ADVERTISEMENT

ಕೊರೊನೋತ್ತರ ಸಿನಿಮಾ!

​ಪ್ರಜಾವಾಣಿ ವಾರ್ತೆ
Published 17 ಏಪ್ರಿಲ್ 2020, 0:51 IST
Last Updated 17 ಏಪ್ರಿಲ್ 2020, 0:51 IST
ಅನುರಾಗ್‌ ಬಸು
ಅನುರಾಗ್‌ ಬಸು   

ಕೊರೊನಾ ವೈರಾಣು, ಸಿನಿಮಾಗಳ ಬಿಡುಗಡೆಯ ದಿನಾಂಕ ಮುಂದೂಡಿರುವುದು ಮಾತ್ರವೇ ಅಲ್ಲ. ಅದು ಸಿನಿಲೋಕ ಕಥೆ ಹೇಳುವ ರೀತಿಯ ಮೇಲೂ ಪರಿಣಾಮ ಬೀರಲಿದೆ ಎನ್ನುತ್ತಾರೆ ನಟ, ನಿರ್ದೇಶಕ ಅನುರಾಗ್ ಬಸು.

‘ಸಿನಿಮಾ ಉದ್ಯಮವನ್ನು ಇನ್ನು ಮುಂದೆ ಕೊರೊನಾಪೂರ್ವ ಹಾಗೂ ಕೊರೊನೋತ್ತರ ಎಂದು ವಿಭಜಿಸಿ ನೋಡಬೇಕಾಗುತ್ತದೆ. ಸಿನಿಮಾ ಮೂಲಕ ಕಥೆ ಹೇಳುವ ವಿಧಾನದಲ್ಲಿ ದೊಡ್ಡ ಬದಲಾವಣೆ ಆಗಲಿದೆ. ವಿಶ್ವವು ಇನ್ನೊಂದು ದೊಡ್ಡ ಬಿಕ್ಕಟ್ಟನ್ನು ಎದುರಿಸುವವರೆಗೆ, ಕೊರೊನಾ ವೈರಾಣುವಿನ ಕಥೆಯು ಹತ್ತು ಹಲವು ಸಿನಿಮಾಗಳಲ್ಲಿ ಕಾಣಿಸಿಕೊಳ್ಳಲಿದೆ ಎಂಬುದು ನನ್ನ ನಂಬಿಕೆ’ ಎನ್ನುತ್ತಾರೆ ಅನುರಾಗ್.

ಲಾಕ್‌ಡೌನ್‌ ತೆರವಾದ ನಂತರ ಜನ ಸಂಪೂರ್ಣ ಬೇರೆಯದೇ ಆದ ವ್ಯಕ್ತಿತ್ವ ರೂಪಿಸಿಕೊಳ್ಳಲಿದ್ದಾರೆ. ಇದು ಅವರು ಯಾವ ಬಗೆಯ ಸಿನಿಮಾಗಳನ್ನು ನೋಡುತ್ತಾರೆ ಎಂಬುದರ ಮೇಲೆಯೂ ಪರಿಣಾಮ ಬೀರಲಿದೆ. ಕೆಲವರು ತಮ್ಮ ಜೀವನವನ್ನು ನೋಡುವ ಕ್ರಮವೇ ಬದಲಾಗಿಬಿಟ್ಟಿದೆ. ಇದು ಅವರ ಇಷ್ಟ–ಕಷ್ಟಗಳ ಮೇಲೆ ಪ್ರಭಾವ ಬೀರಲಿದೆ ಎನ್ನುವುದು ಅನುರಾಗ್ ನೀಡುವ ವಿವರಣೆ.

ADVERTISEMENT

‘ಕೊರೊನೋತ್ತರ ಸಂದರ್ಭದಲ್ಲಿ ಜನ ಅರ್ಥಹೀನವಾದ ಯಾವುದನ್ನೂ ವೀಕ್ಷಿಸುವುದಿಲ್ಲ. ಹಾಗಾಗಿ, ಸಿನಿಮಾ ಮಾಡುವವರು ಹೆಚ್ಚು ಅರ್ಥಪೂರ್ಣ ಹೂರಣವನ್ನು ವೀಕ್ಷಕರಿಗೆ ನೀಡಬೇಕಾಗುತ್ತದೆ. ಆದರೆ, ಇವುಗಳೆಲ್ಲ ನನ್ನ ಊಹೆ ಮಾತ್ರ’ ಎಂದು ಅವರು ಹೇಳಿದ್ದಾರೆ. ಲಾಕ್‌ಡೌನ್‌ ತೆರವಾಗಿ, ಸಿನಿಮಾ ಮಂದಿರಗಳ ಬಾಗಿಲು ತೆರೆದ ನಂತರ ಜನ ಸಿನಿಮಾ ನೋಡಲು ನಿಜಕ್ಕೂ ಅಲ್ಲಿಗೆ ಬರುತ್ತಾರೆಯೇ ಎಂಬ ಅನುಮಾನ ಅನುರಾಗ್ ಅವರಲ್ಲಿ ಇದೆ.

ಅನುರಾಗ್ ನಿರ್ದೇಶನದ ಮುಂದಿನ ಸಿನಿಮಾ ‘ಲುಡೊ’ ಹಾಸ್ಯ ಪ್ರಧಾನ ಕಥೆ ಹೊಂದಿದೆ. ಎಲ್ಲವೂ ಅಂದುಕೊಂಡಂತೆ ಆಗಿದ್ದಿದ್ದರೆ ಇದು ಏಪ್ರಿಲ್ 24ರಂದು ತೆರೆಗೆ ಬರುತ್ತಿತ್ತು. ಆದರೆ ಈಗ ಈ ಸಿನಿಮಾ ಯಾವಾಗ ತೆರೆಗೆ ಬರುತ್ತದೆ ಎಂಬುದು ಖಚಿತವಾಗಿಲ್ಲ. ಅಭಿಷೇಕ್ ಬಚ್ಚನ್, ರಾಜ್‌ಕುಮಾರ್ ರಾವ್, ಫಾತಿಮಾ ಸನಾ ಶೇಖ್, ಆದಿತ್ಯ ರಾಯ್ ಕಪೂರ್ ಈ ಚಿತ್ರದ ತಾರಾಗಣದಲ್ಲಿ ಇದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.