ADVERTISEMENT

Chaithra Achar Interview |ತೆರೆಗಳಲ್ಲಿ ಈ ವರ್ಷ ಚೈತ್ರಾ ಕಾಲ

ಅಭಿಲಾಷ್ ಪಿ.ಎಸ್‌.
Published 26 ಮೇ 2025, 23:30 IST
Last Updated 26 ಮೇ 2025, 23:30 IST
ಚೈತ್ರಾ 
ಚೈತ್ರಾ    

‘ಸಪ್ತ ಸಾಗರದಾಚೆ ಎಲ್ಲೋ’ ಸಿನಿಮಾ ಬಳಿಕ ನಟಿ ಚೈತ್ರಾ ಜೆ.ಆಚಾರ್‌ ಕಾಲಿವುಡ್‌ಗೆ ಹೆಜ್ಜೆ ಇಟ್ಟಿದ್ದರು. ಅಲ್ಲೆರಡು ಸಿನಿಮಾಗಳನ್ನು ಪೂರ್ಣಗೊಳಿಸಿ ಇದೀಗ ಮತ್ತೆ ಕನ್ನಡ ಸಿನಿಮಾಗಳಲ್ಲಿ ತೊಡಗಿಸಿಕೊಂಡಿದ್ದಾರೆ. ಅವರು ನಟಿಸಿರುವ ‘ಮಾರ್ನಮಿ’ ಚಿತ್ರದ ಪಾತ್ರ ಪರಿಚಯ ಟೀಸರ್‌ ಇತ್ತೀಚೆಗೆ ಬಿಡುಗಡೆಯಾಗಿದೆ. ಈ ಚಿತ್ರ ಇದೇ ವರ್ಷ ತೆರೆಕಾಣಲಿದ್ದು, ಸಿನಿಮಾದೊಳಗಿನ ತಮ್ಮ ಪಾತ್ರದ ಬಗ್ಗೆ ಚೈತ್ರಾ ಮಾತಿಗಿಳಿದಾಗ...

‘ಮಾರ್ನಮಿ ಎಂದರೆ ದಸರಾ. ಈ ಸಿನಿಮಾದ ಕಥೆ ನನ್ನನ್ನು ಸೆಳೆಯಿತು. ದಸರಾ ಸುತ್ತಮುತ್ತಲೇ ಚಿತ್ರದ ಕಥೆ ನಡೆಯುತ್ತದೆ. ಗ್ಯಾಂಗ್‌ಗಳ ನಡುವೆ ನಡೆಯುವ ಗಲಾಟೆ, ಅದರೊಳಗೊಂದು ಪ್ರೇಮಕಥೆ ಹೀಗೆ ಮಂಗಳೂರನ್ನೇ ವೇದಿಕೆಯಾಗಿಸಿಕೊಂಡು ನಡೆಯುವ ಕಥೆ ಇದಾಗಿದೆ. ಇಡೀ ಸಿನಿಮಾದಲ್ಲಿ ಮಂಗಳೂರು ಭಾಷೆಯಿದೆ. ಇದಕ್ಕಾಗಿ ವರ್ಕ್‌ಶಾಪ್‌ಗಳನ್ನು ಮಾಡಿದ್ದೆವು. ಇತ್ತೀಚೆಗೆ ಚಿತ್ರದ ಡಬ್ಬಿಂಗ್‌ ಮುಗಿಯತು. ಪ್ರತಿಯೊಂದು ಮಾತನ್ನೂ ಬಹಳ ಸೂಕ್ಷ್ಮವಾಗಿ ಡಬ್ಬಿಂಗ್‌ ಮಾಡಿದೆ. ಚಿತ್ರದಲ್ಲಿ ನಾನು ‘ದೀಕ್ಷಾ’ ಎನ್ನುವ ಪಾತ್ರ ಮಾಡಿದ್ದೇನೆ. ಈಕೆಗೆ ಚಿತ್ರದೊಳಗೆ ಒಂದು ಗ್ರಾಫ್‌ ಇದೆ. ಸಿನಿಮಾ ಆರಂಭವಾಗಿದ್ದಾಗ ಇರುವ ದೀಕ್ಷಾಳಿಗೂ ಕ್ಲೈಮ್ಯಾಕ್ಸ್‌ ಹಂತದಲ್ಲಿನ ದೀಕ್ಷಾಳಿಗೂ ಬಹಳ ವ್ಯತ್ಯಾಸವಿದೆ. ತಕ್ಷಣದಲ್ಲೇ ನಿರ್ಧಾರಗಳನ್ನು ತೆಗೆದುಕೊಳ್ಳುವಾಕೆ. ನನ್ನ ನಿಜಜೀವನಕ್ಕೆ ಹೋಲಿಸಿದರೆ ಈ ಪಾತ್ರ ತದ್ವಿರುದ್ಧವಾಗಿದೆ. ನಾನು ಪ್ರತಿಯೊಂದು ಹೆಜ್ಜೆಗಳನ್ನು ಆಲೋಚನೆ ಮಾಡಿ ಇಡುವಾಕೆ. ‘ದೀಕ್ಷಾ’ ಮತ್ತು ನಾಯಕನ ಪ್ರೇಮಕಥೆ, ಅವರ ನಡುವೆ ಉಂಟಾಗುವ ಭಿನ್ನಾಭಿಪ್ರಾಯ ಕಥೆಯೊಳಗಿದೆ’ ಎಂದು ಪಾತ್ರದ ವಿವರಣೆ ನೀಡಿದರು ಚೈತ್ರಾ. 

‘ಮಂಗಳೂರು ದಸರಾ, ಅಲ್ಲಿನ ಹುಲಿವೇಷದ ಹಿನ್ನೆಲೆ ಹಾಗೂ ಸಂಸ್ಕೃತಿ ಸೇರಿದಂತೆ ಅದೇ ಊರಿನ ಮನೆಗಳು, ವೇಷಭೂಷಣ ಹೀಗೆ ಎಲ್ಲವನ್ನೂ ನೈಜವಾಗಿ ಸೆರೆಹಿಡಿಯುವ ಪ್ರಯತ್ನ ಈ ಸಿನಿಮಾದಲ್ಲಾಗಿದೆ. ಬಹುತೇಕ ಎಲ್ಲಾ ಜೂನಿಯರ್‌ ಆರ್ಟಿಸ್ಟ್‌ಗಳು ಸ್ಥಳೀಯರೇ ಆಗಿದ್ದಾರೆ. ಶಿವಸೇನಾ ಅವರ ಛಾಯಾಚಿತ್ರಗ್ರಹಣ, ಚರಣ್‌ ರಾಜ್‌ ಅವರ ಸಂಗೀತ ಸಿನಿಮಾಗೆ ಹೊಸ ಸ್ಪರ್ಶವನ್ನೇ ನೀಡಿದೆ. ಇದು ಪ್ರೇಕ್ಷಕರನ್ನು ಸೆಳೆಯಲಿದೆ ಎನ್ನುವ ನಂಬಿಕೆ ನನಗಿದೆ’ ಎನ್ನುತ್ತಾರೆ ಚೈತ್ರಾ.         

ADVERTISEMENT

‘‘ಉತ್ತರಕಾಂಡ’ ಸಿನಿಮಾದ ಚಿತ್ರೀಕರಣ ಆರಂಭವಾಗಬೇಕಿದೆ. ವಿಜಯಪುರದಲ್ಲಿ ಇದರ ನಾಲ್ಕು ದಿನ ಚಿತ್ರೀಕರಣ ನಡೆದಿತ್ತು. ಇದೀಗ ಹೊಸ ಕಥೆಯೊಂದನ್ನು ಕೇಳಿ ಒಪ್ಪಿಕೊಂಡಿದ್ದೇನೆ. ಇದು 23–24 ವಯಸ್ಸಿನ ಹೊಸಬರ ಚಿತ್ರ. ಶೀಘ್ರದಲ್ಲೇ ಇದು ಘೋಷಣೆಯಾಗಲಿದೆ’ ಎಂದರು. ‘ಟೋಬಿ’, ‘ಸಪ್ತಸಾಗರದಾಚೆ ಎಲ್ಲೋ’ ಬಿಡುಗಡೆ ಬಳಿಕ ಮಲಯಾಳ, ತೆಲುಗು ಹಾಗೂ ಹಿಂದಿಯಿಂದಲೂ ಚೈತ್ರಾ ಅವರಿಗೆ ಅವಕಾಶಗಳು ಹುಡುಕಿಕೊಂಡು ಬಂದಿವೆ.   

ರಿತ್ವಿಕ್‌ ಮಠದ್‌ ಹೀರೊ 

ಕುಂದಾಪುರದ ಪಡುಕೋಣೆಯ ರಿಶಿತ್ ಶೆಟ್ಟಿ ‘ಮಾರ್ನಮಿ’ ಸಿನಿಮಾದ ಸೂತ್ರಧಾರ. ಚಿತ್ರವನ್ನು ಗುನಾಧ್ಯ ಬ್ಯಾನರ್ ಅಡಿಯಲ್ಲಿ ಶಿಲ್ಪಾ ನಿಶಾಂತ್ ನಿರ್ಮಾಣ ಮಾಡುತ್ತಿದ್ದಾರೆ. ರಿತ್ವಿಕ್ ಮಠದ್ ನಾಯಕನಾಗಿ ಅಭಿನಯಿಸಿದ್ದು, ಪ್ರಕಾಶ್ ತುಮಿನಾಡು, ಸೋನು ಗೌಡ, ಜ್ಯೋತೀಶ್ ಶೆಟ್ಟಿ, ರೋಚಿತ್, ಸ್ವರಾಜ್ ಶೆಟ್ಟಿ, ಮೈಮ್ ರಾಮದಾಸ್ ಹಾಗೂ ಚೈತ್ರ ಶೆಟ್ಟಿ ಸೇರಿದಂತೆ ಹಲವರು ತಾರಾಬಳಗದಲ್ಲಿದ್ದಾರೆ.

ಮಾರ್ನಮಿ ಚೈತ್ರಾ

‘ಮೈ ಲಾರ್ಡ್‌’ ಶೀಘ್ರ ತೆರೆಗೆ

ಸಿದ್ಧಾರ್ಥ್‌ ಅವರ ‘ನುವೊಸ್ತಾನಂಟೆ ನೇನೊದ್ದಾಂತಾನ’ ‘ಬಾಯ್ಸ್‌’ ಮುಂತಾದ ಸಿನಿಮಾಗಳನ್ನು ನೋಡಿದಾಗ ಅವರ ಜೊತೆ ನಟಿಸುವ ಆಸೆ ಹುಟ್ಟಿತ್ತು. ‘ಚಿತ್ತ’ ಸಿನಿಮಾ ನೋಡಿದ ಬಳಿಕ ನಟನೆಯಲ್ಲಿ ಅವರು ಪಳಗಿದ ರೀತಿಯನ್ನು ಕಂಡಿದ್ದೆ. ಇದೀಗ ಅವರ ಜೊತೆ ನಟಿಸಿರುವ ‘3 BHK’ ರಿಲೀಸ್‌ಗೆ ಸಜ್ಜಾಗಿದೆ. ಜುಲೈ 4ರಂದು ಈ ಸಿನಿಮಾ ಬಿಡುಗಡೆಯಾಗಲಿದೆ. ಇದರಲ್ಲಿ ನಾನು ಸಿದ್ಧಾರ್ಥ್‌ ಅವರಿಗೆ ಜೋಡಿಯಾಗಿದ್ದೇನೆ. ಚೆನ್ನೈನಲ್ಲಿ ವಾಸಿಸುವ ಮಧ್ಯಮ ವರ್ಗದ ಹುಡುಗಿಯ ಪಾತ್ರ ನನ್ನದು. ಇದೊಂದು ಫ್ಯಾಮಿಲಿ ಡ್ರಾಮಾ. ಸಸಿಕುಮಾರ್‌ ಅವರ ಜೊತೆ ನಟಿಸಿರುವ ‘ಮೈ ಲಾರ್ಡ್‌’ ಸಿನಿಮಾದ ಡಬ್ಬಿಂಗ್‌ ಪೂರ್ಣಗೊಂಡಿದೆ. ಅದೂ ಈ ವರ್ಷ ತೆರೆಕಾಣಲಿದೆ’ ಎನ್ನುತ್ತಾರೆ ಚೈತ್ರಾ.  

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.