ADVERTISEMENT

ಬಿಜೆಪಿ ಸಂಸದೆ ಕಿರಣ್ ಖೇರ್‌ಗೆ ಬ್ಲಡ್ ಕ್ಯಾನ್ಸರ್

​ಪ್ರಜಾವಾಣಿ ವಾರ್ತೆ
Published 1 ಏಪ್ರಿಲ್ 2021, 11:44 IST
Last Updated 1 ಏಪ್ರಿಲ್ 2021, 11:44 IST
   

ಮುಂಬೈ: ಬಿಜೆಪಿ ಸಂಸದೆ, ಖ್ಯಾತ ನಟಿ ಕಿರಣ್‌ ಖೇರ್‌ ಅವರು ರಕ್ತದ ಕ್ಯಾನ್ಸರ್‌ನಿಂದ ಬಳಲುತ್ತಿದ್ದು, ಅವರ ಆರೋಗ್ಯ ಸುಧಾರಿಸುತ್ತಿದೆ ಎಂದು ಪತಿ, ನಟ ಅನುಪಮ್‌ ಖೇರ್‌ ಗುರುವಾರ ಹೇಳಿದ್ದಾರೆ.

ಈ ಕುರಿತು ಟ್ವಿಟರ್‌ನಲ್ಲಿ ಹೇಳಿಕೆ ಬಿಡುಗಡೆ ಮಾಡಿರುವ ಅವರು, ‘68 ವರ್ಷದ ಕಿರಣ್‌ ಖೇರ್‌ ಅವರು ಪ್ರಸ್ತುತ ಮುಂಬೈನಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ. ಈ ಸ್ಥಿತಿಯ ಬಗ್ಗೆ ಮತ್ತಷ್ಟು ವದಂತಿಗಳು ಹರಡುವ ಮೊದಲೇ, ಕಿರಣ್‌ಗೆ ರಕ್ತದ ಕ್ಯಾನ್ಸರ್‌ ದೃಢಪಟ್ಟಿದೆ ಎಂದು ಮಾಹಿತಿ ನೀಡಲು ನಾನು ಹಾಗೂ ನನ್ನ ಮಗ ಸಿಕಂದರ್‌ ಬಯಸುತ್ತೇವೆ. ಕಿರಣ್‌ ಗುಣಮುಖರಾಗಿ, ಮತ್ತಷ್ಟು ಸದೃಢವಾಗಿ ಕ್ಯಾನ್ಸರ್‌ ಗೆದ್ದು ಬರುವ ಭರವಸೆ ನಮಗಿದೆ. ತಜ್ಞ ವೈದ್ಯರು ಅವರಿಗೆ ಚಿಕಿತ್ಸೆ ನೀಡುತ್ತಿದ್ದಾರೆ’ ಎಂದಿದ್ದಾರೆ.

‘ಅಭಿಮಾನಿಗಳ ಬೆಂಬಲಕ್ಕೆ ನಮ್ಮ ಧನ್ಯವಾದ. ಕಿರಣ್‌ ಶೀಘ್ರ ಗುಣಮುಖವಾಗಿ ಬರಲಿ ಎಂದು ಪ್ರಾರ್ಥಿಸಿ. ಅವಳು ತೆರೆದ ಹೃದಯದವಳು, ಹೀಗಾಗಿ ಆಕೆಯನ್ನು ಜನರು ಪ್ರೀತಿಸುತ್ತಾರೆ’ ಎಂದು ಪ್ರಕಟಣೆಯಲ್ಲಿ ಉಲ್ಲೇಖಿಸಿದ್ದಾರೆ.

ADVERTISEMENT

‘ಕಳೆದ ವರ್ಷ ನವೆಂಬರ್‌ನಲ್ಲಿ ಕಿರಣ್‌ ಖೇರ್‌ ಎಡಗೈ ಮುರಿದಿತ್ತು. ಇದಾದ ನಂತರದಲ್ಲಿ ಅವರಿಗೆ ರಕ್ತದ ಕ್ಯಾನ್ಸರ್‌ ಇರುವುದು ದೃಢಪಟ್ಟಿತ್ತು. ಕಳೆದ ಡಿ.4ರಂದು ಅವರನ್ನು ಮುಂಬೈನ ಕೋಕಿಲಾಬೆನ್‌ ಆಸ್ಪತ್ರೆಗೆ ಏರ್‌ಲಿಫ್ಟ್‌ ಮಾಡಲಾಗಿತ್ತು. ಅವರು ಗುಣಮುಖರಾಗುತ್ತಿದ್ದಾರೆ’ ಎಂದು ಚಂಡೀಗಡ ಬಿಜೆಪಿ ರಾಜ್ಯಾಧ್ಯಕ್ಷ ಅರುಣ್‌ ಸೂದ್‌ ಬುಧವಾರ ಹೇಳಿದ್ದರು.

ದೇವ್‌ದಾಸ್‌, ವೀರ್‌ಝಾರಾ, ದೋಸ್ತಾನ ಮುಂತಾದ ಹಿಟ್‌ ಸಿನಿಮಾಗಳಲ್ಲಿ ನಟಿಸಿದ್ದ ಕಿರಣ್‌ ಖೇರ್‌, 2014ರಲ್ಲಿ ಚಂಡೀಗಡದಿಂದ ಬಿಜೆಪಿ ಅಭ್ಯರ್ಥಿಯಾಗಿ ಸ್ಪರ್ಧಿಸಿ ಲೋಕಸಭೆಗೆ ಪ್ರವೇಶಿಸಿದ್ದರು. 2019ರಲ್ಲಿ ಮತ್ತೆ ಇದೇ ಲೋಕಸಭೆ ಕ್ಷೇತ್ರದಿಂದ ಸ್ಪರ್ಧಿಸಿ ಜಯಿಸಿದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.