ADVERTISEMENT

ಸೈಕಲ್‌ ಬಿಂಬ

ವಿಜಯ್ ಜೋಷಿ
Published 4 ಏಪ್ರಿಲ್ 2019, 19:30 IST
Last Updated 4 ಏಪ್ರಿಲ್ 2019, 19:30 IST
ಬಿಂಬಶ್ರೀ
ಬಿಂಬಶ್ರೀ   

ನೀನಾಸಂನಲ್ಲಿ ತರಬೇತಿ ಪಡೆದ ಬಿಂಬಶ್ರೀ ಅಭಿನಯದ ಎರಡನೆಯ ಸಿನಿಮಾ ‘ಗೌಡ್ರು ಸೈಕಲ್‌’ ಶುಕ್ರವಾರ ಬಿಡುಗಡೆ ಆಗುತ್ತಿದೆ.

* ‘ರಾಮಾ ರಾಮಾ ರೇ’ ನಂತರ ಕನ್ನಡದ ಯಾವ ಸಿನಿಮಾದಲ್ಲೂ ಕಾಣಿಸಿಕೊಳ್ಳಲಿಲ್ಲ, ಏಕೆ?

ಇದು ನನ್ನ ಎರಡನೆಯ ಸಿನಿಮಾ. ಈ ನಡುವೆ ಬೇರೆ ಭಾಷೆಗಳಿಂದ ಕೂಡ ಅವಕಾಶ ಬಂದಿತ್ತು. ಆದರೆ, ಪ್ರಧಾನವಲ್ಲದ ಪಾತ್ರಗಳನ್ನು ಮಾಡುವಂತೆ ನನ್ನನ್ನು ಕೇಳಿದ್ದರು. ನಾನು ಹಿಂದೊಮ್ಮೆ ಯಾವುದೇ ಪಾತ್ರ ಮಾಡಲು ಸಿದ್ಧ ಎಂದಿದ್ದನ್ನು ಕೆಲವರು ಹೀಗೆ ಅರ್ಥ ಮಾಡಿಕೊಂಡಿದ್ದಾರೆ! ಆದರೆ ನನಗೆ ಅಂತಹ ಪಾತ್ರ ಮಾಡುವ ಇಚ್ಛೆ ಇರಲಿಲ್ಲ. ನಾನು ಲೀಡ್ ಪಾತ್ರ ಮಾಡಬೇಕು ಎಂಬ ಆಸೆ ಹೊಂದಿದ್ದೇನೆ. ಎಲ್ಲ ಪಾತ್ರಗಳನ್ನೂ ನಾನು ಮಾಡಲಾರೆ, ನನ್ನ ಆಯ್ಕೆಗೆ ಸರಿಹೊಂದುವ ಪಾತ್ರ ಮಾಡುವೆ. ಒಂದು ವರ್ಷ ಬಿಡುವಾಗಿದ್ದರೂ ಒಂದೂ ಸಿನಿಮಾ ಮಾಡಲಿಲ್ಲ. ಏಕೆಂದರೆ ಇಷ್ಟವಾಗುವ ಪಾತ್ರ ಸಿಕ್ಕಿರಲಿಲ್ಲ. ‘ರಾಮಾ ರಾಮಾ ರೇ’ ಚಿತ್ರದಲ್ಲಿನ ಪಾತ್ರಕ್ಕೂ, ಮತ್ತೆ ಮಾಡುವ ಪಾತ್ರಕ್ಕೂ ವ್ಯತ್ಯಾಸ ಇರಬೇಕು ಎಂಬ ಆಸೆ ನನ್ನಲ್ಲಿ ಇತ್ತು.

ADVERTISEMENT

* ಎರಡೂ ಸಿನಿಮಾಗಳಲ್ಲಿನ ವ್ಯತ್ಯಾಸ ಏನಿತ್ತು?

‘ರಾಮಾ ರಾಮಾ ರೇ’ ಚಿತ್ರದಲ್ಲಿ ನನ್ನದು ಗ್ಲಾಮರ್ ಇಲ್ಲದ ಪಾತ್ರ. ಆ ಚಿತ್ರದ ಶೂಟಿಂಗ್ ವೇಳೆ ನನ್ನ ಚರ್ಮ ಸುಟ್ಟು ಕಪ್ಪಗಾಗಿತ್ತು. ಅದು ಕಪ್ಪು ಬಣ್ಣ ಮೇಕಪ್‌ ಮಾಡಿಕೊಂಡು ಆದದ್ದಲ್ಲ! ಆ ಹುಡುಗಿ ಇರೋದೆ ಕರ‍್ರಗೆ, ಅವಳ ಬಳಿ ಮಾಡರ್ನ್‌ ಪಾತ್ರ ಮಾಡಲು ಸಾಧ್ಯವಾ ಎಂದು ಎಷ್ಟೋ ಜನ ಮಾತನಾಡಿಕೊಂಡಿದ್ದರು ಆವಾಗ! ‘ಗೌಡ್ರು ಸೈಕಲ್’ ಚಿತ್ರದ ನಿರ್ದೇಶಕ ಪ್ರಶಾಂತ್ ಎಳ್ಳಂಪಳ್ಳಿ ಅವರು ನನಗೆ ಹಿಂದಿನಿಂದಲೂ ಪರಿಚಯ. ಅವರ ಬಳಿ ಕಥೆ ಕೇಳಿಸಿಕೊಂಡೆ, ಕಥೆಯ ಎಳೆ ಬಹಳ ಇಷ್ಟವಾಯಿತು. ಡೈಲಾಗ್‌ ಕೂಡ ಸೇರಿಸಿ ಅವರು ಕಥೆ ಹೇಳಿದ್ದರು. ಈ ಚಿತ್ರದಲ್ಲಿ ನಾನು ಗ್ಲಾಮರಸ್‌ ಹಳ್ಳಿ ಹುಡುಗಿಯ ಪಾತ್ರ ಮಾಡಿದ್ದೇನೆ.

* ಡಿಗ್ಲಾಮರಸ್‌ ಪಾತ್ರ ಮಾಡಿದ್ದ ನೀವು ಇಂಥದ್ದೊಂದು ಗ್ಲಾಮರಸ್‌ ಪಾತ್ರ ಹುಡುಕುತ್ತಿದ್ದಿರಾ? ಅಥವಾ ಈ ಪಾತ್ರ ಅದಾಗಿಯೇ ನಿಮ್ಮ ಬಳಿ ಬಂತಾ?

ನಾನು ಇಂಥದ್ದೇ ಪಾತ್ರಕ್ಕಾಗಿ ಹುಡುಕಾಟ ನಡೆಸಿದ್ದೆ. ಪಾತ್ರಗಳ ಬದಲಾವಣೆಯೇ ನನಗೆ ಮುಖ್ಯ. ನಾನು ಮಾಡುವ ಪಾತ್ರ ನನಗೆ ಸೂಕ್ತ ಎಂದು ಅನಿಸಿದರೆ ಮಾತ್ರ ನಾನು ಒಪ್ಪಿಕೊಳ್ಳುತ್ತೇನೆ. ಡಿಗ್ಲಾಮರ್‌ ಪಾತ್ರವೇ ಬಂದರೂ, ತುಸು ಸವಾಲಿನದ್ದಾಗಿದ್ದರೆ ಮಾಡುತ್ತಿದ್ದೆನೇನೋ. ಆದರೆ, ಅಲ್ಲಿ ಒಂದು ಸಮಸ್ಯೆ ಎದುರಾಗುತ್ತಿತ್ತು. ಮತ್ತೆ ಮತ್ತೆ ಡಿಗ್ಲಾಮರಸ್ ಪಾತ್ರಗಳನ್ನೇ ನಿಭಾಯಿಸಿದ್ದರೆ, ನನಗೆ ಅಂಥವೇ ಪಾತ್ರಗಳು ಬರಲು ಆರಂಭವಾಗುತ್ತಿದ್ದವು. ಹಾಗಾಗಿ, ನಾನು ಗ್ಲಾಮರಸ್‌ ಪಾತ್ರವನ್ನೇ ಹುಡುಕುತ್ತಿದ್ದೆ. ನಾನು ಬಯಸಿದ ಪಾತ್ರವೇ ಸಿಕ್ಕಿತು. ಆ ವಿಚಾರದಲ್ಲಿ ಬಹಳ ಖುಷಿಯಿದೆ. ನಾನು ಇದರಲ್ಲಿ ಗ್ಲಾಮರಸ್ ಹಳ್ಳಿ ಹುಡುಗಿಯ ಪಾತ್ರ ಮಾಡಿದ್ದೇನೆ ಎಂದೆನಲ್ಲ? ಗ್ಲಾಮರಸ್‌ ಅಂದರೆ, ತೀರಾ ಏನೂ ಅಲ್ಲ! ಮಾಮೂಲಿ ಜೀನ್ಸ್‌ ತೊಡುವ ಗ್ಲಾಮರಸ್‌ ಪಾತ್ರ ಇದು.

* ರಂಗಭೂಮಿಯ ನಂಟು ಇಂದಿಗೂ ಇದೆಯಾ?

ಹೌದು, ಇಂದಿಗೂ ನಂಟು ಇಟ್ಟುಕೊಂಡಿದ್ದೇನೆ. ಯಾವತ್ತೂ ಅದರ ಜೊತೆಗಿನ ನಂಟು ಬಿಡುವುದಿಲ್ಲ. ಸಿನಿಮಾದಲ್ಲಿ ಅವಕಾಶಗಳು ಹೆಚ್ಚಾದರೆ ರಂಗಭೂಮಿ ಚಟುವಟಿಕೆಗಳನ್ನು ಒಂದು ಮಿತಿಯಲ್ಲಿ ನಿಭಾಯಿಸುವೆ. ರಂಗಭೂಮಿ ಹೆಚ್ಚೋ, ಸಿನಿಮಾ ಹೆಚ್ಚೋ ಎಂಬ ಪ್ರಶ್ನೆ ಎದುರಾದರೆ, ರಂಗಭೂಮಿಯೇ ಹೆಚ್ಚು ಎನ್ನುವೆ. ನನಗೆ ಅನ್ನ ಕೊಟ್ಟಿದ್ದು ರಂಗಭೂಮಿ. ನಾನು ನಟಿಯಾಗಲು ಬೇಕಿದ್ದ ಗಟ್ಟಿತನ ಕೊಟ್ಟಿದ್ದು ರಂಗಭೂಮಿ. ನಾನು ರಂಗಭೂಮಿಯಲ್ಲಿ ಬಹಳ ಉತ್ತಮ ಸಂಭಾವನೆ ಪಡೆಯುತ್ತಿದ್ದೆ. ನೀನಾಸಂ ನನಗೆ ಗಟ್ಟಿತನ ತಂದುಕೊಟ್ಟಿತು. ಸಿನಿಮಾ ರಂಗಕ್ಕೆ ಬರಲೇಬೇಕು ಎಂದೇನೂ ಇರಲಿಲ್ಲ. ಆದರೂ, ಒಂದು ಪ್ರಯತ್ನ ಮಾಡೋಣ ಎಂದು ಸಿನಿಮಾದಲ್ಲಿ ಅಭಿನಯಿಸಲು ಶುರು ಮಾಡಿದೆ.

* ಬೇರೆ ಯಾವ ಸಿನಿಮಾ ಕೈಯಲ್ಲಿದೆ?

‘ಹಫ್ತಾ’ ಎಂಬ ಸಿನಿಮಾ ಇನ್ನು ಒಂದೆರಡು ತಿಂಗಳುಗಳಲ್ಲಿ ಬಿಡುಗಡೆ ಆಗುವ ನಿರೀಕ್ಷೆ ಇದೆ. ಇದು ಮಾಸ್‌ ಸಿನಿಮಾ. ಜನವರಿಯಲ್ಲಿ ಅದರ ಶೂಟಿಂಗ್ ಮುಗಿದಿದೆ. ಅಲ್ಲದೆ, ಬೇರೆ ಕೆಲವು ಸಿನಿಮಾಗಳ ಬಗ್ಗೆ ಮಾತುಕತೆ ನಡೆದಿದೆ. ರಂಗಭೂಮಿ ಕಲಾವಿದರಿಗೆ ಅವಕಾಶಗಳು ಇದ್ದೇ ಇರುತ್ತವೆ.

* ರಂಗಭೂಮಿ ಕಲಾವಿದರಿಗೆ ಇಂದಿನ ಸಿನಿಮಾ ಲೋಕ ಕೇಳುವ ಗ್ಲಾಮರಸ್ ಪಾತ್ರಗಳನ್ನು ನಿಭಾಯಿಸುವುದು ಸುಲಭವೇ, ಕಷ್ಟವೇ?

ಅಂತಹ ಪಾತ್ರಗಳನ್ನು ನಿಭಾಯಿಸುವುದು ರಂಗಭೂಮಿ ಹಿನ್ನೆಲೆ ಇರುವವರಿಗೆ ಸುಲಭವಾಗುತ್ತದೆ. ನೀವು ಒಂದು ವಿಚಾರ ಗಮನಿಸಬೇಕು. ರಂಗದ ಹಿನ್ನೆಲೆಯಿಂದ ಬಂದವರಿಗೆ ಕೆಲವೊಮ್ಮೆ ಸೌಂದರ್ಯದ ಬಗ್ಗೆ ಅಷ್ಟೇನೂ ನಿಗಾ ಇರುವುದಿಲ್ಲ. ನಾಟಕ ಮಾಡುವಾಗ ಕೈ ಉಗುರು ಕತ್ತರಿಸಿಹೋಯಿತು. ಚರ್ಮದ ಬಣ್ಣ ಹಾಳಾಯಿತು ಎಂದು ಹೇಳುತ್ತ ಕೂರಲು ಅವರಿಂದ ಸಾಧ್ಯವಿಲ್ಲ. ಮಣ್ಣು–ಕಲ್ಲು ಇರುವ ರಂಗದ ಮೇಲೆಯೂ ನಾವು ನಟಿಸುತ್ತೇವೆ. ಏನೇ ಆದರೂ ಸಹಿಸಿಕೊಂಡು ರಂಗಭೂಮಿಯವರು ಪಾತ್ರ ನಿಭಾಯಿಸಬಲ್ಲರು.

* ಕನ್ನಡ ಸಿನಿಮಾ ರಂಗದಲ್ಲಿ ಬೆಳೆಯಬೇಕು ಎಂಬ ಆಸೆಯಿಂದ ಬರುವ ನಟಿಯರು ನಲವತ್ತು–ನಲವತ್ತೈದು ವರ್ಷ ವಯಸ್ಸು ತಲುಪುವಾಗ ತೆರೆಮರೆಗೆ ಸರಿಯುತ್ತಾರೆ. ಅವರಿಗೆ ಸೂಕ್ತವಾಗುವ ಕಥೆಗಳು ಬಾರದಿದ್ದರೆ ಬೆಳೆಯಲು ಸಾಧ್ಯವೇ?

ನನಗೆ ಬೇರೆ ದಾರಿ ಇಲ್ಲ, ಅಭಿನಯ ಮಾಡಲೇಬೇಕು ಎಂಬ ಅನಿವಾರ್ಯಗಳು ಇದ್ದರೆ ಏನೂ ಮಾಡಲಾಗದು. ನಾವು ಹೇಗಿದ್ದೇವೋ ಹಾಗೇ ಇದ್ದರೆ ಸಮಸ್ಯೆ ಆಗುವುದಿಲ್ಲ. ನನ್ನಿಂದ ಸಾಧ್ಯವಾಗುತ್ತದೆ ಎಂದು ನೆಲೆನಿಂತರೆ, ಸಾಧ್ಯವಾಗುತ್ತದೆ. ಇಲ್ಲದಿದ್ದರೆ ಆಗದು. ಕಥೆಗಳೇ ಇಲ್ಲವಾದರೆ ಅಷ್ಟು ವಯಸ್ಸಿನ ಹೆಣ್ಣುಮಕ್ಕಳು ಒಳ್ಳೆಯ ಪಾತ್ರ ಮಾಡಲು ಆಗದು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.