ADVERTISEMENT

ಯಮನ ಪಾತ್ರದಲ್ಲಿ ಚಿಕ್ಕಣ್ಣ ಕಾಮಿಡಿ

​ಪ್ರಜಾವಾಣಿ ವಾರ್ತೆ
Published 14 ಸೆಪ್ಟೆಂಬರ್ 2019, 11:39 IST
Last Updated 14 ಸೆಪ್ಟೆಂಬರ್ 2019, 11:39 IST
ಬಿಲ್‌ಗೇಟ್ಸ್‌ ಸಿನಿಮಾದಲ್ಲಿ ಶಿಶಿರ್‌ ಶಾಸ್ತ್ರಿ ಮತ್ತು ಚಿಕ್ಕಣ್ಣ
ಬಿಲ್‌ಗೇಟ್ಸ್‌ ಸಿನಿಮಾದಲ್ಲಿ ಶಿಶಿರ್‌ ಶಾಸ್ತ್ರಿ ಮತ್ತು ಚಿಕ್ಕಣ್ಣ   

ನಟರಾದ ಶಿಶಿರ್‌ ಶಾಸ್ತ್ರಿ ಮತ್ತು ಚಿಕ್ಕಣ್ಣ ಮುಖ್ಯ ಭೂಮಿಕೆಯಲ್ಲಿರುವ ‘ಬಿಲ್‌ಗೇಟ್ಸ್‌’ ಚಿತ್ರ ಬಹುತೇಕ ಪೂರ್ಣಗೊಂಡಿದ್ದು, ತೆರೆಗೆ ಬರಲು ಸಜ್ಜಾಗಿದೆ. ಚಿತ್ರದ ಟೀಸರ್‌ ಮತ್ತು ಒಂದು ಹಾಡನ್ನು ಚಿತ್ರತಂಡ ಬಿಡುಗಡೆ ಮಾಡಿದೆ.

ಕಾಮಿಡಿ ನಟ ಚಿಕ್ಕಣ್ಣ ಯಮಧರ್ಮನ ವೇಷ ಹಾಕಿದರೆ ಹೇಗಿರುತ್ತದೆ? ಅದರಲ್ಲಿ ಸಖತ್‌ ಕಾಮಿಡಿ ಇರಲೇಬೇಕು. ತಲೆ ಮೇಲೆ ಕಿರೀಟ, ಹೆಗಲ ಮೇಲೆ ಗಧೆ ಏರಿಸಿಕೊಂಡು ಬೀಡುಬೀಸಾದ ಹೆಜ್ಜೆ ಹಾಕುವ ಚಿಕ್ಕಣ್ಣನ ಗೆಟಪ್‌, ಸಿಂಹಾಸನದ ಮೇಲೆ ಕುಳಿತು ‘ಚಿತ್ರಗುಪ್ತರೇ ಸಭೆ ಪ್ರಾರಂಭವಾಗಲಿ’ಎನ್ನುವಡೈಲಾಗ್‌ ಇರುವ ಟೀಸರ್‌ ಪ್ರೇಕ್ಷಕರ ಗಮನ ಸೆಳೆಯುವಂತಿದೆ. ಗ್ರಾಫಿಕ್ಸ್‌ ಬಳಸಿಯಮಲೋಕದ ಸನ್ನಿವೇಶವನ್ನು ತೆರೆ ಮೇಲೆ ಕಟ್ಟಿಕೊಡಲು ಚಿತ್ರತಂಡ ಸಾಕಷ್ಟು ಶ್ರಮ ಹಾಕಿರುವುದು ಟೀಸರ್‌ನಲ್ಲಿ ಎದ್ದುಕಾಣುತ್ತದೆ. ನಟ ದರ್ಶನ್‌ ಕೂಡ ಚಿಕ್ಕಣ್ಣ ಅವರನ್ನು ಪ್ರೋತ್ಸಾಹಿಸಿ ಚಿತ್ರತಂಡಕ್ಕೆ ಶುಭಹಾರೈಸಿರುವ ಮಾತುಗಳು ಟೀಸರ್‌ನಲ್ಲಿವೆ.

ಚಿತ್ರ ಚೆನ್ನಾಗಿ ಮೂಡಿಬರಬೇಕೆಂದು ಸಾಕಷ್ಟು ದೃಶ್ಯಗಳನ್ನು ನಿರ್ದೇಶಕರು ಹಲವು ಬಾರಿ ಮರುಚಿತ್ರೀಕರಣ ಮಾಡಿಸಿದ್ದಾರೆ. ಇದು ಸಮಾಜಕ್ಕೆ ಉತ್ತಮ ಸಂದೇಶ ಕೊಡುವ ಚಿತ್ರ. ಪ್ರೇಕ್ಷಕರಿಗೂ ಭರ್ಜರಿ ಮನರಂಜನೆ ನೀಡಲಿದೆ ಎಂದು ನಟ ಚಿಕ್ಕಣ್ಣ ಹೇಳಿಕೊಂಡರು.

ADVERTISEMENT

‘ನಿಮಗೆ ಯಮಧರ್ಮನ ಪಾತ್ರ ಒಪ್ಪುತ್ತಾ’ ಎಂದು ನಿರೂಪಕಿ ಕಾಲೆಳೆದಾಗ, ‘ನನಗೂ ಹಾಗೆ ಅನ್ನಿಸಿತ್ತು. ನಾನು ಯಾವ ಆ್ಯಂಗಲ್‌ನಲ್ಲಿ ಯಮನಂತೆ ಕಾಣಿಸುತ್ತೇನೆಂದು ನಿರ್ದೇಶಕರ ಬಳಿಯೂ ಕೇಳಿದ್ದೆ. ಆದರೆ, ಅವರು ಯಮನನ್ನು ಯಾರು ನೋಡಿದ್ದಾರೆ ಹೇಳಿ? ಎಂದು ನನ್ನನ್ನು ಒಪ್ಪಿಸಿದರು. ಆದರೆ, ನೋಟು ರದ್ದತಿ, ಪ್ರವಾಹದ ನಂತರ ಊಟ ಇಲ್ಲದೆ ಯಮನೂ ಕೂಡ ನನ್ನಂತೆ ಸಣಕಲಾಗಿರಬಹುದು’ ಎಂದು ಚಿಕ್ಕಣ್ಣ ಹಾಸ್ಯ ಚಟಾಕಿ ಹಾರಿಸಿದರು.

ಬಿಲ್‌ಗೇಟ್ಸ್‌ ಯಶೋಗಾಥೆಯಿಂದ ಸ್ಫೂರ್ತಿಗೊಂಡು ಬೆಂಗಳೂರಿಗೆ ಬರುವ ಇಬ್ಬರು ಹಳ್ಳಿ ಹುಡುಗರುಮುಂದೇನಾಗುತ್ತಾರೆ? ಎನ್ನುವುದೇ ಚಿತ್ರದ ಹೂರಣ. ಸಿನಿಮಾ ಅದ್ಭುತವಾಗಿ ಮೂಡಿಬಂದಿದೆ. ಚಿತ್ರವನ್ನು ಬಿಲ್‌ಗೇಟ್ಸ್‌ ಅವರಿಗೆ ತೋರಿಸಬೇಕೆಂದುಕೊಂಡಿದ್ದೇವೆ.‌ ಆಗ ನಾವು ಸಿನಿಮಾಕ್ಕೆ ಅವರ ಹೆಸರು ಇಟ್ಟಿರುವುದಕ್ಕೂ ಸಾರ್ಥಕವಾಗುತ್ತದೆಎಂದರು ನಾಯಕನಾಗಿ ನಟಿಸಿರುವಶಿಶಿರ್‌ ಶಾಸ್ತ್ರಿ.

ಚಿತ್ರದಲ್ಲಿ ಎರಡನೇನಾಯಕಿಯಾಗಿ ನಟಿಸಿರುವ ರಶ್ಮಿತಾ ರೋಜ, ತಮ್ಮ ಪಾತ್ರದ ಬಗ್ಗೆ ಕುತೂಹಲ ಕಾಯ್ದುಕೊಂಡರು. ಹಾಡುಗಳು ತುಂಬಾ ಚೆನ್ನಾಗಿ ಮೂಡಿ ಬಂದಿವೆ. ಆದಷ್ಟು ಶೀಘ್ರ ಧ್ವನಿಸುರಳಿ ಬಿಡುಗಡೆಯಾಗಲಿದೆ ಎಂದರು.

ಈ ಚಿತ್ರಕ್ಕೆ ಕಥೆ ಬರೆಯುವ ಜತೆಗೆ ನಿರ್ದೇಶನ ಮಾಡಿರುವಶ್ರೀನಿವಾಸ್‌ ಸಿ.ಮಂಡ್ಯ ‘ಇದೊಂದು ಕೌಟುಂಬಿಕ ಮನರಂಜನೆಯ ಮತ್ತು ಸಸ್ಪೆನ್ಸ್‌ ಚಿತ್ರ’ ಎಂದರು.

ತಾರಾಗಣದಲ್ಲಿ ಕುರಿ ಪ್ರತಾಪ್‌, ಗಿರಿ, ರಾಜ್‌ ಶೇಖರ್‌, ಅಕ್ಷರ ರೆಡ್ಡಿ, ರಶ್ಮಿತಾ ರೋಜ, ರಾಜೇಶ್‌, ವಿ.ಮನೋಹರ್‌, ಬ್ಯಾಂಕ್‌ ಜನಾರ್ಧನ್‌, ಯತಿರಾಜ್‌, ಪ್ರಿಯಾಂಕಾ ಚಿಂಚೊಳ್ಳಿ ಇದ್ದಾರೆ.

ಪಾಂಚಜನ್ಯ ಸಿನಿ ಕ್ರಿಯೇಷನ್ಸ್‌ನಡಿ ನಿರ್ಮಿಸಿರುವ ಈ ಚಿತ್ರಕ್ಕೆ 12 ಮಂದಿ ನಿರ್ಮಾಪಕರು ಬಂಡವಾಳ ಹೂಡಿದ್ದಾರೆ.ಚಿತ್ರಕಥೆ ರಾಜಶೇಖರ್‌, ಸಂಭಾಷಣೆ ಜಯ ಮಲ್ಲಿಕಾರ್ಜುನ, ರಾಕೇಶ್‌ ಸಿ.ತಿಲಕ್‌ ಛಾಯಾಗ್ರಹಣ ನೀಡಿದ್ದು, ಸಂಗೀತನೋಬಿನ್‌ ಪೌಲ್‌, ಸಂಕಲನಮರೀಸ್ವಾಮಿ, ಸಾಹಿತ್ಯ ರಾಜೇಶ್‌ ಡಿ ಹಾಗೂ ಅರುಣ್‌ ಅವರದ್ದು. ವೈಕಂ ವಿಜಯಲಕ್ಷ್ಮಿ, ಸಂಜಿತ್‌ ಹೆಗಡೆ ಹಾಗೂ ಅಶ್ವಿನಿ ಜೋಷಿ ಹಾಡಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.