ADVERTISEMENT

‌ಬುರ್ಲಿ ಬುಲೆಟ್‌ ರೈಡಿಂಗ್‌

ರಮಣನಿಗೆ ರಾಧೆ ಸರ್ಚಿಂಗ್‌

ಕೆ.ಎಂ.ಸಂತೋಷ್‌ ಕುಮಾರ್‌
Published 8 ಮಾರ್ಚ್ 2020, 19:30 IST
Last Updated 8 ಮಾರ್ಚ್ 2020, 19:30 IST
ಸಂಜನಾ ಬುರ್ಲಿ
ಸಂಜನಾ ಬುರ್ಲಿ   

‘ರಾಧಾ ರಮಣ’ ಸೀರಿಯಲ್‌ ಕಿರುತೆರೆಯಲ್ಲಿ ಪ್ರೇಕ್ಷಕರನ್ನು ಮೋಡಿ ಮಾಡಿತ್ತು. ಈ ಹೆಸರಿಗೆ ತುಸು ಹತ್ತಿರದ ಹೋಲಿಕೆಯ ಸಿನಿಮಾವೊಂದು ಕನ್ನಡದಲ್ಲಿ ರೆಡಿಯಾಗಿದೆ. ಮೇ ಅಥವಾ ಜೂನ್‌ನಲ್ಲಿ ಚಿತ್ರ ತೆರೆಗೆ ಬರುವ ನಿರೀಕ್ಷೆ ಇದೆ.

ಚಿತ್ರದ ಹೆಸರು ‘ರಾಧಾ ಸರ್ಚಿಂಗ್‌ ರಮಣ ಮಿಸ್ಸಿಂಗ್‌’. ರಾಧೆಯಾಗಿ ನಟಿ ಸಂಜನಾ ಬುರ್ಲಿ ಬಣ್ಣ ಹಚ್ಚಿದ್ದರೆ, ಸೆಲೆಬ್ರಿಟಿ ಫೋಟೊಗ್ರಾಫರ್‌ ರಾಘವ್ ರಮಣನಾಗಿ ಚಿತ್ರರಂಗ ಪ್ರವೇಶಿಸುತ್ತಿದ್ದಾರೆ. ಇದುನಾಯಕನಾಗಿ ಅವರಿಗೆ ಚೊಚ್ಚಲ ಸಿನಿಮಾ. ಈ ಚಿತ್ರಕ್ಕೆ ಆ್ಯಕ್ಷನ್‌ ಕಟ್‌ ಹೇಳಿರುವುದು ನಿರ್ದೇಶಕ ಎಂ.ಎನ್‌. ಶ್ರೀಕಾಂತ್‌. ಬಂಡವಾಳ ಹೂಡಿರುವವರು ಯಶ್‌ ಎಂಬುವವರು.ಛಾಯಾಗ್ರಹಣ ವಿಶ್ವಜಿತ್ ರಾವ್‌,ಕೊರಿಯೊಗ್ರಫಿ ಹರಿ, ಕಲೈ ಮಾಸ್ಟರ್‌ ಅವರದ್ದು.

ಟೈಟಲ್‌ ಸಿಂಪಲ್‌ ಇರುವಂತೆ ಚಿತ್ರದ ಕಥೆ ಸಿಂಪಲ್‌ ಇಲ್ಲ. ಮಂಗಳೂರು ಮತ್ತು ಮೈಸೂರಿನಲ್ಲಿ 2014ರ ವೇಳೆಗೆ ನಡೆದ ನೈಜ ಘಟನೆ ಆಧರಿಸಿ ಈ ಚಿತ್ರದ ಕಥೆ ಹೆಣೆಯಲಾಗಿದೆಯಂತೆ. ಈ ನೈಜ ಘಟನೆಗೆ ಚಿತ್ರದ ನಿರ್ದೇಶಕ ಶ್ರೀಕಾಂತ್‌ ಪ್ರತ್ಯಕ್ಷ ಸಾಕ್ಷಿಯಾಗಿರುವುದರಿಂದ ಕಥೆ, ಚಿತ್ರಕಥೆ ಹಾಗೂ ಸಂಭಾಷಣೆ ಹೊಸೆಯುವುದು ಅವರಿಗೆ ಕಷ್ಟವಾಗಲಿಲ್ಲವಂತೆ. ಒಂದೂವರೆ ವರ್ಷದ ಹಿಂದೆ ಚಿತ್ರಕಥೆ ಸಿದ್ಧಗೊಳಿಸಿ, ಕಳೆದ ವರ್ಷದ ಮಾರ್ಚ್‌ನಲ್ಲಿ ಚಿತ್ರ ಕೈಗೆತ್ತಿಕೊಂಡು ವರ್ಷದೊಳಗೆ ಪೂರ್ಣಗೊಳಿಸಿದ್ದಾರಂತೆ.

ADVERTISEMENT

ಸದ್ಯ ಚಿತ್ರವು ಎಡಿಟಿಂಗ್‌ ಹಂತದಲ್ಲಿದ್ದು, ಸಿಜಿ ಮತ್ತು ಡಿಐ ಕೆಲಸಗಳು ನಡೆಯುತ್ತಿವೆ. ಚಿತ್ರದ ಮೊದಲ ಪೋಸ್ಟರ್‌ ಅನ್ನು ಇತ್ತೀಚೆಗಷ್ಟೇ ಬಿಡುಗಡೆ ಮಾಡಿರುವ ಚಿತ್ರತಂಡ,ಟೀಸರ್‌, ಟ್ರೇಲರ್‌, ಆಡಿಯೊ ಏಪ್ರಿಲ್‌ನಲ್ಲಿ ಬಿಡುಗಡೆಗೊಳಿಸುವ ಸಿದ್ಧತೆಯಲ್ಲಿದೆ.

ಚಿತ್ರದಲ್ಲಿ ನಾಲ್ಕು ಹಾಡುಗಳಿದ್ದು,ಸಂತೋಷ್‌ ನಾಯಕ್‌ ಗೀತ ಸಾಹಿತ್ಯ ರಚಿಸಿದ್ದಾರೆ. ‘ಪಳಪಳ ಕಣ್ಣಲ್ಲಿ’ ಹಾಡಿಗೆಗಾಯಕ ಸೋನು ನಿಗಂ, ‘ಜಿಗಿ ಜಿಗಿಯುತ್ತಿದೆ ಜೀವ’ ಹಾಡಿಗೆಅನುರಾಧಾ ಭಟ್‌ ಹಾಗೂ ಇನ್ನೊಂದು ಹಾಡಿಗೆನವೀನ್‌ ಸಜ್ಜು ಧ್ವನಿಯಾಗಿದ್ದಾರೆ.

‘ಇದರಲ್ಲಿ ನಾನು ಕ್ರಿಶ್ಚಿಯನ್‌ ಹುಡುಗಿ. ಆರ್ಕಿಟೆಕ್ಟ್‌ ಎಂಜಿನಿಯರಿಂಗ್‌ ಓದುವ ವಿದ್ಯಾರ್ಥಿನಿ. ನನ್ನ ಪಾತ್ರಕ್ಕೆ ಎರಡು ಶೇಡ್‌ಗಳಿವೆ. ಒಂದು ಕಡೆ ಸಾಪ್ಟ್‌, ಇನ್ನೊಂದು ಕಡೆ ಪವರ್‌ಪುಲ್‌ ಹುಡುಗಿ.ಈ ರೀತಿ ಯಾಕೆ ಎನ್ನುವುದು ಚಿತ್ರದ ಕುತೂಹಲ.ರಮಣನನ್ನು ರಾಧಾ ಯಾಕೆ ಹುಡುಕುತ್ತಾಳೆ, ತಪ್ಪಿಸಿಕೊಂಡಿರುವ ರಮಣ ಸಿಗುತ್ತಾನಾ? ಇಲ್ಲವೋ? ಎನ್ನುವುದು ಚಿತ್ರದ ಕಥೆ.ಇದು ಸೈಕಲಾಜಿಕಲ್‌ ಥ್ರಿಲ್ಲರ್‌ ಚಿತ್ರ. ಪಾತ್ರಕ್ಕಾಗಿ ಬುಲೆಟ್‌ ರೈಡ್‌ ಕೂಡ ಮಾಡಿದ್ದೇನೆ’ ಎನ್ನುತ್ತಾರೆ ನಟಿ ಸಂಜನಾ.

‘ಆಡಿಷನ್‌ಗೆ ಬಂದಿದ್ದ 50 ನಟಿಯರಲ್ಲಿ ನಿರ್ದೇಶಕರು ನನ್ನನ್ನು ಆಯ್ಕೆ ಮಾಡಿದರು.ಬೆಂಗಳೂರು, ಮೈಸೂರು, ಮಂಗಳೂರು ಭಾಗದಲ್ಲಿ 50 ದಿನಗಳ ಕಾಲ ಶೂಟಿಂಗ್‌ ನಡೆಯಿತು. ನನ್ನ ಕರಿಯರ್‌ನಲ್ಲಿ ಅತೀ ಹೆಚ್ಚು ಶ್ರಮ ಮತ್ತು ಸಮಯ ನೀಡಿ ನಟಿಸಿರುವ ಚಿತ್ರವಿದು. ಈ ಚಿತ್ರದ ಮೇಲೆ ಸಾಕಷ್ಟು ನಿರೀಕ್ಷೆಗಳು ಇವೆ’ ಎಂದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.