ADVERTISEMENT

ಮಾದಕ ವಸ್ತುಗಳ ಮಾರಾಟ ಪ್ರಕರಣ: ನಟಿ ರಾಗಿಣಿ ದ್ವಿವೇದಿ ವಿರುದ್ಧದ ಪ್ರಕರಣ ರದ್ದು

​ಪ್ರಜಾವಾಣಿ ವಾರ್ತೆ
Published 14 ಜನವರಿ 2025, 15:44 IST
Last Updated 14 ಜನವರಿ 2025, 15:44 IST
ನಟಿ ರಾಗಿಣಿ ದ್ವಿವೇದಿ
ನಟಿ ರಾಗಿಣಿ ದ್ವಿವೇದಿ    

ಬೆಂಗಳೂರು: ‘ಮೋಜು ಮೇಜವಾನಿಗಳನ್ನು ಆಯೋಜಿಸಿ ಮಾದಕ ವಸ್ತುಗಳನ್ನು ಮಾರಾಟ ಮಾಡಿದ್ದರು’ ಎಂಬ ಆರೋಪಕ್ಕೆ ಸಂಬಂಧಿಸಿದಂತೆ ನಟಿ ರಾಗಿಣಿ ದ್ವಿವೇದಿ ಮತ್ತು ಪ್ರಶಾಂತ್‌ ರಂಕಾ ವಿರುದ್ಧ ದಾಖಲಾಗಿದ್ದ ಕ್ರಿಮಿನಲ್‌ ಪ್ರಕರಣವನ್ನು ಹೈಕೋರ್ಟ್‌ ರದ್ದುಪಡಿಸಿದೆ.

ಈ ಸಂಬಂಧ ರಾಗಿಣಿ ಮತ್ತು ಪ್ರಶಾಂತ್‌ ಸಲ್ಲಿಸಿದ್ದ ಕ್ರಿಮಿನಲ್‌ ಅರ್ಜಿ ವಿಚಾರಣೆ ನಡೆಸಿದ ನ್ಯಾಯಮೂರ್ತಿ ಹೇಮಂತ ಚಂದನಗೌಡರ ಅವರಿದ್ದ ಏಕಸದಸ್ಯ ನ್ಯಾಯಪೀಠ, ‘ಅರ್ಜಿದಾರರ ವಿರುದ್ಧದ ಆರೋಪ ಪುಷ್ಟೀಕರಿಸಲು ಪ್ರಾಸಿಕ್ಯೂಷನ್‌ ಸಹ ಆರೋಪಿಗಳ ಹೇಳಿಕೆ ಮತ್ತು ದೋಷಾರೋಪ ಪಟ್ಟಿಯಲ್ಲಿರುವ ಸಾಕ್ಷಿಗಳನ್ನು ಹೊರತುಪಡಿಸಿ ಬೇರಾವುದೇ ದಾಖಲೆಗಳನ್ನು ಸಲ್ಲಿಸಿಲ್ಲ’ ಎಂದು ಹೇಳಿದೆ.

‘ಅರ್ಜಿದಾರರು ಮೋಜು ಮೇಜವಾನಿಗಳನ್ನು ಆಯೋಜಿಸಿದ್ದರು. ಅಲ್ಲಿ ಮಾದಕ ವಸ್ತುಗಳನ್ನು ಮಾರಾಟ ಮಾಡಿದ್ದರು ಎಂಬುದಕ್ಕೆ, ಸಹ ಆರೋಪಿಯ ಹೇಳಿಕೆ ಮತ್ತು ದೋಷಾರೋಪ ಪಟ್ಟಿಯಲ್ಲಿರುವ ಸಾಕ್ಷಿಯನ್ನು ಮಾತ್ರವೇ ಆಧರಿಸಲಾಗಿದೆ. ಹೀಗಾಗಿ, ಅರ್ಜಿದಾರರ ವಿರುದ್ಧ ಕ್ರಿಮಿನಲ್‌ ಪ್ರಕ್ರಿಯೆ ಮುಂದುವರಿಸುವುದು ಕಾನೂನಿನ ದುರ್ಬಳಕೆಯಾಗುತ್ತದೆ’ ಎಂದು ನ್ಯಾಯಪೀಠ ಹೇಳಿದೆ.

ADVERTISEMENT

ಪ್ರಕರಣದಲ್ಲಿ ಎರಡನೇ ಆರೋಪಿಯಾಗಿದ್ದ ರಾಗಿಣಿ ದ್ವಿವೇದಿ ಅಲಿಯಾಸ್‌ ಗಿಣಿ ಅಲಿಯಾಸ್‌ ರಾಗ್ಸ್‌ ಹಾಗೂ ನಾಲ್ಕನೇ ಆರೋಪಿ ಪ್ರಶಾಂತ್‌ ರಂಕಾ ಸಲ್ಲಿಸಿದ್ದ ಅರ್ಜಿಗಳನ್ನು ನ್ಯಾಯಪೀಠ ಪುರಸ್ಕರಿಸಿದೆ. ವಿಶೇಷ ಪ್ರಾಸಿಕ್ಯೂಟರ್‌ ಆಗಿ ವೀರಣ್ಣ ಜಿ.ತಿಗಡಿ ಮತ್ತು ಅರ್ಜಿದಾರರ ಪರ ವಕೀಲ ಎ.ಮಹಮ್ಮದ್‌ ತಾಹಿರ್ ಮತ್ತು ವಿ.ಭರತ್‌ ಕುಮಾರ್‌ ವಾದ ಮಂಡಿಸಿದ್ದರು.

ಪ್ರಕರಣವೇನು?: ‘ರಾಗಿಣಿ ಮತ್ತು ಇತರರು ಬೆಂಗಳೂರಿನ ವಿವಿಧ ಸ್ಥಳಗಳಲ್ಲಿ ಮೋಜು ಮೇಜವಾನಿಗಳನ್ನು ಆಯೋಜಿಸಿ, ಗ್ರಾಹಕರನ್ನು ಕರೆಸಿ ಡ್ರಗ್‌ ಪೆಡ್ಲರ್‌ಗಳ ಮೂಲಕ ಕೂಟಕ್ಕೆ ಬರುವ ಉದ್ಯಮಿಗಳು, ಸೆಲೆಬ್ರಿಟಿಗಳು, ನಟ-ನಟಿಯರು, ಡಿ.ಜೆಗಳು (ಡಿಸ್ಕೊ ಜಾಕಿ) ಸಾಫ್ಟ್‌ವೇರ್‌ ಉದ್ಯೋಗಿಗಳು ಇತರರಿಗೆ ಮಾದಕ ವಸ್ತುಗಳನ್ನು ಪೂರೈಸಿ, ಅಕ್ರಮವಾಗಿ ಹಣ ಸಂಪಾದಿಸುತ್ತಿದ್ದಾರೆ’ ಎಂಬ ಆರೋಪದಡಿ ಸಿಸಿಬಿಯ ಎಸಿಪಿ ಕೆ.ಸಿ.ಗೌತಮ್‌ ಕಾಟನ್‌ ಪೇಟೆ ಪೊಲೀಸ್‌ ಠಾಣೆಯಲ್ಲಿ 2020ರ ಸೆಪ್ಟೆಂಬರ್‌ 4ರಂದು ದೂರು ದಾಖಲಿಸಿದ್ದರು.

ಇದರನ್ವಯ, ಮಾದಕ ವಸ್ತುಗಳು ಮತ್ತು ಅಮಲು ಪದಾರ್ಥಗಳ ನಿಷೇಧ ಕಾಯ್ದೆ–1985ರ ಕಲಂ 21, 21(ಸಿ), 22(ಸಿ), 27ಎ, 27-ಬಿ ಮತ್ತು 29 ಮತ್ತು ಭಾರತೀಯ ದಂಡ ಸಂಹಿತೆ–1860ರ ಕಲಂ 120(ಬಿ) ಮತ್ತು 201 ಅಡಿ ವಿಚಾರಣೆ ನಡೆಸಿ ವಿಚಾರಣಾ ನ್ಯಾಯಾಲಯಕ್ಕೆ ದೋಷಾರೋಪ ಪಟ್ಟಿ ಸಲ್ಲಿಸಲಾಗಿತ್ತು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.