ADVERTISEMENT

70 ಚಿತ್ರಗಳಿಗೆ ಕೊರೊನಾ ಏಟು

​ಪ್ರಜಾವಾಣಿ ವಾರ್ತೆ
Published 2 ಏಪ್ರಿಲ್ 2020, 20:00 IST
Last Updated 2 ಏಪ್ರಿಲ್ 2020, 20:00 IST
ಪುನೀತ್ ರಾಜ್ ಕುಮಾರ್ , ದರ್ಶನ್
ಪುನೀತ್ ರಾಜ್ ಕುಮಾರ್ , ದರ್ಶನ್   

ಕೊರೊನಾಮಹಾಮಾರಿಯ ಹೊಡೆತಕ್ಕೆ ಕನ್ನಡದ ಆರು ಬಿಗ್‌ ಬಜೆಟ್‌ ಚಿತ್ರಗಳು ಸೇರಿದಂತೆ ಸುಮಾರು 60ರಿಂದ70ಚಲನಚಿತ್ರಗಳಿಗೆ ಹೊಡೆತ ಬಿದ್ದಿದೆ. ಏಪ್ರಿಲ್‌, ಮೇ ತಿಂಗಳಲ್ಲಿ ಬಿಡುಗಡೆಯ ನಿರೀಕ್ಷೆಯಲ್ಲಿದ್ದ ಸ್ಟ್ಯಾಂಡಲ್‌ವುಡ್‌ ಸ್ಟಾರ್‌ಗಳ ದೊಡ್ಡ ಚಿತ್ರಗಳು ಈಗ ಅಡಕತ್ತರಿಗೆ ಸಿಕ್ಕಿವೆ.

ದರ್ಶನ್‌ ನಟನೆಯ ‘ರಾಬರ್ಟ್’, ದುನಿಯಾ ವಿಜಯ್‌ ನಿರ್ದೇಶನ ಮತ್ತು ನಟನೆಯ ‘ಸಲಗ’, ಪುನೀತ್‌ ರಾಜ್‌ಕುಮಾರ್‌ ನಟನೆಯ ‘ಯುವರತ್ನ’, ಸುದೀಪ್‌ ನಟನೆಯ ‘ಕೋಟಿಗೊಬ್ಬ 3’, ಧ್ರುವ ಸರ್ಜಾ ನಟನೆಯ ‘ಪೊಗರು’ ಏಪ್ರಿಲ್‌ ಮತ್ತು ಮೇ ತಿಂಗಳಲ್ಲಿ ಬಹುತೇಕ ಬಿಡುಗಡೆಯಾಗುವ ಹಂತದಲ್ಲಿದ್ದವು.ಹಾಗೆಯೇ ಯಶ್‌ ಅಭಿನಯದ ಪ್ಯಾನ್‌ ಇಂಡಿಯಾ ಸಿನಿಮಾ ‘ಕೆಜಿಎಫ್‌ ಚಾಪ್ಟರ್‌ 2’ ಜೂನ್‌ ನಂತರ ತೆರೆಗೆ ಬರುವ ನಿರೀಕ್ಷೆ ಮೂಡಿಸಿತ್ತು. ಕನ್ನಡದಲ್ಲಿ ಸ್ಟಾರ್‌ವಾರ್‌ ನಡೆಯಲಿದೆ ಎನ್ನುವ ಮಾತುಗಳು ಚರ್ಚೆಯಲ್ಲಿದ್ದವು.

‘ನಾವೆಲ್ಲರೂ ನಿರ್ಮಾಪಕರು ಒಗ್ಗಟ್ಟಿನಲ್ಲಿದ್ದೇವೆ. ನಾವ್ಯಾರು ಚಿತ್ರ ಬಿಡುಗಡೆಗೆ ಪೈಪೋಟಿ ಮತ್ತು ಸಂಘರ್ಷ ಮಾಡಿಕೊಳ್ಳುವುದಿಲ್ಲ. ನಾವೆಲ್ಲರೂ ಚರ್ಚೆ ಮಾಡಿ ಬಿಡುಗಡೆಯ ದಿನಾಂಕ ನಿರ್ಧರಿಸುತ್ತೇವೆ’ ಎಂದು ಕೋಟಿಗೊಬ್ಬ 3 ಚಿತ್ರದ ನಿರ್ಮಾಪಕ ಸೂರಪ್ಪ ಬಾಬು ಅವರುಕೊರೊನಾಮಾರಿ ಆವರಿಸಿಕೊಳ್ಳುವುದಕ್ಕೂ ಮೊದಲು ಹೇಳಿದ್ದರು.

ADVERTISEMENT

ಈಗ ಲಾಕ್‌ ಡೌನ್‌ ಮುಗಿದ ನಂತರವೂ ದೊಡ್ಡ ಚಿತ್ರಗಳನ್ನು ಬಿಡುಗಡೆ ಮಾಡಲು ನಿರ್ಮಾಪಕರಿಗೆ ಧೈರ್ಯವಿಲ್ಲದಂತಾಗಿದೆ. ‘ಕೊರೊನಾತುರ್ತುಪರಿಸ್ಥಿತಿ’ ಮುಗಿದ ಮೇಲೂ ಚಿತ್ರರಂಗಕ್ಕೆ ಆಶಾದಾಯಕ ಬೆಳವಣಿಗೆಯನ್ನು ನಿರೀಕ್ಷೆ ಮಾಡುವಂತಿಲ್ಲ. ಸೋಂಕು ಹರಡುವ ಆತಂಕದಲ್ಲಿ ಬಹುತೇಕ ಜನರು ಸಾಮಾಜಿಕ ಅಂತರ ಕಾಯ್ದುಕೊಳ್ಳುವುದಕ್ಕೆ ಒತ್ತುನೀಡುತ್ತಿದ್ದು,ಜನರು ಗುಂಪುಗೂಡುವಂತಹ ಜಾಗಗಳಾದ ಚಿತ್ರಮಂದಿರಗಳು, ಮಾಲ್‌ನಂತಹ ಮಲ್ಟಿಫ್ಲೆಕ್ಸ್‌ಗಳಿಗೆ ತಕ್ಷಣಕ್ಕೆ ಭಯ ತೊರೆದು ಬರುತ್ತಾರೆ ಎನ್ನುವ ನಂಬಿಕೆ ಕಾಣಿಸುತ್ತಿಲ್ಲ ಎನ್ನುವುದು ಕೆಲವು ನಿರ್ಮಾಪಕರ ಆತಂಕದ ನುಡಿ.

‘ದೆಹಲಿ ಸೇರಿದಂತೆ ದೇಶದ ಕೆಲವು ಕಡೆ ಬುಧವಾರ ಸೋಂಕಿತರ ಸಂಖ್ಯೆ ಹೆಚ್ಚಾಗಿರುವ ಪ್ರಕರಣಗಳನ್ನು ಗಮನಿಸಿದರೆ, ಈಗಿನ ಪರಿಸ್ಥಿತಿ ಸದ್ಯಕ್ಕೆ ಸರಿಹೋಗುತ್ತದೆ ಎನ್ನುವ ನಂಬಿಕೆ ಕಾಣಿಸುತ್ತಿಲ್ಲ. ಪರಿಸ್ಥಿತಿ ಸಂಪೂರ್ಣ ನಿಯಂತ್ರಣಕ್ಕೆ ಬರುವುದುಜೂನ್‌ ಅಥವಾ ಇನ್ನೂ ಮುಂದೆ ಹೋಗುತ್ತೇನೆ ಎನ್ನುವ ಅಳಕು ಇದೆ. ಹಾಗಾಗಿ ನಾವು ಸಿನಿಮಾ ಬಿಡುಗಡೆಗೆ ಯಾವುದೇ ಅವಸರ ಮಾಡುವುದಿಲ್ಲ. ಪರಿಸ್ಥಿತಿ ಸಂಪೂರ್ಣ ತಿಳಿಯಾದ ನಂತರವೇ ಚಿತ್ರ ಬಿಡುಗಡೆ ಮಾಡುತ್ತೇವೆ. ಇದು ಎಲ್ಲರಿಗೂ ಅನಿಶ್ಚಿತ ಮತ್ತು ಸಂಕಷ್ಟ ಕಾಲ. ಹಾಗಾಗಿ ನಾವು ಸದ್ಯಕ್ಕೆ ಚಿತ್ರ ಬಿಡುಗಡೆ ದಿನಾಂಕ ನಿಗದಿಪಡಿಸುವ ಸ್ಥಿತಿಯಲ್ಲಿ ಇಲ್ಲ ಎನ್ನುತ್ತಾರೆ’ ಸಲಗ ಚಿತ್ರದ ನಿರ್ಮಾಪಕ ಕೆ.ಪಿ. ಶ್ರೀಕಾಂತ್‌.

'ರಾಮನವಮಿಗೆ ಸಿನಿಮಾ ಬಿಡುಗಡೆ ಮಾಡುವ ತಯಾರಿಯಲ್ಲಿದ್ದೆವು. ಈಗ ಪರಿಸ್ಥಿತಿ ನಮ್ಮ ಕೈಯಲ್ಲಿಲ್ಲ. ಲಾಕ್‌ಡೌನ್‌ ಆಗಿ ಮನೆಯಲ್ಲಿ ಕುಳಿತಿರುವ ಜನರಿಗೆ ಒಂದಿಷ್ಟು ಖುಷಿ ನೀಡಲು ಚಿತ್ರದ ‘ಜೈ ಶ್ರೀರಾಮ್‌’ ಹಾಡಿನ ಹೊಸ ವರ್ಷನ್‌ ಹಾಡನ್ನು ಯೂಟ್ಯೂಬ್‌ನಲ್ಲಿ ಬಿಡುಗಡೆ ಮಾಡಿದ್ದೇವೆ. ಸಿನಿಮಾ ಬಿಡುಗಡೆ ದಿನಾಂಕದ ಬಗ್ಗೆ ಸದ್ಯಕ್ಕೆ ನಿರ್ಧರಿಸುವ ಸ್ಥಿತಿಯಲ್ಲಿಲ್ಲ. ಆದಷ್ಟು ಬೇಗ ಪರಿಸ್ಥಿತಿ ತಿಳಿಯಾಗಲಿದೆ ಎನ್ನುವ ಆಶಾಭಾವನೆ ನಮ್ಮದು. ಯಾವುದೇ ಅವಸರವಿಲ್ಲದೆ, ಬಿಡುಗಡೆ ಅನಿವಾರ್ಯ ಎನಿಸಿದಾಗ ದಿನಾಂಕ ಪ್ರಕಟಿಸುತ್ತೇವೆ’ ಎನ್ನುತ್ತಾರೆ ‘ರಾಬರ್ಟ್‌’ ಚಿತ್ರದ ನಿರ್ಮಾಪಕ ಉಮಾಪತಿ.

ಮೇ 21ರಂದು ‘ಯುವರತ್ನ’ ಬಿಡುಗಡೆಯಾಗಲಿದೆ ಎನ್ನುವ ಸುದ್ದಿ ಅಲ್ಲಗಳೆದಿರುವ ನಿರ್ದೇಶಕ ಆನಂದರಾಮ್‌, ‘ಚಿತ್ರದ ಇನ್ನು ಎರಡು ಹಾಡುಗಳ ಚಿತ್ರೀಕರಣ ಬಾಕಿ ಇದೆ. ಸಿನಿಮಾ ಬಿಡುಗಡೆಗೆ ಅವಸರಿಸುವುದಿಲ್ಲ. ಮೊದಲು ಕವಿದಿರುವ ಅನಿಶ್ಚಿತ ಪರಿಸ್ಥಿತಿ ತಿಳಿಯಾಗಲಿ. ಅದು ಅಲ್ಲದೆ, ಚಿತ್ರದ ಬಿಡುಗಡೆ ದಿನಾಂಕವನ್ನು ಹೊಂಬಾಳೆ ಪ್ರೊಡಕ್ಷನ್‌ ನಿರ್ಧರಿಸಲಿದೆ’ ಎಂದಿದ್ದಾರೆ.

ದೊಡ್ಡ ಬಜೆಟ್‌ ಚಿತ್ರಗಳು ಮೊದಲು ತೆರೆಗೆ ಬಂದು ಹೋಗಲಿ ಎಂದು ಕಾಯುತ್ತಿದ್ದ ಸಣ್ಣ ಬಜೆಟ್‌ ಚಿತ್ರಗಳ ನಿರ್ಮಾಪಕರು ಕೂಡ ಈಗ ಅಡಕತ್ತರಿಗೆ ಸಿಕ್ಕಿದ್ದು, ಪರಿಸ್ಥಿತಿ ಒಂದೆರಡು ತಿಂಗಳಲ್ಲಿ ಸರಿಯಾದರೂ ಸುಮಾರು 60 ಚಿತ್ರಗಳು ಬಿಡುಗಡೆಗೆ ಬಾಕಿ ಉಳಿಯುತ್ತವೆ ಎನ್ನುವ ಆತಂಕ ತೋಡಿಕೊಂಡಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.