ADVERTISEMENT

ನಿತ್ಯ ಕಾಡುವ ‘ಭಗವಾನ್‌ ದಾದಾ’ ದುರಂತ ಅಂತ್ಯ

ನೆನಪಿನ ಅಂಗಳ

​ಪ್ರಜಾವಾಣಿ ವಾರ್ತೆ
Published 12 ಜನವರಿ 2020, 19:30 IST
Last Updated 12 ಜನವರಿ 2020, 19:30 IST
ಭಗವಾನ್ ದಾದಾ
ಭಗವಾನ್ ದಾದಾ   

ಬಹಳಷ್ಟು ಸಲ ಮಲಗುವ ಮುನ್ನ ಯಾವುದಾದರೊಂದು ದೇವರನಾಮ ಹಾಡಲು ಮಕ್ಕಳಿಗೆ ಹೇಳಿಕೊಡಲಾಗುತ್ತದೆ. ನಾನು ಮಗುವಾಗಿದ್ದಾಗ ನನ್ನಪ್ಪ ಸುಮಧುರವಾದ ‘ಧೀರೇ ಸೆ ಆಜಾ ರಿ ಅಖಿಯನ್ ಮೆ, ನಿಂದಿಯಾ ಆಜಾ ರಿ ಆಜಾ...’ ಲಾಲಿಹಾಡು ಹೇಳುತ್ತಿದ್ದರು. ಪ್ರಖ್ಯಾತ ಸಂಗೀತ ನಿರ್ದೇಶಕ ಸಿ. ರಾಮಚಂದ್ರ ಅವರು 1951ರಲ್ಲಿ ಬಿಡುಗಡೆಯಾದ ಹಿಂದಿ ಚಿತ್ರ 'ಅಲ್ಬೇಲಾ'ಕ್ಕಾಗಿ ಸಂಯೋಜನೆ ಮಾಡಿರೋ ಈ ಲಾಲಿಹಾಡು ನನ್ನನ್ನು ನಿದ್ರೆಗೆ ಜಾರಿಸುತ್ತಿತ್ತು. ಅಪ್ಪ ಹಾಡುತ್ತಿದ್ದ ಹಾಡು ನನ್ನ ಮನದಲ್ಲಿ ಅಚ್ಚೊತ್ತಿದಂತೆ ಆಗಿತ್ತು. ನಾನೂ ಆ ಸಂಪ್ರದಾಯವನ್ನು ಮುಂದುವರೆಸಿ, ಅದೇ ಜೋಗುಳವನ್ನು ನನ್ನ ಮಕ್ಕಳಿಗೆ ಹಾಡುತ್ತಿದ್ದೆ.

ನಾನು ಬೆಳೆದು ಬಂದಿದ್ದು ಉತ್ತರ ಭಾರತೀಯರೇ ಹೆಚ್ಚಾಗಿ ವಾಸಿಸುತ್ತಿದ್ದ ಪ್ರದೇಶದಲ್ಲಿ. ಆಗಾಗ್ಗೆ ವರನ ಕುಟುಂಬದವರು ಮೆರವಣಿಗೆಯಲ್ಲಿ ಬಾಲಿವುಡ್ ಸಂಗೀತಕ್ಕೆ ರಸ್ತೆಯಲ್ಲಿ ಕುಣಿಯುವುದನ್ನು ನೋಡುತ್ತಿದ್ದೆ. ಆಗಿನ ಬಹು ಜನಪ್ರಿಯ ಹಾಡು,‘ಭೋಲಿ ಸೂರತ್ ದಿಲ್ ಕೆ ಖೋಟೆ’ ಎಂಬ ಕುಣಿತದ ಗೀತೆ ಕೂಡ ಅದೇ ಅಲ್ಬೇಲಾ ಚಿತ್ರದ್ದು! ಎಲ್ಲರೂ ಒಂದು ನಿರ್ದಿಷ್ಟ ಶೈಲಿಯಲ್ಲಿ ಹೆಜ್ಜೆ ಹಾಕುತ್ತಿದ್ದರು. ಬಹಳ ಸಮಯದವರೆಗೆ ಎಲ್ಲರೂ ಮಹಾನ್ ನಟ ಅಮಿತಾಭ್ ಬಚ್ಚನ್ ಅವರನ್ನು ಅನುಕರಿಸುತ್ತಿದ್ದಾರೆ ಎಂದು ಅಂದುಕೊಂಡಿದ್ದೆ. ಆಮೇಲೆ ಗೊತ್ತಾದದ್ದು, ಅವರೆಲ್ಲ ಭಗವಾನ್ ದಾದಾ ಅವರ ಡಾನ್ಸ್‌ ಶೈಲಿ ಅನುಕರಿಸುತ್ತಿದ್ದಾರೆ ಎಂದು.

ಗೋವಿಂದಗೂ ಸ್ಫೂರ್ತಿ!
ಭಗವಾನ್‌ ಅವರದ್ದು ವಿಶಿಷ್ಟ ಶೈಲಿಯ ಡಾನ್ಸ್.‘ಅಲ್ಬೇಲಾ’ದಿಂದ ಅವರ ವೃತ್ತಿಜೀವನ ತುತ್ತತುದಿಗೆ ತಲುಪಿತು. ಆ ಚಿತ್ರದ ಹಾಡುಗಳಿಗೆ ಇಂದಿಗೂ ಜನರನ್ನು ಮೈ ಕುಲುಕಿಸುವಂತೆ ಮಾಡುವ ಶಕ್ತಿಯಿದೆ. ಆ ಹಾಡುಗಳಲ್ಲಿ ತೋರಿಸಲಾದ ಅಂಗಚಲನೆಗಳು ಎಷ್ಟು ಸುಲಭವೆಂದರೆ ಯಾರು ಬೇಕಾದರೂ ಆ ಹೆಜ್ಜೆಗಳನ್ನು ಅನುಕರಿಸಬಹುದು. ಆ ಚಲನಚಿತ್ರದ ಇನ್ನೊಂದು ಹಾಡು ‘ಶೋಲಾ ಜೊ ಭಡ್ಕೆ’ ಈಗಲೂ ಎಷ್ಟೋ ಪಾರ್ಟಿಗಳಲ್ಲಿ ಕಡ್ಡಾಯವಾಗಿ ಕೇಳಿಬರುತ್ತದೆ. ಭಗವಾನ್ ದಾದಾ ಎಷ್ಟೋ ಚಲನಚಿತ್ರಗಳಲ್ಲಿ ನಟಿಸಿ, ನಿರ್ಮಿಸಿ, ನಿರ್ದೇಶಿಸಿದ್ದರೂ ‘ಅಲ್ಬೇಲಾ’ ಈ ಚಿತ್ರ ಅವರನ್ನು ಅಜರಾಮರರನ್ನಾಗಿಸಿದೆ.

ADVERTISEMENT


ನನಗೆ, ಬಾಲಿವುಡ್‌ ನಟ ಗೋವಿಂದ ಹಾಕುವ ನೃತ್ಯದ ಹೆಜ್ಜೆ, ಅದರೊಂದಿಗೆ ಹೊಮ್ಮಿಸುವ ಭಾವಾಭಿವ್ಯಕ್ತಿ ಮತ್ತು ನಗು ತುಂಬಾ ಇಷ್ಟ. ಅವರ ನೃತ್ಯ ಮತ್ತು ಮ್ಯಾನರಿಸಂ ಸೂಕ್ಷ್ಮವಾಗಿ ಗಮನಿಸಿದಾಗ ಗೋಚರಿಸಿದ್ದು ಇದು ಭಗವಾನ್‌ ದಾದಾ ಶೈಲಿ ಎಂದು. ತಮ್ಮ ಸೂಕ್ಷ್ಮ ಚಲನೆಗಳು ಮತ್ತು ಭಾವಾಭಿನಯದಿಂದ ಎಲ್ಲರನ್ನೂ ಮೋಡಿ ಮಾಡಿದ್ದ ಭಗವಾನ್ ಅವರು ಗೋವಿಂದ ಅವರಿಗೂ ಸ್ಫೂರ್ತಿ!

ಕಾರ್ಖಾನೆಯಿಂದ ನೇರವಾಗಿ ಬಣ್ಣದಲೋಕಕ್ಕೆ
ಹೌದು! ನಟ ಭಗವಾನ್‌ ಪೂರ್ವಾರ್ಧದ ಬದುಕು ಕಡುಬಡತನದಿಂದ ಸಿರಿವಂತಿಕೆಯೆಡೆಗೆ ಸಾಗಿ ಬಂದುದು ಒಂದು ಸ್ಫೂರ್ತಿದಾಯಕ ದೃಷ್ಟಾಂತ. ಜವಳಿ ಗಿರಣಿಯೊಂದರ ಕೆಲಸಗಾರನ ಮಗನಾದ ಭಗವಾನ್ ಕೂಡ ಕಾರ್ಮಿಕರಾಗಿದ್ದರು. ಸಿನಿಮಾ ಕಡೆಗೆ ಅದೆಷ್ಟು ಆಕರ್ಷಿತರಾಗಿದ್ದರೆಂದರೆ ಅವರ ಪ್ರತಿಯೊಂದು ಯೋಚನೆಯೂ ಸಿನಿಮಾ ಬಗ್ಗೆಯೇ ಆಗಿರುತ್ತಿತ್ತು. ಮೂಕಿ ಚಿತ್ರಗಳಲ್ಲಿ ಅತಿ ಚಿಕ್ಕ ಪಾತ್ರಗಳನ್ನು ಮಾಡುವ ಮೂಲಕ ಚಿತ್ರರಂಗದೊಳಗೆ ನುಸುಳಿದರು. ಅವರ ಕಠಿಣ ಪರಿಶ್ರಮ ಮತ್ತು ಚಿತ್ರ ತಯಾರಿಕೆಯೆಡಗಿನ ಶ್ರದ್ಧೆ ತಾವೇ ತಮ್ಮ ಚಿತ್ರಗಳನ್ನು ನಿರ್ಮಿಸುವಲ್ಲಿಗೆ ಕರೆತಂದವು. ಸಾಧಾರಣವಾಗಿ ಸರಳ ಮನಸ್ಸಿನ ಅಥವಾ ಸಾಮನ್ಯ ವ್ಯಕ್ತಿಯ ಪಾತ್ರಗಳನ್ನು ಮಾಡುತ್ತಾ ಎಲ್ಲ ವರ್ಗಗಳ, ಅದರಲ್ಲೂ ಕಾರ್ಮಿಕ ವರ್ಗದ ಜನರ ನಡುವೆ ಬಹು ಜನಪ್ರಿಯರಾದರು.

ಸಂಧ್ಯಾಕಾಲದಲ್ಲಿ ಮಹಾಪತನ
ಭಗವಾನ್ ಜಾಗೃತಿ ಪಿಕ್ಚರ್ಸ್ ಹುಟ್ಟು ಹಾಕಿ ಚಲನಚಿತ್ರ ನಿರ್ಮಾಣಕ್ಕೆ ಕಾಲಿಟ್ಟರು. 1947ರಲ್ಲಿ ಚೆಂಬೂರಿನಲ್ಲಿ 'ಜಾಗೃತಿ ಸ್ಟುಡಿಯೋಸ್' ಸ್ಥಾಪಿಸಿದರು. ಅವರಿಗೆ ಒಲಿದು ಬಂದ ಯಶಸ್ಸಿನಿಂದ ಮುಂಬೈನ ಅತ್ಯಂತ ದುಬಾರಿ ಮತ್ತು ಐಷಾರಾಮಿ ಪ್ರದೇಶ ಜುಹೂವಿನಲ್ಲಿ ಸಾಕಷ್ಟು ಭೂಮಿಯೊಂದಿಗೆ ಬಂದ 25 ಕೋಣೆಗಳ ಭವ್ಯ ಬಂಗಲೆ ಕೊಂಡುಕೊಂಡರು.ಅಷ್ಟೇ ಅಲ್ಲ, ವಾರದ ಪ್ರತಿ ದಿನಕ್ಕೊಂದು ಎಂಬಂತೆ ಅವರ ಬಳಿ ಏಳು ಕಾರುಗಳಿದ್ದವು.

ಭಗವಾನ್ ಸಾಲುಸಾಲಾಗಿ ಕಡಿಮೆ ಬಜೆಟ್ಟಿನ ಆಕ್ಷನ್ ಚಿತ್ರಗಳನ್ನು ನಿರ್ದೇಶಿಸಿದರು. ತಮಿಳು ಚಿತ್ರ 'ವನ ಮೋಹಿನಿ' (1941) ಅವರ ಗುರುತರವಾದ ಚಲನಚಿತ್ರಗಳಲ್ಲಿ ಒಂದೆನಿಸಿಕೊಂಡಿತು.ಅವರ ಬದುಕಿನ ಉತ್ತರಾರ್ಧ ಅತೀವ ದುಃಖಮಯ ಮತ್ತು ಹೃದಯವಿದ್ರಾವಕ ತಿರುವು ಪಡೆದುಕೊಂಡಿತು. ಅವರನ್ನು ಮೆಚ್ಚುವ ಯಾರೂ ಇದರ ಬಗ್ಗೆ ತಿಳಿಯಲು ಬಯಸುವುದಿಲ್ಲವೇನೋ. ನನಗಂತೂ ನನ್ನ ಮಕ್ಕಳು ಭಗವಾನ್‌ ಜೀವನ ಸಂಧ್ಯಾಕಾಲದ ಬಗ್ಗೆ ತಿಳಿದುಕೊಳ್ಳುವುದು ಇಷ್ಟವಿಲ್ಲ. ಬದಲಿಗೆ, ನಮ್ಮ ಕುಟುಂಬದ ಸಂಪ್ರದಾಯವನ್ನು ಮುಂದುವರೆಸಿ, ಅದೇ ಲಾಲಿಹಾಡನ್ನು ತಮ್ಮ ಮಕ್ಕಳಿಗೆ ಹಾಡಲಿ ಎಂದು ಬಯಸುತ್ತೇನೆ. ಈ ರೀತಿ ಭಗವಾನ್ ದಾದಾರ ಹಾಡುಗಳು, ನೃತ್ಯಗಳು, ಭಾವಾಭಿವ್ಯಕ್ತಿ ಮತ್ತು ಎಲ್ಲಕ್ಕಿಂತ ಮುಖ್ಯವಾಗಿ ಆ ಮನುಷ್ಯನೇ, ಅದೇ ವೈಭವದಲ್ಲಿ ನನ್ನ ಮತ್ತು ನನ್ನ ಕುಟುಂಬದ ಜೊತೆ ಸದಾ ನೆಲೆಸಿರುತ್ತಾರೆ.

-ಲೇಖಕ: ಅನಿರುದ್ಧ ಜತಕರ,ನಟ

-ಕನ್ನಡಕ್ಕೆ: ಜಯಶ್ರೀ

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.