ADVERTISEMENT

ಭ್ರಷ್ಟ ವ್ಯವಸ್ಥೆ ಬಿಂಬಿಸುವ ‘ಚಂಬಲ್ ರಾಜ್’

ನವೀನ ಕುಮಾರ್ ಜಿ.
Published 22 ಫೆಬ್ರುವರಿ 2019, 19:22 IST
Last Updated 22 ಫೆಬ್ರುವರಿ 2019, 19:22 IST
ನೀನಾಸಂ ಸತೀಶ್
ನೀನಾಸಂ ಸತೀಶ್   

* ನಿರ್ಮಾಪಕರು: ಎನ್. ದಿನೇಶ್ ಕುಮಾರ್, ಮಾಥ್ಯು ವರ್ಗೀಸ್

* ನಿರ್ದೇಶನ: ಜೇಕಬ್ ವರ್ಗೀಸ್

* ತಾರಾಗಣ: ನೀನಾಸಂ ಸತೀಶ್, ಸೋನು ಗೌಡ, ರೋಜರ್ ನಾರಾಯಣ್, ಅಚ್ಯುತ್ ಕುಮಾರ್

ADVERTISEMENT

**

'ಚಂಬಲ್' ಹೆಸರು ಕೇಳಿದರೆ ಪಕ್ಕನೆ ನಮ್ಮ ಕಣ್ಣಮುಂದೆ ಬರುವುದು ಕಣಿವೆ ನಾಡಿನ ಡಕಾಯಿತರ ಚಿತ್ರಣ. ಜನರನ್ನು ಕೊಳ್ಳೆ ಹೊಡೆಯುವ ಡಕಾಯಿತರು ಕೇವಲ ಚಂಬಲ್‌ನಲ್ಲಿ ಮಾತ್ರವಲ್ಲ, ನಮ್ಮ ನಿಮ್ಮ ನಡುವೆಯೂ ಇದ್ದಾರೆ ಎನ್ನುವುದನ್ನು ಇದೇ ಹೆಸರನ್ನಿಟ್ಟುಕೊಂಡಿರುವ ಈ ಸಿನಿಮಾ ಸಾರುತ್ತದೆ.

ಸಭ್ಯರ ಮುಖವಾಡ ಧರಿಸಿ ರಾಜ್ಯವನ್ನು ಕೊಳ್ಳೆ ಹೊಡೆಯುವ ಪುಢಾರಿಗಳು ಹೇಗೆ ಪ್ರಾಮಾಣಿಕ ಅಧಿಕಾರಿಗಳ ಬಲಿ ಪಡೆದುಕೊಳ್ಳುತ್ತಾರೆ ಎಂಬುದನ್ನು ಈ ಚಿತ್ರದ ಮೂಲಕ ಜೇಕಬ್ ವರ್ಗೀಸ್ ಕಟ್ಟಿಕೊಟ್ಟಿದ್ದಾರೆ.

ಜೇಕಬ್ ವರ್ಗೀಸ್ ಅವರು ತಮ್ಮ ಹಿಂದಿನ ಚಿತ್ರ 'ಪೃಥ್ವಿ'ಯಲ್ಲಿ ಗಣಿ ಮಾಫಿಯಾದ ಕರಾಳ ಮುಖವನ್ನು ಅನಾವರಣಗೊಳಿಸಿದರೆ, ಈ ಚಿತ್ರದಲ್ಲಿ ಮರಳು, ಭೂ ಮಾಫಿಯಾಗಳು ಹೇಗೆ ನಮ್ಮ ನಾಡಿಗೆ ಕಂಟಕವಾಗಿವೆ ಎಂಬುದನ್ನು ತೋರಿಸಿಕೊಟ್ಟಿದ್ದಾರೆ.

ಇಂತಹ ದಂಧೆಗಳ ಹಿಂದಿರುವ ರಾಜಕಾರಣಿಗಳು, ಅಧಿಕಾರಿಗಳನ್ನು ಬಳಸಿಕೊಂಡು ಹೇಗೆ ತಮ್ಮ ಬೇಳೆ ಬೇಯಿಸಿಕೊಳ್ಳುತ್ತಾರೆ ಎಂಬುದನ್ನು ತೋರಿಸಿಕೊಡುವುದರ ಜೊತೆಗೆ ಭ್ರಷ್ಟ ವ್ಯವಸ್ಥೆಗೆ ಕನ್ನಡಿ ಹಿಡಿಯುವ ಪ್ರಯತ್ನವನ್ನೂ ಮಾಡಿದ್ದಾರೆ.

ಬಲಿ ಚಕ್ರವರ್ತಿಯ ಕಥೆಯೊಂದಿಗೆ ಈ ಚಿತ್ರ ಆರಂಭವಾಗುತ್ತದೆ. ಒಬ್ಬಾಕೆ ತಾಯಿ ತನ್ನ ಮಗನಿಗೆ ಬಲಿ ಚಕ್ರವರ್ತಿಯ ಕಥೆ ಹೇಳುತ್ತಿರುತ್ತಾಳೆ. ಕಥೆ ಕೇಳಿದ ಬಳಿಕ ಬಾಲಕ, 'ಅಮ್ಮಾ, ಪ್ರಜೆಗಳಿಗೆ ಉತ್ತಮ ರಾಜನಾಗಿದ್ದರೂ ವಾಮನನು ಬಲಿ ಮಹಾರಾಜನನ್ನು ಯಾಕೆ ಪಾತಾಳಕ್ಕೆ ತಳ್ಳುತ್ತಾನೆ?' ಎಂದು ಪ್ರಶ್ನಿಸುತ್ತಾನೆ. ಚಿತ್ರ ವೀಕ್ಷಿಸಿದ ಬಳಿಕ ನಮ್ಮನ್ನೂ ಇದೇ ಪ್ರಶ್ನೆ ಕಾಡುತ್ತದೆ.

ಮರಳು ದಂಧೆಗೆ ಕಡಿವಾಣ ಹಾಕಲು ಹೊರಟ ಜಿಲ್ಲಾಧಿಕಾರಿಯೊಬ್ಬರು ಇನ್ನೇನು ಈ ದಂಧೆಯ ಹಿಂದಿನ ಕಾಣದ ಕೈಗಳ ಬಳಿಗೆ ತಲುಪುತ್ತಾರೆ ಎನ್ನುವಾಗ ರಾಜಕೀಯ ಒತ್ತಡದಿಂದ ಇನ್ನೊಂದು ಇಲಾಖೆಗೆ ವರ್ಗಾವಣೆಗೊಳ್ಳುತ್ತಾರೆ. ಇಲಾಖೆ ಬದಲಾದರೂ ಅಲ್ಲೂ ಭ್ರಷ್ಟರನ್ನು ಮಟ್ಟ ಹಾಕಲು ಮುಂದಾಗುವ ಅಧಿಕಾರಿ, ರಾಜಕಾರಣಿಗಳ ಒತ್ತಡದಿಂದ ಉಸಿರುಗಟ್ಟುವ ವಾತಾವರಣದಲ್ಲಿ ಕೆಲಸ ಮಾಡಬೇಕಾಗುತ್ತದೆ. ಅವರು ಎದುರಿಸುವ ಸಂಕಷ್ಟಗಳೇ ಈ ಚಿತ್ರದ ಕಥಾಹಂದರ.

ಜಿಲ್ಲಾಧಿಕಾರಿಯ ಪಾತ್ರದಲ್ಲಿ ನಟಿಸಿರುವ ನೀನಾಸಂ ಸತೀಶ್ ಅವರು ಎಂದಿನ ಮ್ಯಾನರಿಸಂಗಿಂತ ತುಂಬಾ ವ್ಯತ್ಯಸ್ತವಾಗಿ ಕಾಣಿಸಿಕೊಂಡಿದ್ದಾರೆ. ಖಡಕ್ ಅಧಿಕಾರಿಯ ಖದರ್‌ನಲ್ಲಿ ಮೋಡಿ ಮಾಡುತ್ತಾರೆ. ನಾಯಕನ ಹೆಂಡತಿಯ ಪಾತ್ರದಲ್ಲಿ ನಟಿ ಸಿರುವ ಸೋನು ಗೌಡ ಅವರ ಪಾತ್ರ ಹೆಸರಿಗಷ್ಟೆ ಎಂಬಂತಿದೆ. ಅಚ್ಯುತ್ ಕುಮಾರ್, ಗಿರಿಜಾ ಲೋಕೇಶ್, ಕಿಶೋರ್ ತಮ್ಮ ಅಭಿನಯದ ಮೂಲಕ ಚಿತ್ರಕ್ಕೆ ಹೆಚ್ಚು ತೂಕ ತಂದುಕೊಟ್ಟಿದ್ದಾರೆ.

ಪೂರ್ಣಚಂದ್ರ ತೇಜಸ್ವಿ ಅವರ ಸಂಗೀತ ಸಂಯೋಜಿಸಿದ್ದಾರೆ. ಐಎಎಸ್ ಅಧಿಕಾರಿ ಡಿ.ಕೆ. ರವಿ ಜೀವನಕಥೆ ಆಧರಿತ ಚಿತ್ರ ಎಂದು ಆಕ್ಷೇಪಿಸಲಾಗಿರುವ ಈ ಚಿತ್ರ ಬಿಡುಗಡೆಗೂ ಮುನ್ನವೇ ವಿವಾದಕ್ಕೂ ಕಾರಣವಾಗಿತ್ತು.

ಚಿತ್ರದ ಮೊದಲರ್ಧದಲ್ಲಿ ಬಿಗು ವಾದ ಕಥಾ ನಿರೂಪಣೆ ಇದ್ದರೆ ದ್ವಿತೀಯಾರ್ಧದಲ್ಲಿ ಕಥೆಯ ಗತಿ ನಿಧಾನವಾಗಿ ಅಲ್ಲಲ್ಲಿ ನೀರಸ ಎನಿ ಸುತ್ತದೆ. ಗಂಭೀರವಾದ ವಿಷಯ ನಿರೂ ಪಣೆಯ ನಡುವೆ ಅಲ್ಲಲ್ಲಿ ಅನಗತ್ಯವಾಗಿ ಕೆಲವು ಹಾಡುಗಳನ್ನು ತುರುಕಿಸಿದಂತೆ ಭಾಸವಾಗುತ್ತದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.