ADVERTISEMENT

ನಾಡಹಬ್ಬದಿಂದ ಮತ್ತೆ ಸಿನಿಮಾ ಸಂಭ್ರಮ

ಐದು ತಿಂಗಳ ಬಳಿಕ ಚಿತ್ರಮಂದಿರಗಳಲ್ಲಿ ಶೇ 100ರಷ್ಟು ಆಸನ ಭರ್ತಿಗೆ ಅವಕಾಶ

​ಪ್ರಜಾವಾಣಿ ವಾರ್ತೆ
Published 27 ಸೆಪ್ಟೆಂಬರ್ 2021, 18:38 IST
Last Updated 27 ಸೆಪ್ಟೆಂಬರ್ 2021, 18:38 IST
   

ಬೆಂಗಳೂರು: ಸುಮಾರು ಐದು ತಿಂಗಳ ಬಳಿಕ ರಾಜ್ಯದಾದ್ಯಂತ ಚಿತ್ರಮಂದಿರಗಳಲ್ಲಿ ಶಿಳ್ಳೆ, ಚಪ್ಪಾಳೆಗಳ ಸದ್ದು ಮತ್ತೆ ಪ್ರತಿಧ್ವನಿಸಲಿದೆ. ಚಿತ್ರಮಂದಿರಗಳಲ್ಲಿ ಶೇ 100ರಷ್ಟು ಆಸನಗಳ ಭರ್ತಿಗೆ ಸರ್ಕಾರ ಅವಕಾಶ ಕಲ್ಪಿಸಿರುವ ಬೆನ್ನಲ್ಲೇ ಸಾಲುಸಾಲು ಚಿತ್ರಗಳು ತಮ್ಮ ಬಿಡುಗಡೆ ದಿನಾಂಕವನ್ನು ಘೋಷಿಸಿವೆ. ಹೀಗಾಗಿ ಈ ಬಾರಿಯ ನಾಡಹಬ್ಬ ರಾಜ್ಯದ ಜನತೆಗೆ ಸಿನಿಮಾ ಸಂಭ್ರಮವನ್ನೂ ಹೊತ್ತುತರಲಿದೆ.

ನಟ ದುನಿಯಾ ವಿಜಯ್‌ ನಟಿಸಿ ನಿರ್ದೇಶಿಸಿರುವ ‘ಸಲಗ’ ಚಿತ್ರ ಅ.14ರಂದು ಬೆಳ್ಳಿತೆರೆಗೆ ಲಗ್ಗೆ ಇಡಲಿದೆ. ಅದೇ ದಿನ ನಟ ಸುದೀಪ್‌ ನಟನೆಯ ‘ಕೋಟಿಗೊಬ್ಬ–3’ ಸಿನಿಮಾವೂ ತೆರೆಕಾಣಲಿದೆ. ಚಿತ್ರಕ್ಕೆ ಇನ್ನಷ್ಟೇ ಸೆನ್ಸಾರ್‌ ಆಗಬೇಕಿರುವ ಕಾರಣ ಚಿತ್ರತಂಡವು ಅಧಿಕೃತವಾಗಿ ಬಿಡುಗಡೆ ದಿನಾಂಕವನ್ನು ಇನ್ನಷ್ಟೇ ಘೋಷಿಸಬೇಕಾಗಿದೆ. ಇದಾದ ಎರಡು ವಾರದಲ್ಲಿನಟ ಶಿವರಾಜ್‌ಕುಮಾರ್‌ ನಟನೆಯ, ಎ.ಹರ್ಷ ನಿರ್ದೇಶನದ ‘ಭಜರಂಗಿ–2’ ಅ.29ರಂದು ತೆರೆಕಾಣಲಿದೆ. ಹೀಗೆ ಸಾಲುಸಾಲು ಬಿಗ್‌ಬಜೆಟ್‌ ಸಿನಿಮಾ ಸಿನಿರಸಿಕರ ಮುಂದೆ ಬರಲು ಸಜ್ಜಾಗಿದೆ.

ಜೊತೆಗೆ ಅ.8ಕ್ಕೆ ಸೂರಜ್‌ ಗೌಡ ಹಾಗೂ ಡಾ.ರಾಜ್‌ಕುಮಾರ್‌ ಅವರ ಮೊಮ್ಮಗಳಾದ ಧನ್ಯಾ ರಾಮ್‌ಕುಮಾರ್‌ ನಟನೆಯ ಮೊದಲ ಚಿತ್ರ ‘ನಿನ್ನ ಸನಿಹಕೆ’ ಬಿಡುಗಡೆಯಾಗಲಿದೆ.ಅ.15ರಂದು ಡಾರ್ಲಿಂಗ್‌ ಕೃಷ್ಣ ಹಾಗೂ ಭಾವನಾ ನಟನೆಯ srikrishna@gmail.com ಸಿನಿಮಾ ಕನ್ನಡ ಹಾಗೂ ಮಲಯಾಳಂನಲ್ಲಿ ತೆರೆಕಾಣಲಿದೆ.

ADVERTISEMENT

ಬಿಗ್‌ಬಜೆಟ್‌ ಸಿನಿಮಾಗಳನ್ನೂ ಎರಡೆರಡು ವಾರ ಅಂತರದಲ್ಲಿ ಬಿಡುಗಡೆ ಮಾಡಲು ಆಯಾ ಸಿನಿಮಾದ ನಿರ್ಮಾಪಕರು ಒಟ್ಟಿಗೇ ಕುಳಿತು ಚರ್ಚಿಸಿ ನಿರ್ಧರಿಸಿದ್ದರು. ಇದರಂತೆ ಅ.1ರಂದು ‘ಸಲಗ’, ಅ.14ಕ್ಕೆ ‘ಕೋಟಿಗೊಬ್ಬ–3’ ಹಾಗೂ ಅ.29ಕ್ಕೆ ‘ಭಜರಂಗಿ–2’ ಬಿಡುಗಡೆಯಾಗಬೇಕಿತ್ತು. ಆದರೆ ಸರ್ಕಾರದ ಆದೇಶ ವಿಳಂಬವಾಗಿರುವ ಕಾರಣ, ಪ್ರಚಾರಕ್ಕೆ ಇನ್ನಷ್ಟು ಸಮಯ ಬೇಕೆಂದು ಸಲಗ ಚಿತ್ರದ ನಿರ್ಮಾಪಕ ಕೆ.ಪಿ.ಶ್ರೀಕಾಂತ್‌ ಅವರು ಚಿತ್ರವನ್ನು ಅ.14ಕ್ಕೆ ಮುಂದೂಡಿದ್ದಾರೆ. ‘ಅ.14ಕ್ಕೆ ‘ಸಲಗ’ಕ್ಕೆ ಅವಕಾಶ ನೀಡಿ, ಅ.29ರಂದು ಕೋಟಿಗೊಬ್ಬ–3 ಬಿಡುಗಡೆ ಮಾಡಿದರೆ, ಜಯಣ್ಣ ಅವರೂ ಎರಡು ವಾರ ಮುಂದೂಡಬಹುದು ಎನ್ನುವ ಆಶಾಭಾವನೆಯಲ್ಲಿ ನಾವಿದ್ದೆವು. ಆದರೆ ಜಯಣ್ಣ ಒಪ್ಪಲಿಲ್ಲ. ಅಲ್ಲಿಗೆ ಮಾತುಕತೆ ಮುಗಿಯಿತು. ಹೀಗಾಗಿ ಅನಿವಾರ್ಯವಾಗಿ ಎರಡು ಚಿತ್ರಗಳು ಒಂದೇ ದಿನ ಬಿಡುಗಡೆ ಆಗಲಿವೆ’ ಎಂದಿದ್ದಾರೆ ನಿರ್ಮಾಪಕ ಸೂರಪ್ಪ ಬಾಬು.

ಇಬ್ಬರು ಸ್ಟಾರ್‌ ನಟರ ಚಿತ್ರ ಒಂದೇ ದಿನದಂದು ಬಿಡುಗಡೆಯಾಗಲಿದೆ ಎನ್ನುವ ಸುದ್ದಿ ಹರಿದಾಡಿದ ಬೆನ್ನಲ್ಲೇ ಸಾಮಾಜಿಕ ಜಾಲತಾಣದಲ್ಲಿ ‘ಸ್ಟಾರ್‌ವಾರ್‌’ ವಿಷಯ ಚರ್ಚೆಯಾಗತೊಡಗಿತ್ತು. ಈ ಕುರಿತು ಮಾಧ್ಯಮಗಳಿಗೆ ಪ್ರತಿಕ್ರಿಯೆ ನೀಡಿದ ನಟ ವಿಜಯ್‌, ‘ಸುದೀಪ್‌ ಅವರೇ ಟ್ವೀಟ್‌ ಮಾಡಿ ‘ಸಲಗ’ ಸಿನಿಮಾಗೆ ಶುಭಕೋರಿದ್ದಾರೆ. ಸ್ಟಾರ್‌ವಾರ್‌ ಮಾಡುವುದೇ ಬೇಡ. ಇಬ್ಬರೂ ಜವಾಬ್ದಾರಿಯಿಂದ ಸಿನಿಮಾ ಮಾಡಿರುತ್ತೇವೆ. ಜನರಿಗೆ ಸಂದೇಶ, ಮನರಂಜನೆ ನೀಡುವ ಉದ್ದೇಶದಿಂದ, ಬೇರೆ ಬೇರೆ ವಿಷಯದ ಸಿನಿಮಾ ಮಾಡಿದ್ದೇವೆ. ಯಾವ ಸ್ಟಾರ್ಸ್‌ಗೂ ವಾರ್‌ ಇಲ್ಲ, ವಾರ್‌ ಆಗುವುದೂ ಬೇಡ. ನಟರಿಗಾಗಲಿ ಅಥವಾ ನಿರ್ಮಾಪಕರಿಗಾಗಲಿ ಯಾರಿಗೂ ಒಬ್ಬರ ಮೇಲೆ ಒಬ್ಬರಿಗೆ ವೈಮನಸ್ಸು ಇಲ್ಲ. ಅಂದು ಸಿನಿಮಾ ಹಬ್ಬ ಎಂದು ನಾನಂದುಕೊಂಡಿದ್ದೇನೆ. ಯಾವುದೇ ಫ್ಯಾನ್‌ವಾರ್‌ ಬೇಡ’ ಎಂದು ಅಭಿಮಾನಿಗಳಿಗೂ ಕಿವಿಮಾತು ಹೇಳಿದ್ದಾರೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.