ADVERTISEMENT

ಮತ್ತೆ ಕಾಡಿದ ‘ಚೆರ್ನೊಬಿಲ್’

ನವೀನ ಕುಮಾರ್ ಜಿ.
Published 20 ಜೂನ್ 2019, 19:30 IST
Last Updated 20 ಜೂನ್ 2019, 19:30 IST
ಚೆರ್ನೊಬಿಲ್‌ ವೆಬ್‌ ಸರಣಿಯ ದೃಶ್ಯ
ಚೆರ್ನೊಬಿಲ್‌ ವೆಬ್‌ ಸರಣಿಯ ದೃಶ್ಯ   

‘ಚೆ ರ್ನೊಬಿಲ್’! ಈ ಹೆಸರು ಕೇಳಿದರೆ ಸಾಕು ಮೂರು ದಶಕಗಳ ಹಿಂದೆ ಸೋವಿಯತ್ ಒಕ್ಕೂಟವನ್ನು ನಡುಗಿಸಿದ್ದ ಭೀಕರ ಅಣು ದುರಂತದ ನೆನಪು ನಮ್ಮನ್ನು ಕಾಡದಿರದು.

ಸಾವಿರಾರು ಜನರ ಬದುಕು ಕಸಿದ, ಕ್ಯಾನ್ಸರ್‌ನಂತಹ ಭೀಕರ ರೋಗಕ್ಕೆ ಅಲ್ಲಿನ ಜನರನ್ನು ಇಂದಿಗೂ ತುತ್ತಾಗಿಸುತ್ತಿರುವ ಈ ಮಾನವ ನಿರ್ಮಿತ ದುರಂತದ ಕುರಿತ ಚರ್ಚೆ ಜಾಗತಿಕ ಮಟ್ಟದಲ್ಲಿ ಮತ್ತೆ ಮುನ್ನೆಲೆಗೆ ಬಂದಿದೆ. ಇದಕ್ಕೆ ಕಾರಣ ಎಚ್‌ಬಿಒ ವಾಹಿನಿ ನಿರ್ಮಿಸಿರುವ ‘ಚೆರ್ನೊಬಿಲ್’ ಕಿರು ವೆಬ್ ಸರಣಿ. ಡಿಜಿಟಲ್ ಮಾಧ್ಯಮದಲ್ಲಿ ಮಾತ್ರ ಪ್ರಸಾರವಾಗಿರುವ ಈ ಸರಣಿ ಹಾಟ್‌ಸ್ಟಾರ್‌ ಒಟಿಟಿ ವೇದಿಕೆ ಮೂಲಕ ಭಾರತದ ಪ್ರೇಕ್ಷಕರಿಗೂ ಲಭ್ಯವಾಗಿದೆ.

ಎಚ್‌ಬಿಒ ನಿರ್ಮಿಸಿರುವ, ಜಾಗತಿಕ ಮಟ್ಟದಲ್ಲಿ ಭಾರಿ ಗಮನ ಸೆಳೆದ ‘ಗೇಮ್ ಆಫ್ ಥ್ರೋನ್ಸ್’ಗಿಂತಲೂ ‘ಚೆರ್ನೊಬಿಲ್’ ಸರಣಿ ಹೆಚ್ಚು ಜನಪ್ರಿಯವಾಗಿದೆ ಎಂಬ ಮಾತುಗಳು ಇವೆ. ಐದು ಭಾಗಗಳಲ್ಲಿ ಪ್ರಸಾರವಾಗಿರುವ ಈ ಸರಣಿಯ ಒಂದು ಗಂಟೆ ಅವಧಿಯ ಪ್ರತಿ ಕಂತೂ ಅದ್ಭುತವಾಗಿ ಮೂಡಿ ಬಂದಿದೆ.

ADVERTISEMENT

ಚೆರ್ನೊಬಿಲ್ ದುರಂತದ ಬಗ್ಗೆ ಇದುವರೆಗೆ ಜಗತ್ತು ತಿಳಿದಿದ್ದ ಸಂಗತಿಗಳಿಗಿಂತಲೂ ಭಿನ್ನವಾದ ಆಯಾಮವೊಂದನ್ನು ಈ ವೆಬ್‌ ಸರಣಿಯ ಮೂಲಕ ನಿರ್ದೇಶಕ ಜೊಹಾನ್ ರೆಂಕ್ ತೆರೆದಿಟ್ಟಿದ್ದಾರೆ.
ಈ ಮಹಾ ದುರಂತದ ಬಗ್ಗೆ ಅಂದಿನ ಸೋವಿಯತ್‌ ಒಕ್ಕೂಟ ಸುಳ್ಳಿನ ಕಂತೆಗಳನ್ನೇ ಹೆಣೆದಿತ್ತು ಎಂಬುದನ್ನೂ ತೋರಿಸಿಕೊಟ್ಟಿದ್ದಾರೆ.

ಪ್ರತಿ ಕಂತಿನ ಕೊನೆಯಲ್ಲೂ ಕುತೂಹಲಕರ ಅಂಶವೊಂದನ್ನು ಬಾಕಿ ಉಳಿಸುವ ಮೂಲಕ ಪ್ರೇಕ್ಷಕರು ಮುಂದಿನ ಭಾಗ ವೀಕ್ಷಿಸಲು ಕಾತರದಿಂದ ಕಾಯುವಂತೆ ಮಾಡುವಲ್ಲಿ ನಿರ್ದೇಶಕರು ಯಶಸ್ವಿಯಾಗಿದ್ದಾರೆ. ಸರಣಿಯ ಮೊದಲ ಭಾಗವು ವಿಜ್ಞಾನಿಯೊಬ್ಬರ ಆತ್ಮಹತ್ಯೆಯ ದೃಶ್ಯದ ಮೂಲಕ ಆರಂಭಗೊಳ್ಳುತ್ತದೆ. ಅಲ್ಲಿಂದ ಫ್ಲ್ಯಾಶ್ ಬ್ಯಾಕ್ ಕಥನತಂತ್ರದ ಮೂಲಕ ಕಥೆ ಸಾಗುತ್ತದೆ.

ಅಣುಸ್ಥಾವರದಲ್ಲಿ ತೊಂದರೆ ಕಾಣಿಸಿಕೊಂಡಾಗ ಅದನ್ನು ಸರಿಪಡಿಸಲು ಯತ್ನಿಸಿ ಜೀವ ಕಳೆದುಕೊಳ್ಳುವ ಸಿಬ್ಬಂದಿ ಮನಸ್ಸಿಗೆ ನಾಟುತ್ತಾರೆ‌. ಕ್ಷಣದಿಂದ ಕ್ಷಣಕ್ಕೆ ದುರಂತದ ತೀವ್ರತೆ ಹೆಚ್ಚಾಗುತ್ತಿದ್ದರೂ ಅದನ್ನು ಗಂಭೀರವಾಗಿ ತೆಗೆದುಕೊಳ್ಳದೆ ಸುಳ್ಳುಗಳ ಮೂಲಕ ಘಟನೆಯನ್ನು ಮರೆಮಾಚಲು ಯತ್ನಿಸುವ ಆಡಳಿತ ವರ್ಗದ ನಡೆಯನ್ನು ಕಣ್ಣಿಗೆ ರಾಚುವಂತೆ ಕಟ್ಟಿಕೊಡಲಾಗಿದೆ.

ದುರಂತದ ತೀವ್ರತೆಯ ಅರಿವಿಲ್ಲದೆ ಸ್ಥಾವರದ ಬೆಂಕಿ ನಂದಿಸಲು ಪ್ರಯತ್ನಿಸಿ ತಮ್ಮ ಪ್ರಾಣಕ್ಕೆ ಸಂಚಕಾರ ತಂದುಕೊಳ್ಳುವ ಅಗ್ನಿಶಾಮಕದ ಸಿಬ್ಬಂದಿ, ಮುಂಬರುವ ಮಹಾದುರಂತದ ಪರಿವೆಯೇ ಇಲ್ಲದೆ ತಮ್ಮದೇ ಲೋಕದಲ್ಲಿ ಮುಳುಗಿರುವ ಪಕ್ಕದ ನಗರದ ಜನ, ಮುಂದೆ ಸೇನೆಯು ಇಡೀ ನಗರದ ಜನರನ್ನು ಉಟ್ಟ ಬಟ್ಟೆಯಲ್ಲೇ ಸ್ಥಳಾಂತರಿಸುವ ದೃಶ್ಯಗಳು ಮನ ಕಲಕುವಂತೆ ಮೂಡಿ ಬಂದಿವೆ.

ಜ್ಯಾರೆಡ್ ಹ್ಯಾರಿಸ್, ಸ್ಟೆಲ್ಲನ್ ಸ್ಕಾರ್ಸ್ಗಾರ್ಡ್, ಪಾಲ್ ರಿಟ್ಟರ್, ಜೆಸ್ಸಿ ಬಕ್ಲಿ, ಎಮಿಲಿ ವಾಟ್ಸನ್ ಸರಣಿಯ ಮುಖ್ಯಭೂಮಿಕೆಯಲ್ಲಿ ನಟಿಸಿದ್ದಾರೆ.

1986ರಲ್ಲಿ ಸೋವಿಯತ್ ಒಕ್ಕೂಟದ ಉಕ್ರೇನ್‌ನಲ್ಲಿನ ಚೆರ್ನೊಬಿಲ್ ಅಣುಸ್ಥಾವರದ ನಾಲ್ಕನೇ ಘಟಕದಲ್ಲಿ ಸ್ಫೋಟ ಸಂಭವಿಸಿತ್ತು. ಇದು ಹಿರೋಶಿಮಾದಲ್ಲಿ ನಡೆದ ಅಣು ಬಾಂಬ್ ಸ್ಫೋಟಕ್ಕಿಂತಲೂ ಹಲವು ಪಟ್ಟು ದೊಡ್ಡದು ಎಂದು ವಿಜ್ಞಾನಿಗಳು ಅಭಿಪ್ರಾಯ ವ್ಯಕ್ತಪಡಿಸಿದ್ದರು. ಅಣು ಸ್ಥಾವರದಿಂದ ಹೊರಹೊಮ್ಮಿದ್ದ ಹೊಗೆ ನೂರಾರು ಕಿ.ಮೀ.ದೂರದ ವರೆಗೂ ಅಣುವಿಕಿರಣ ಸೂಸಿತ್ತು.

ಈ ಅಣುವಿದ್ಯುತ್ ಸ್ಥಾವರವನ್ನು ಸೋವಿಯತ್ ಒಕ್ಕೂಟವು ತನ್ನದೇ ತಂತ್ರಜ್ಞಾನದ ಮೂಲಕ ಅಭಿವೃದ್ಧಿ ಪಡಿಸಿತ್ತು. ಇದು ಲೈಟ್ ವಾಟರ್ ಗ್ರಾಫೈಟ್ ಮಾಡರೇಟೆಡ್ ವಿಭಾಗಕ್ಕೆ ಸೇರುವ ಅಣು ಸ್ಥಾವರವಾಗಿತ್ತು. ಮನುಷ್ಯರಷ್ಟೇ ಅಲ್ಲ ಸಮೀಪದ ಕಾಡಿನ ಪ್ರಾಣಿಗಳು ಕೂಡ ದುರ್ಘಟನೆಯ ಬಳಿಕ ಅಣು ವಿಕಿರಣದ ಭೀಕರತೆಗೆ ತುತ್ತಾಗಿವೆ. ಇವೆಲ್ಲವನ್ನೂ ಈ ಸರಣಿಯಲ್ಲಿ ಮನೋಜ್ಞವಾಗಿ ಕಟ್ಟಿಕೊಡಲಾಗಿದೆ. ಅಣು ವಿದ್ಯುತ್ ಸ್ಥಾವರಗಳಿಂದಾಗುವ ಪ್ರಯೋಜನಗಳ ಜೊತೆಗೆ ಅದರಿಂದ ಸಂಭವಿಸಬಹುದಾದ ದುರಂತದ ತೀವ್ರತೆಯನ್ನೂ ಈ ಸರಣಿಯಲ್ಲಿ ಚಿತ್ರಿಸಲಾಗಿದೆ.

ವೆಬ್‌ ಸರಣಿಯ ಕೊನೆಯ ಭಾಗ ಅವಘಡದ ಹಿಂದಿನ ನೈಜ ಕಾರಣಗಳ ಬಗ್ಗೆ ಬೆರಳು ತೋರುತ್ತದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.