ADVERTISEMENT

ಮೈಸೂರಿನ ವ್ಯಕ್ತಿಗಳ ಕಥೆ ಹೇಳುವ ‘ಕ್ಲಾಸ್ ಆಫ್ ಮೈಸೂರು’

​ಪ್ರಜಾವಾಣಿ ವಾರ್ತೆ
Published 12 ಡಿಸೆಂಬರ್ 2025, 23:01 IST
Last Updated 12 ಡಿಸೆಂಬರ್ 2025, 23:01 IST
ಚಿತ್ರತಂಡ
ಚಿತ್ರತಂಡ   

ಸಾಂಸ್ಕೃತಿಕ ನಗರಿ ಮೈಸೂರಿನ ವ್ಯಕ್ತಿಗಳ ಕಥೆಯನ್ನು ಹೇಳುವ ‘ಕ್ಲಾಸ್ ಆಫ್ ಮೈಸೂರು’ ಚಿತ್ರ ಇತ್ತೀಚೆಗಷ್ಟೇ ಸೆಟ್ಟೇರಿದೆ. ಸಿನಿಮಾದಲ್ಲಿ ಅಭಿನಯಿಸುತ್ತಿರುವ ನಟ ದತ್ತಣ್ಣ ಮೊದಲ ದೃಶ್ಯಕ್ಕೆ ಕ್ಲಾಪ್ ಮಾಡಿದರೆ, ನಟಿ ತಾರಾ ಶೀರ್ಷಿಕೆ ಅನಾವರಣಗೊಳಿಸಿದರು. ಎಲ್ಲಾ ಕಲಾವಿದರುಗಳು ರೇಷ್ಮೆ ಪಂಚೆ, ಮೈಸೂರು ಪೇಟದೊಂದಿಗೆ ಆಗಮಿಸಿದ್ದು, ವೇದಿಕೆ ಮೇಲೆ ಮೈಸೂರು ಅರಮನೆ, ಅಂಬಾರಿ ಸೆಟ್ ಸಿದ್ದಗೊಳಿಸಿದ್ದು ವಿಶೇಷವಾಗಿತ್ತು.

ಗೌತಮ್‌ ಬಸವರಾಜು ಸಿನಿಮಾಕ್ಕೆ ಕಥೆ, ಚಿತ್ರಕಥೆ ಬರೆದು ಆ್ಯಕ್ಷನ್ ಕಟ್ ಹೇಳುತ್ತಿದ್ದಾರೆ. ಅವರು ಈ ಹಿಂದೆ ‘ಯಥಾಭವ’ ಎಂಬ ಚಿತ್ರವನ್ನು ನಿರ್ಮಿಸಿ, ನಿರ್ದೇಶಿಸಿದ್ದರು. ‘ಇಲ್ಲಿನ ಅರಮನೆ, ಅಂಬಾರಿ ಸಿನಿಮಾದ ಕಥೆಯನ್ನು ಹೇಳುತ್ತಿದೆ. ನಿವೃತ್ತಿ ಬದುಕಲ್ಲಿ ನಾವು ಏನನ್ನು ಕಳೆದುಕೊಂಡಿರುತ್ತೇವೋ, ಅದನ್ನು ಅನುಭವಿಸಿದರೆ ಹೆಂಗಿರುತ್ತದೆ ಎಂಬುದನ್ನು ತೋರಿಸುತ್ತಿದ್ದೇವೆ. ಮಿಕ್ಕಿದ್ದನ್ನು ಈಗಲೇ ಹೇಳಿದರೆ ಚಿತ್ರದ ಸಾರಾಂಶವನ್ನು ಬಿಟ್ಟುಕೊಟ್ಟಂತೆ ಆಗುತ್ತದೆ. ಬಹುತೇಕ ಪಾತ್ರಗಳು ಅಂತಿಮವಾಗಿದ್ದು, ಇಬ್ಬರು ನಾಯಕಿಯರ ಹುಡುಕಾಟ ನಡೆದಿದೆ. ಗೋವಾ, ಮಂಗಳೂರು, ಕೊಡಗು, ಬೆಂಗಳೂರು ಸುತ್ತಮುತ್ತ ಎರಡು ಹಂತಗಳಲ್ಲಿ 40 ದಿನಗಳ ಕಾಲ ಚಿತ್ರೀಕರಣ ನಡೆಸುವ ಯೋಜನೆಯಿದೆ. ಫೆಬ್ರುವರಿ 2ರಿಂದ ಚಿತ್ರೀಕರಣ ಪ್ರಾರಂಭವಾಗಲಿದೆ’ ಎಂದರು ನಿರ್ದೇಶಕ. 

ದತ್ತಣ್ಣ, ತಾರಾ ಅನುರಾಧ, ರಂಗಾಯಣ ರಘು, ತಬಲ ನಾಣಿ, ವೈಜನಾಥ ಬಿರಾದಾರ್, ಶರತ್ ಲೋಹಿತಾಶ್ವ ಮುಂತಾದವರು ಪ್ರಮುಖ ಪಾತ್ರಗಳಲ್ಲಿದ್ದಾರೆ. ಮಾಕ್ಟ್ ಎಂಟರ್‌ಟೈನ್‌ಮೆಂಟ್ಸ್ ಬ್ಯಾನರ್ ಅಡಿಯಲ್ಲಿ ನಿರ್ದೇಶಕರೇ ಬಂಡವಾಳ ಹೂಡುತ್ತಿದ್ದಾರೆ.

ADVERTISEMENT

‘ಒಂದೊಂದು ಪಾತ್ರಕ್ಕೂ ಅದರದ್ದೇ ಆದ ಹಿಂದಿನ ಕಥೆ ಇದೆ. ಪ್ರಸ್ತುತ ಬರುತ್ತಿರುವ ಸಿನಿಮಾಗಳನ್ನು ಹೊರತುಪಡಿಸಿ, ಬೇರೆ ಆಯಾಮದ ವಿಷಯವನ್ನು ಈ ತಂಡ ಆಯ್ದುಕೊಂಡಿದೆ. ಮಕ್ಕಳ ಬದುಕಿಗೆ ಅರ್ಥ ಕೊಡುವುದು ತಾಯಿ. ಆ ಪಾತ್ರದಲ್ಲಿ ಅಭಿನಯಿಸಲು ಅವಕಾಶ ಸಿಕ್ಕಿದೆ. ಮೈಸೂರನ್ನು ಸಾಂಕೇತಿಕವಾಗಿ ತೆಗೆದುಕೊಂಡು, ಸಿನಿಮಾ ರೂಪದಲ್ಲಿ ತೋರಿಸಲಾಗುತ್ತಿದೆ’ ಎಂದರು ತಾರಾ.

ನಾಗಾರ್ಜುನ ಶರ್ಮ ಸಾಹಿತ್ಯದ ನಾಲ್ಕು ಹಾಡುಗಳಿಗೆ ಜೋ ಕೋಸ್ಟ ಸಂಗೀತ ಸಂಯೋಜಿಸುತ್ತಿದ್ದಾರೆ. ಎಸ್.ಕೆ.ರಾವ್‌ ಛಾಯಾಚಿತ್ರಗ್ರಹಣ, ಮಾಸ್ತಿ ಸಂಭಾಷಣೆ ಚಿತ್ರಕ್ಕಿದೆ. 

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.