
ನಟ ದೇವರಾಜ್ ಬಹಳ ಕಾಲದ ನಂತರ ನಾಯಕ ನಟರಾಗಿ ಬಣ್ಣ ಹಚ್ಚುತ್ತಿದ್ದಾರೆ. ಅವರ ನಟನೆಯ ಹಾರರ್, ಸಸ್ಪೆನ್ಸ್, ಥ್ರಿಲ್ಲರ್ ಜಾನರ್‌ನ ‘ಚಂದ್ರಗಿರಿ’ ಚಿತ್ರ ಸೆಟ್ಟೇರಲು ಸಜ್ಜಾಗಿದೆ. ರಾಜೀವ್ ಕೃಷ್ಣ ಕಥೆ, ಚಿತ್ರಕಥೆ, ಸಂಭಾಷಣೆ ಬರೆದು ನಿರ್ದೇಶಿಸುತ್ತಿದ್ದಾರೆ.
‘ದೈವ ಮತ್ತು ಆತ್ಮದ ನಡುವಿನ ಹೋರಾಟದ ಕಥೆ ಈ ಚಿತ್ರದಲ್ಲಿದೆ. ಪ್ರತಿ ಅಮಾವಾಸ್ಯೆಯ ದಿನ ಕಾಣಿಸಿಕೊಳ್ಳುವ ಎರಡು ಶವಗಳು ಮತ್ತು ಚಂದ್ರಗಿರಿ ಊರಿನ ಬೀದಿ ಬೀದಿಗಳಲ್ಲಿ ರಕ್ತದ ಕಲೆಗಳನ್ನು ಹುಡುಕಿಕೊಂಡು ಹೋಗುವ ಕಥೆ. ಇತ್ತೀಚೆಗಷ್ಟೇ ಚಿತ್ರದ ಹಾಡುಗಳ ಧ್ವನಿಮುದ್ರಣ ಕಾರ್ಯ ಮುಗಿದಿದ್ದು, ಮೂರು ಹಾಡುಗಳಿಗೆ ಅನಿರುದ್ಧ ಶಾಸ್ತ್ರಿ, ಕಾರುಣ್ಯ ಮತ್ತು ಶ್ರೀಕೃಷ್ಣ ಧ್ವನಿಯಾಗಿದ್ದಾರೆ. ಜ.8ರಿಂದ ಚಿತ್ರೀಕರಣ ಪ್ರಾರಂಭವಾಗಲಿದೆ’ ಎಂದರು ನಿರ್ದೇಶಕ.
ಶಿಲ್ಪಾಶ್ರೀ ಪಿಕ್ಚರ್ಸ್ ಅರ್ಪಿಸಿ, ಸ್ನೇಹಾಲಯಂ ಕ್ರಿಯೇಷನ್ಸ್ ಲಾಂಛನದಲ್ಲಿ ಶಿಲ್ಪಾ ಶ್ರೀನಿವಾಸ್ ಬಂಡವಾಳ ಹೂಡುತ್ತಿದ್ದಾರೆ. ಚಿಕ್ಕಬಳ್ಳಾಪುರ, ಹೊಸಕೋಟೆ ಸುತ್ತಮುತ್ತ ಚಿತ್ರೀಕರಣ ನಡೆಸಲು ತಂಡ ಆಲೋಚಿಸಿದೆ. ಈ ಚಿತ್ರದಲ್ಲಿ ಬಾಹುಬಲಿ ಖ್ಯಾತಿಯ ಕಾಲಕೇಯ ಪ್ರಭಾಕರ್, ಶೋಭರಾಜ್, ಪ್ರಿಯ, ಧನ್ಯಾ ಮುಂತಾದವರು ನಟಿಸುತ್ತಿದ್ದಾರೆ. ಪ್ರಮೋದ್ ಭಾರತೀಯ ಛಾಯಾಚಿತ್ರಗ್ರಹಣ, ಎಂ.ಎಲ್.ರಾಜ ಸಂಗೀತ, ಆರ್. ಕೆ.ಗಾಂಧಿ ಸಾಹಿತ್ಯ, ವಿನಯ್ ಜಿ. ಆಲೂರು ಸಂಕಲನವಿದೆ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.