ತಾಯಿಯೊಂದಿಗೆ ಜಾಕ್ವೆಲಿನ್ ಫರ್ನಾಂಡಿಸ್
ಚಿತ್ರ: ಇನ್‌ಸ್ಟಾಗ್ರಾಂ
ಮುಂಬೈ: ಬಾಲಿವುಡ್ ನಟಿ ಜಾಕ್ವೆಲಿನ್ ಫರ್ನಾಂಡಿಸ್ ತಾಯಿ ಕಿಮ್ ಫರ್ನಾಂಡಿಸ್ ಅವರು ಭಾನುವಾರ ಬೆಳಿಗ್ಗೆ ಮುಂಬೈನ ಖಾಸಗಿ ಆಸ್ಪತ್ರೆಯಲ್ಲಿ ನಿಧರಾದರು.
ಕಳೆದ ತಿಂಗಳು ಅನಾರೋಗ್ಯಕ್ಕೆ ತುತ್ತಾಗಿದ್ದ ಅವರನ್ನು ಆಸ್ಪತ್ರೆಗೆ ದಾಖಲಿಸಿ ಚಿಕಿತ್ಸೆ ನೀಡಲಾಗಿತ್ತು. ಆರೋಗ್ಯದಲ್ಲಿ ಚೇತರಿಕೆ ಕಂಡು ಬರದ ಹಿನ್ನೆಲೆ ಮುಂಬೈನ ಪ್ರತಿಷ್ಠಿತ ಲೀಲಾವತಿ ಆಸ್ಪತ್ರೆಗೆ ಸೇರಿಸಿ ಚಿಕಿತ್ಸೆ ಮುಂದುವರಿಸಲಾಗಿತ್ತು. ಈ ಸಂದರ್ಭದಲ್ಲಿ ಜಾಕ್ವೆಲಿನ್ ಮತ್ತು ಅವರ ತಂದೆ ಎಲ್ರಾಯ್ ಫರ್ನಾಂಡಿಸ್ ಜೊತೆಗಿದ್ದರು.
ಕಿಮ್ ಅವರು ಪಾರ್ಶ್ವವಾಯುವಿಗೆ ತುತ್ತಾಗಿದ್ದರು ಎಂದು ವರದಿಗಳು ತಿಳಿಸಿವೆ. ಕೆಲ ದಿನಗಳಿಂದ ಅವರ ಆರೋಗ್ಯದ ಸ್ಥಿತಿ ಮತ್ತಷ್ಟು ಹದಗೆಟ್ಟಿತ್ತು. ಇಂದು ಇಹಲೋಕ ತ್ಯಜಿಸಿದ್ದಾರೆ.
ಮಲೇಷಿಯಾದ ಮೂಲದವರಾದ ಕಿಮ್ ಫರ್ನಾಂಡಿಸ್ ಅವರು ಗಗನಸಖಿಯಾಗಿ ಕೆಲಸ ಮಾಡುತ್ತಿದ್ದರು. 1980ರಲ್ಲಿ ಶ್ರೀಲಂಕಾ ಮೂಲದ ಎಲ್ರಾಯ್ ಫರ್ನಾಂಡಿಸ್ ಅವರೊಂದಿಗೆ ದಾಂಪತ್ಯ ಜೀವನಕ್ಕೆ ಕಾಲಿಟ್ಟಿದ್ದರು.
ಬಹ್ರೇನ್‌ನ ಮನಾಮದಲ್ಲಿ ಜನಿಸಿದ್ದ ಜಾಕ್ವೆಲಿನ್ ಅವರು ಹಿಂದಿ ಚಿತ್ರರಂಗದಲ್ಲಿ ಗುರುತಿಸಿಕೊಂಡಿದ್ದಾರೆ. ಕನ್ನಡದ ‘ವಿಕ್ರಂ ರೋಣ’ ಚಿತ್ರದ ‘ರಾರಾ ರಕ್ಕಮ್ಮ’ ಹಾಡಿಗೆ ಹೆಜ್ಜೆ ಹಾಕಿದ್ದರು. ಸುಕೇಶ್ ಚಂದ್ರಶೇಖರ್ ವಂಚನೆ ಪ್ರಕರಣದಲ್ಲಿ ಜಾಕ್ವೆಲಿನ್ ಅವರ ಹೆಸರು ಕೇಳಿಬಂದಿತ್ತು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.