ADVERTISEMENT

10 ಕೋಟಿ ಬಾರಿ ವೀಕ್ಷಣೆ: ಕನ್ನಡದಲ್ಲಿ ದಾಖಲೆ ಬರೆದ ‘ಹೇ ಹುಡುಗಿ ಚುಟು ಚುಟು' ಹಾಡು

ಶರಣ್‌ ನಟನೆಯ ರ‍್ಯಾಂಬೊ 2 ಸಿನಿಮಾ

​ಪ್ರಜಾವಾಣಿ ವಾರ್ತೆ
Published 13 ಫೆಬ್ರುವರಿ 2020, 12:02 IST
Last Updated 13 ಫೆಬ್ರುವರಿ 2020, 12:02 IST
   

ಗಾಂಧಿನಗರದಲ್ಲಿ ಸಿನಿಮಾಗಳು ಐವತ್ತು ದಿನಗಳು ಅಥವಾ ಶತದಿನಗಳನ್ನು ಪೂರೈಸಿದಾಗ ಸಂಭ್ರಮಾಚರಣೆ ಮಾಡುವ ಕಾಲವೊಂದಿತ್ತು. ಈಗ ಆ ಚಿತ್ರಣ ಸಂಪೂರ್ಣ ಅದಲುಬದಲಾಗಿದೆ. ಇತ್ತೀಚೆಗೆ ಚಿತ್ರವೊಂದು ಒಂದು ವಾರ ಅಥವಾ ಇಪ್ಪತ್ತೈದು ದಿನಗಳನ್ನು ಪೂರೈಸಿದಾಗಲೂ ಚಿತ್ರತಂಡಗಳು ಆನಂದಿಸುವುದೇ ಹೆಚ್ಚು. ಆದರೆ, ಸಿನಿಮಾದ ಹಾಡಿನ ಯಶಸ್ಸಿಗಾಗಿ ಇಂತಹ ಕಾರ್ಯಕ್ರಮ ಹಮ್ಮಿಕೊಳ್ಳುವುದು ವಿರಳ. ಆನಂದ್‌ ಆಡಿಯೊ ಸಂಸ್ಥೆಯು ‘ರ‍್ಯಾಂಬೊ 2’ ಚಿತ್ರದ ‘ಚುಟು ಚುಟು...’ ಹಾಡಿನ ಯಶಸ್ಸಿಗಾಗಿ ಅರ್ಥಪೂರ್ಣವಾದ ಸಂಭ್ರಮ ಕಾರ್ಯಕ್ರಮವನ್ನು ಹಮ್ಮಿಕೊಂಡಿತ್ತು.

ಎರಡು ವರ್ಷದ ಹಿಂದೆ ಶರಣ್‌ ಮತ್ತು ಆಶಿಕಾ ರಂಗನಾಥ್ ಅವರ ಕಾಂಬಿನೇಷನ್‌ನಡಿ ಈ ಸಿನಿಮಾ ತೆರೆಕಂಡಿತ್ತು. ಅನಿಲ್‌ಕುಮಾರ್ ಇದರ ನಿರ್ದೇಶಕರು. ಈ ಚಿತ್ರದಲ್ಲಿ ಅರ್ಜುನ್‌ ಜನ್ಯ ಸಂಗೀತ ನೀಡಿದ್ದ ಶಿವು ಬೇರ್ಗಿ ಬರೆದ ‘ಚುಟು ಚುಟು...’ ಹಾಡನ್ನು ಇಲ್ಲಿಯವರೆಗೂ 10 ಕೋಟಿ ಬಾರಿವೀಕ್ಷಿಸಿದ್ದಾರೆ. ಇದು ಕನ್ನಡದ ಮಟ್ಟಿಗೆ ಹೊಸ ದಾಖಲೆ. ಅತಿಹೆಚ್ಚು ಜನರು ವೀಕ್ಷಿಸಿದ ದಕ್ಷಿಣ ಭಾರತದ ಸಿನಿಮಾ ಹಾಡುಗಳ ಪೈಕಿ 25 ಹಾಡುಗಳ ಪಟ್ಟಿಯಲ್ಲಿಯೂ ಈ ಸಾಂಗ್‌ ಇದೆಯಂತೆ.

ಭೂಷಣ್‌ ನೃತ್ಯ ನಿರ್ದೇಶಿಸಿದ್ದ ಈ ಹಾಡನ್ನು ಕ್ಯಾಮೆರಾದಲ್ಲಿ ಸೆರೆ ಹಿಡಿದಿದ್ದು ಸುಧಾಕರ್‌ ಎಸ್‌. ರಾಜ್‌. ಮೋಹನ್‌ ಬಿ. ಕೆರೆ ಅವರು ಕಲಾ ನಿರ್ದೇಶನ ಮಾಡಿದ್ದರು. ಈ ಸಾಂಗ್‌ನಲ್ಲಿ ಜನಪದ ಹಾಡಿನ ಸೊಗಡಿದೆ. ಉತ್ತರ ಕರ್ನಾಟಕದ ಸ್ಟೈಲ್‌ನಲ್ಲಿ ಶಮಿತಾ ಮಲ್ನಾಡ್‌ ಮತ್ತು ರವೀಂದ್ರ ಸೊರಗಾವಿ ಇದಕ್ಕೆ ಧ್ವನಿಯಾಗಿದ್ದರು. ಯುವಜನರಲ್ಲಿ ಈ ಹಾಡು ಹೊಸ ಹುರುಪು ತುಂಬಿದ್ದು ಗುಟ್ಟೇನಲ್ಲ. ಶಾಲಾ, ಕಾಲೇಜುಗಳ ಸಾಂಸ್ಕೃತಿಕ ಕಾರ್ಯಕ್ರಮಗಳಲ್ಲಿ ಇದು ಹೊಸ ಟ್ರೆಂಡ್‌ ಸೃಷ್ಟಿಸಿತ್ತು.

ADVERTISEMENT

ಆನಂದ್‌ ಆಡಿಯೊ ಸಂಸ್ಥೆಯ ಆನಂದ್‌ ಮತ್ತು ಶ್ಯಾಮ್, ‘ಸಂಸ್ಥೆಗೆ ಇಪ್ಪತ್ತು ವರ್ಷ ತುಂಬಿದೆ. ಸಂಸ್ಥೆಯಿಂದ ಒಳ್ಳೆಯ ಹಾಡುಗಳು ಮೂಡಿಬರುತ್ತಿವೆ’ ಎಂದು ಖುಷಿ ಹಂಚಿಕೊಂಡರು.

ನಟ ಶರಣ್‌ ಹಾಡಿನ ಚಿತ್ರೀಕರಣದ ವೇಳೆ ಅನುಭವಿಸಿದ ಸಂಕಷ್ಟಗಳನ್ನು ಮೆಲುಕು ಹಾಕಿದರು. ‘ಈ ಹಾಡಿಗೆ ಸಾಕಷ್ಟು ಶ್ರಮಪಟ್ಟಿದ್ದೇನೆ. ನೃತ್ಯ ಮಾಡುವಾಗ ಮಂಡಿಚಿಪ್ಪಿಗೆ ಗಾಯವಾಗಿತ್ತು. ಎಲ್ಲಾ ನೋವನ್ನೂ ನುಂಗಿಕೊಂಡು ಚಿತ್ರೀಕರಣದಲ್ಲಿ ಭಾಗವಹಿಸಿದೆ. ಹಾಡಿನ ಯಶಸ್ಸಿನ ಹಿಂದೆ ಚಿತ್ರತಂಡದ ಎಲ್ಲರ ಶ್ರಮವಿದೆ’ ಎಂದು ನೆನಪಿಗೆ ಜಾರಿದರು.

ನಟಿ ಆಶಿಕಾ ರಂಗನಾಥ್‌ ಈ ಹಾಡಿಗೆ ತೂಕ ಇಳಿಸಿಕೊಂಡಿದ್ದರಂತೆ. ‘ಕನ್ನಡದಲ್ಲಿಯೂ ಒಳ್ಳೆಯ ಹಾಡುಗಳು ಮೂಡಿಬರಬೇಕು ಎಂಬುದು ಎಲ್ಲರ ಆಸೆ. ಅದಕ್ಕೆ ತಕ್ಕಂತೆ ಸಿದ್ಧತೆ ನಡೆಸಿಯೇ ಇದರ ಶೂಟಿಂಗ್‌ ನಡೆಸಲಾಯಿತು’ ಎಂದರು.

ನಟ ಶ್ರೀಮುರಳಿ ನೆನಪಿನ ಕಾಣಿಕೆ ವಿತರಿಸಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.