ADVERTISEMENT

ಪ್ರಮುಖ ಸಭೆಯಲ್ಲಿ ಬಿಜೆಪಿ ಶಾಸಕರನ್ನು ನಗಿಸಿದ್ದ ರಾಜು ಶ್ರೀವಾಸ್ತವ: ಸ್ಮರಣೆ

ಪಿಟಿಐ
Published 23 ಸೆಪ್ಟೆಂಬರ್ 2022, 5:44 IST
Last Updated 23 ಸೆಪ್ಟೆಂಬರ್ 2022, 5:44 IST
ಪುರಿ: ಮರಳು ಶಿಲ್ಪಿ  ಸುದರ್ಶನ್‌ ಪಟ್ನಾಯಕ್‌ ಅವರು ಗೌರವಾರ್ಥ ರಚಿಸಿದ ರಾಜು ಶ್ರೀವಾಸ್ತವ ಅವರ ಕಲಾಕೃತಿ | ಪಿಟಿಐ ಚಿತ್ರ
ಪುರಿ: ಮರಳು ಶಿಲ್ಪಿ ಸುದರ್ಶನ್‌ ಪಟ್ನಾಯಕ್‌ ಅವರು ಗೌರವಾರ್ಥ ರಚಿಸಿದ ರಾಜು ಶ್ರೀವಾಸ್ತವ ಅವರ ಕಲಾಕೃತಿ | ಪಿಟಿಐ ಚಿತ್ರ   

ನೊಯಿಡಾ: ಉತ್ತರ ಪ್ರದೇಶದ ವಿಧಾನ ಸಭೆ ಚುನಾವಣೆ ಬಳಿಕ ನಡೆದ ಪ್ರಮುಖ ಸಭೆಯೊಂದರಲ್ಲಿ ನೂರಕ್ಕೂ ಹೆಚ್ಚು ಬಿಜೆಪಿ ಶಾಸಕರನ್ನು 'ಛಾತೆ ಹೂ ಲೋಗ್‌' ಎನ್ನುವ ಮೂಲಕ ರಾಜು ಶ್ರೀವಾಸ್ತವ ಅವರು ನಗೆಗಡಲಲ್ಲಿ ತೇಲಿಸಿದ್ದರು ಎಂದು ಅಲ್ಲಿನ ಸಚಿವ ಆಸಿಮ್‌ ಅರುಣ್‌ ಸ್ಮರಿಸಿದ್ದಾರೆ.

1980ರಲ್ಲಿ ಶ್ರೀವಾಸ್ತವ ಅವರ ಕಾಮಿಡಿ ಶೋಗಳನ್ನು ನೋಡುತ್ತಿದ್ದೆ. ಕಾನ್ಪುರದ ಪೊಲೀಸ್‌ ಕಮಿಷನರ್‌ ಆಗಿ ನೇಮಕಗೊಂಡ ಬಳಿಕ ಶ್ರೀವಾಸ್ತವ ಅವರನ್ನು ಹತ್ತಿರದಿಂದ ನೋಡುವ ಭಾಗ್ಯ ನನ್ನದಾಯಿತು. ಕೊನೆಗೆ ಆತ್ಮೀಯರಾದರು. ಕಳೆದ ವರ್ಷ ಬಿಜೆಪಿ ಶಾಸಕಾಂಗ ಪಕ್ಷವು ನೂತನವಾಗಿ ರಚನೆಯಾದ ನಂತರ ಕರೆಯಲಾದ ಸಭೆಗೆ ಶ್ರೀವಾಸ್ತವ ಅವರನ್ನು ಆಹ್ವಾನಿಸಲಾಗಿತ್ತು. ನಾನು ನೋಡಿದ ಅವರ ಕೊನೆಯ ಕಾಮಿಡಿ ಕಾರ್ಯಕ್ರಮವದು. 'ಮೇರೆ ಸಾಮ್ನೆ ಉತ್ತರ್‌ ಪ್ರದೇಶ್‌ ಕೆ ಛಾತೆ ಹೂ ಲೋಗ್‌ ಬೈಟೆ ಹೈ' ಎಂದಾಗ ಎಲ್ಲರೂ ನಗೆಗಡಲಲ್ಲಿ ತೇಲಿದ್ದರು.

ಛಾತೆ ಹೂ ಲೋಗ್ - ಎಂಬುದು ಸಾಮಾನ್ಯವಾಗಿ ಪುಂಡಾಟ ನಡೆಸುವವರನ್ನು ಉಲ್ಲೇಖಿಸಿ ಹೇಳುವ ಮಾತಾಗಿದೆ. ಆದರೆ ಶ್ರೀವಾಸ್ತವ ಅವರು ಆಯ್ಕೆಗೊಂಡ ಶಾಸಕರನ್ನು ಉದ್ದೇಶಿಸಿ ತಮಾಷೆಯಿಂದ ಈ ಪದ ಬಳಕೆ ಮಾಡಿದ್ದರು.

ADVERTISEMENT

ಏಮ್ಸ್‌ ಆಸ್ಪತ್ರೆಯಲ್ಲಿ ಮೃತಪಟ್ಟ ಬಾಲಿವುಡ್‌ ಖ್ಯಾತ ಹಾಸ್ಯ ಕಲಾವಿದ, ಕಾಮಿಡಿ ಲೆಜೆಂಡ್‌ ಎಂದೇ ಗುರುತಿಸಿಕೊಂಡಿದ್ದ ಶ್ರೀವಾಸ್ತವ ಅವರ ಅಂತ್ಯಸಂಸ್ಕಾರವನ್ನು ದೆಹಲಿಯಲ್ಲಿ ನೆರವೇರಿಸಲಾಯಿತು.

ಉತ್ತರ ಪ್ರದೇಶದ ಕಾನ್ಪುರದಲ್ಲಿ ಜನಿಸಿದ ಶ್ರೀವಾಸ್ತವ ಅವರು ಬಿಜೆಪಿ ಸದಸ್ಯರೂ ಆಗಿದ್ದರು. 1980ರಲ್ಲಿ ಮುಂಬೈಗೆ ಹೋಗಿ ನೆಲೆಸಿದ್ದರು. ಯೋಗಿ ಆದಿತ್ಯನಾಥ್‌ ಸರ್ಕಾರವು ಶ್ರೀವಾಸ್ತವ ಅವರನ್ನು ಉತ್ತರ ಪ್ರದೇಶದ ಸಿನಿಮಾ ಅಭಿವೃದ್ಧಿ ಮಂಡಳಿಯ ಮುಖ್ಯಸ್ಥರನ್ನಾಗಿ ನೇಮಿಸಿತ್ತು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.