಚ್ಚು ನಿರೀಕ್ಷೆಯನ್ನು ಹೊತ್ತು ಹೆಜ್ಜೆ ಇಡುವವಳು ನಾನಲ್ಲ’ ಎನ್ನುತ್ತಾರೆ ಭಾವನಾ. 

ADVERTISEMENT

‘ಸಿನಿಮಾದಲ್ಲಿ ದುನಿಯಾ ವಿಜಯ್‌ ಹಾಗೂ ರಾಜ್‌ ಅವರ ಪಾತ್ರಗಳು ಪ್ರಮುಖವಾಗಿದ್ದರೂ, ಜಡೇಶ್‌ ಎಲ್ಲಾ ಪಾತ್ರಗಳಿಗೂ ಪ್ರಾಮುಖ್ಯತೆಯನ್ನು ನೀಡಿದ್ದಾರೆ. ಸೆಟ್‌ನಲ್ಲಿ ರಾಜ್‌ ಅವರ ಜೊತೆ ದೈವಾರಾಧನೆ, ರಾಜಕೀಯ ಹೀಗೆ ಹಲವು ವಿಷಯಗಳ ಕುರಿತು ಚರ್ಚೆ ಮಾಡುತ್ತಿದ್ದೆ. ಎರಡು ದಿನಗಳ ಚಿತ್ರೀಕರಣದ ಬಳಿಕ ಈ ಸಿನಿಮಾ ಖಂಡಿತವಾಗಿಯೂ ಹಿಟ್‌ ಆಗಲಿದೆ ಎನ್ನುವ ಭಾವನೆ ನನ್ನಲ್ಲಿ ಮೂಡಿತ್ತು’ ಎಂದರು.  

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.