ನವದೆಹಲಿ: ಸಾಂಸ್ಕೃತಿಕ ಪ್ರಭಾವ ಮತ್ತು ಸಾರ್ವಜನಿಕ ಸೇವೆಗೆ ನೀಡಿದ ಕೊಡುಗೆಗಾಗಿ ತೆಲುಗು ಸಿನಿಮಾ ತಾರೆ, ಮೆಗಾಸ್ಟಾರ್ ಚಿರಂಜೀವಿಗೆ ಬ್ರಿಟನ್‌ನ ಹೌಸ್ ಆಫ್ ಕಾಮನ್ಸ್‌ನಲ್ಲಿ ಜೀವಮಾನ ಸಾಧನೆ ಪ್ರಶಸ್ತಿಯನ್ನು ನೀಡಿ ಗೌರವಿಸಲಾಗಿದೆ.
ಲಂಡನ್ ಮೂಲದ ಚಿಂತಕರ ಚಾವಡಿ ಬ್ರಿಡ್ಜ್ ಇಂಡಿಯಾ ಈ ಪ್ರಶಸ್ತಿ ನೀಡಿ ಗೌರವಿಸಿದೆ.
ತೆಲುಗು ಚಿತ್ರರಂಗದಲ್ಲಿ ತಮ್ಮ ನೃತ್ಯ ಮತ್ತು ಖಡಕ್ ಮ್ಯಾನರಿಸಂ ಮೂಲಕ ಸಾಕಷ್ಟು ಹಿಟ್ ಚಿತ್ರಗಳನ್ನು ನೀಡಿರುವ ಚಿರಂಜೀವಿ ನಿನ್ನೆ ರಾತ್ರಿ ಈ ಪ್ರಶಸ್ತಿ ಸ್ವೀಕರಿಸಿದ್ದಾರೆ.
ಈ ಕಾರ್ಯಕ್ರಮವನ್ನು ಬ್ರಿಟಿಷ್-ಭಾರತೀಯ ಸಂಸತ್ ಸದಸ್ಯ ನವೇಂದ್ರು ಮಿಶ್ರಾ ಆಯೋಜಿಸಿದ್ದರು.
‘ನಿನ್ನೆ ರಾತ್ರಿ, ಬ್ರಿಡ್ಜ್ ಇಂಡಿಯಾ ತನ್ನ ಮೊದಲ ಜೀವಮಾನ ಸಾಧನೆ ಪ್ರಶಸ್ತಿಯನ್ನು ಮೆಗಾಸ್ಟಾರ್ ಚಿರಂಜೀವಿ ಅವರಿಗೆ ಹೌಸ್ ಆಫ್ ಕಾಮನ್ಸ್‌ನಲ್ಲಿ ಪ್ರದಾನ ಮಾಡಲಾಯಿತು. ಸಂಸದರು, ರಾಜತಾಂತ್ರಿಕರು ಮತ್ತು ಭಾರತೀಯ ಸಮುದಾಯದ ನಾಯಕರು ಭಾಗವಹಿಸಿದ್ದರು’ಎಂದು ಬ್ರಿಡ್ಜ್ ಇಂಡಿಯಾ ತನ್ನ ಅಧಿಕೃತ ಎಕ್ಸ್ ಪುಟದಲ್ಲಿ ಬರೆದುಕೊಂಡಿದೆ.
ಈ ಗೌರವ ನೀಡಿದ್ದಕ್ಕಾಗಿ ಚಿರಂಜೀವಿ. ಚಿಂತಕರ ಚಾವಡಿ ಮತ್ತು ಹೌಸ್ ಆಫ್ ಕಾಮನ್ಸ್‌ಗೆ ಧನ್ಯವಾದ ಅರ್ಪಿಸಿದ್ದಾರೆ.
‘ಬ್ರಿಟನ್ ಪಾರ್ಲಿಮೆಂಟ್‌ನ ಹೌಸ್ ಆಫ್ ಕಾಮನ್ಸ್‌ನಲ್ಲಿ ಹಲವಾರು ಗೌರವಾನ್ವಿತ ಸದಸ್ಯರು, ಸಚಿವರು ಮತ್ತು ಅಧೀನ ಕಾರ್ಯದರ್ಶಿಗಳು, ರಾಜತಾಂತ್ರಿಕರಿಂದ ಸಿಕ್ಕ ಗೌರವ ಮತ್ತು ಟೀಮ್ ಬ್ರಿಡ್ಜ್ ಇಂಡಿಯಾದಿಂದ ಜೀವಮಾನ ಸಾಧನೆ ಪ್ರಶಸ್ತಿಯಿಂದ ಹೃದಯ ತುಂಬಿ ಬಂದಿದೆ’ಎಂದು ಹೇಳಿದ್ದಾರೆ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.