ADVERTISEMENT

ಚಿತ್ರರಂಗಕ್ಕೆ ಸೌಲಭ್ಯ ಒದಗಿಸಲು ಬದ್ಧ : ದಿನೇಶ್ ಗುಂಡೂರಾವ್

​ಪ್ರಜಾವಾಣಿ ವಾರ್ತೆ
Published 9 ಜೂನ್ 2024, 15:30 IST
Last Updated 9 ಜೂನ್ 2024, 15:30 IST
ದಿನೇಶ್ ಗುಂಡೂರಾವ್
ದಿನೇಶ್ ಗುಂಡೂರಾವ್   

ಬೆಂಗಳೂರು: ಸರ್ಕಾರ ಯಾವಾಗಲೂ ಚಿತ್ರರಂಗದ ಜೊತೆಗಿದೆ. ಚಲನಚಿತ್ರರಂಗಕ್ಕೆ ಸರ್ಕಾರದಿಂದ ಸಿಗಬಹುದಾದ ಸೌಲಭ್ಯ ಒದಗಿಸಲು ಬದ್ಧ ಎಂದು ಆರೋಗ್ಯ ಸಚಿವ ದಿನೇಶ್ ಗುಂಡೂರಾವ್ ಹೇಳಿದರು.

ಕರ್ನಾಟಕ ಚಲನಚಿತ್ರ ವಾಣಿಜ್ಯ ಮಂಡಳಿ ಭಾನುವಾರ ಕೆಎಫ್‌ಸಿಸಿ ಆವರಣದಲ್ಲಿ ಚಿತ್ರರಂಗದವರಿಗಾಗಿ ಆಯೋಜಿಸಿದ್ದ ಆರೋಗ್ಯ ಉಚಿತ ತಪಾಸಣಾ ಶಿಬಿರವನ್ನು ಉದ್ಘಾಟಿಸಿ ಅವರು ಮಾತನಾಡಿದರು. 

‘ಬದಲಾದ ಜೀವನಶೈಲಿ, ಆಹಾರ ಅಸಮತೋಲನದಿಂದ ಅತಿ ಚಿಕ್ಕವಯಸ್ಸಿನಲ್ಲೆ ರಕ್ತದೊತ್ತಡ, ಮಧುಮೇಹ ಬರುತ್ತಿದೆ. ಮಾಲಿನ್ಯದಿಂದಾಗಿ ಗಂಭೀರ ಆರೋಗ್ಯ ಸಮಸ್ಯೆಗಳು ತಲೆದೋರುತ್ತಿವೆ. ಇದರ ಬಗ್ಗೆ ಜಾಗೃತಿ ಅಗತ್ಯ. ಹೀಗಾಗಿ, ಪ್ರತಿ ವರ್ಷ ಇಂತಹ ಆರೋಗ್ಯ ಶಿಬಿರ ಆಯೋಜಿಸುವುದು ಅತ್ಯಗತ್ಯ’ ಎಂದು ಅವರು ತಿಳಿಸಿದರು.

ADVERTISEMENT

ಸಾರಿಗೆ ಸಚಿವ ರಾಮಲಿಂಗಾರೆಡ್ಡಿ ಮಾತನಾಡಿ, ‘ಚಿತ್ರರಂಗದ ಯಾವುದೇ ಸಮಸ್ಯೆಗಳಿದ್ದರೂ ನಮ್ಮ ಬಳಿ ತೆಗೆದುಕೊಂಡು ಬನ್ನಿ. ಮುಖ್ಯಮಂತ್ರಿಯವರ ಜೊತೆ ಮಾತನಾಡಿ ಪ‍ರಿಹಾರ ಒದಗಿಸುತ್ತೇವೆ. ಸರ್ಕಾರ ಸದಾ ಚಿತ್ರರಂಗದ ಪರವಾಗಿದೆ’ ಎಂದರು.

ಚಿತ್ರರಂಗದಲ್ಲಿ ಸೇವೆ ಸಲ್ಲಿಸುವ ಕುಟುಂಬಗಳ ಆರೋಗ್ಯ ಸಂರಕ್ಷಣೆಗಾಗಿ ಕರ್ನಾಟಕ ಚಲನಚಿತ್ರ ವಾಣಿಜ್ಯ ಮಂಡಳಿ ಹಾಗೂ ಖಾಸಗಿ ಆಸ್ಪತ್ರೆಗಳ ಸಹಯೋಗದೊಂದಿಗೆ ಬೃಹತ್ ಆರೋಗ್ಯ ಶಿಬಿರ ಆಯೋಜಿಸಲಾಗಿತ್ತು. ನಟಿಯರಾದ ಪೂಜಾಗಾಂಧಿ, ರಾಗಿಣಿ ದ್ವಿವೇದಿ, ನೇಹಾ ಸಕ್ಸೇನಾ ಅತಿಥಿಗಳಾಗಿದ್ದರು.

ಚಲನಚಿತ್ರರಂಗದ ನಟ, ನಟಿಯರು, ತಂತ್ರಜ್ಞರ ಕುಟುಂಬದ ಸದಸ್ಯರು ಸರತಿ ಸಾಲಿನಲ್ಲಿ ನಿಂತು ಆರೋಗ್ಯ ತಪಾಸಣೆ ಮಾಡಿಸಿಕೊಂಡರು. ಸ್ವಯಂಪ್ರೇರಿತ ರಕ್ತದಾನ ಶಿಬಿರ, ನೇತ್ರದಾನ ನೋಂದಣಿ ಮಾಡಲಾಯಿತು.

ಚಲನಚಿತ್ರ ವಾಣಿಜ್ಯ ಮಂಡಳಿ ಅಧ್ಯಕ್ಷ ಎನ್.ಎಂ.ಸುರೇಶ್, ಉಪಾಧ್ಯಕ್ಷರಾದ ಪ್ರಮೀಳಾ ಜೋಷಾಯ್, ವೆಂಕಟೇಶ್, ಎಂ.ನರಸಿಂಹಲು, ಗೌರವ ಕಾರ್ಯದರ್ಶಿಗಳಾದ ಭಾ.ಮ.ಗಿರೀಶ್, ಕರಿಸುಬ್ಬು, ಆರ್.ಸುಂದರರಾಜ್, ಖಜಾಂಚಿ ಜಯಸಿಂಹ ಮುಸುರಿ ಈ ಸಂದರ್ಭದಲ್ಲಿ ಹಾಜರಿದ್ದರು. 

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.