ADVERTISEMENT

‘ಮುಗಿಲ್‌ಪೇಟೆ’ಗೂ ಕೊರೊನಾ ಮುಸುಕು

​ಪ್ರಜಾವಾಣಿ ವಾರ್ತೆ
Published 12 ಏಪ್ರಿಲ್ 2020, 19:45 IST
Last Updated 12 ಏಪ್ರಿಲ್ 2020, 19:45 IST
ಮುಗಿಲುಪೇಟೆಗೆ ಕೊರೊನಾ ಮುಸುಕು
ಮುಗಿಲುಪೇಟೆಗೆ ಕೊರೊನಾ ಮುಸುಕು   

ರವಿಚಂದ್ರನ್‌ ಪುತ್ರ ಮನುರಂಜನ್‌ ಮತ್ತು ಅಸ್ಸಾಂ ಬೆಡಗಿ ಲೋಹರ್‌ ಕಯಾದು ನಟನೆಯ ‘ಮುಗಿಲ್‌ಪೇಟೆ’ಗೂ ಕೊರೊನಾ ಮಾರಿಯ ಮುಸುಕು ಆವರಿಸಿದೆ.ಮೇ ತಿಂಗಳ ಕೊನೆಯಲ್ಲಿ ಚಿತ್ರ ಬಿಡುಗಡೆ ಮಾಡಿ, ಯುವ ಮನಸುಗಳಿಗೆ ಲಗ್ಗೆ ಇಡುವುದು ಚಿತ್ರತಂಡದ ಯೋಜನೆಯಾಗಿತ್ತು. ಕೊರೊನಾ ಕಾರಣಕ್ಕೆ ಚಿತ್ರ ಶೂಟಿಂಗ್‌ ಅರ್ಧಕ್ಕೆ ನಿಂತಿದೆ ಎನ್ನುವುದನ್ನು ಪ್ರತ್ಯೇಕವಾಗಿ ಬಿಡಿಸಿ ಹೇಳಬೇಕಾಗಿಲ್ಲ.

ಕ್ಯೂಟ್‌ ಲವ್‌ ಸ್ಟೋರಿ ಇರುವ ಈ ಚಿತ್ರಕ್ಕೆ ಆ್ಯಕ್ಷನ್‌ ಕಟ್ ಹೇಳುತ್ತಿರುವುದು‘ಅಡಚಣೆಗಾಗಿ ಕ್ಷಮಿಸಿ’ ಚಿತ್ರದ ನಿರ್ದೇಶಕಭರತ್‌ ಎಸ್‌.ನಾವುಂದ.

‘ನಮ್ಮ ಲೆಕ್ಕಾಚಾರಗಳೆಲ್ಲ ಉಲ್ಟಾಪಲ್ಟಾ ಆಗಿಬಿಟ್ಟಿವೆ’ ಎನ್ನುತ್ತಲೇ ‘ಪ್ರಜಾಪ್ಲಸ್‌’ ಜತೆಗೆ ಮಾತಿಗಿಳಿದ ಭರತ್‌, ಸಕಲೇಶಪುರ, ಚಿಕ್ಕಮಗಳೂರು, ಸಾಗರ, ತೀರ್ಥಹಳ್ಳಿ, ಕುಂದಾಪುರ ಹಾಗೂ ಕಾಸರಗೋಡು ‌ಭಾಗದಲ್ಲಿ ಚಿತ್ರೀಕರಣ ನಡೆಸಲಾಗಿತ್ತು. ಇನ್ನು ಬೆಂಗಳೂರಿನಲ್ಲಿ ಮೋಹನ್‌ ಬಿ.ಕೆರೆ ಮತ್ತು ಕಂಠೀರವ ಸ್ಟುಡಿಯೊದಲ್ಲಿ ನಡೆಸಬೇಕಿದ್ದ ಸೆಟ್‌ ಚಿತ್ರೀಕರಣ ಕೈಗೆತ್ತಿಕೊಳ್ಳುವಷ್ಟರಲ್ಲಿ ಕೊರೊನಾ ವಕ್ಕರಿಸಿತು. ಮುರಳಿ ಮಾಸ್ಟರ್‌ ನೃತ್ಯ ಸಂಯೋಜನೆಯ ಎರಡು ಹಾಡುಗಳು ಮತ್ತು ಮೂರು ಫೈಟ್‌ಗಳ ಚಿತ್ರೀಕರಣವೂ ಬಾಕಿ ಉಳಿಯಿತು. ಟಾಕಿ ಭಾಗ ಬಹುತೇಕ ಪೂರ್ಣಗೊಂಡಿದ್ದು, ಎಡಿಟಿಂಗ್‌ ಕೂಡ ಆಗಿತ್ತು ಎಂದು ಮಾತು ವಿಸ್ತರಿಸಿದರು.

ADVERTISEMENT

‘ಚಿತ್ರ ಬಿಡುಗಡೆ ಮುಂದಕ್ಕೆ ಹಾಕುವುದು ಅನಿವಾರ್ಯವಾಗಿದೆ. ಪರಿಸ್ಥಿತಿ ಯಾವಾಗ ತಿಳಿಯಾಗುತ್ತದೆ ಎನ್ನುವುದು ಗೊತ್ತಾಗುತ್ತಿಲ್ಲ.ಲಾಕ್‌ಡೌನ್‌ ತೆರವಾಗುವುದನ್ನು ಎದುರು ನೋಡುತ್ತಿದ್ದೇವೆ’ ಎನ್ನುವ ಮಾತು ಸೇರಿಸಿದರು ಭರತ್‌.

‘ಮುಗಿಲ್‌ಪೇಟೆ’ಯಲ್ಲಿ ಪ್ರೀತಿ, ಭಾವುಕತೆ, ಆ್ಯಕ್ಷನ್‌, ಕಾಮಿಡಿಯ ಹದಬೆರತ ಪಾಕವಿದೆ. ಭೂತಕಾಲ ಮತ್ತು ವರ್ತಮಾನದ ಎರಡು ಕಥೆಗಳು ತೆರೆಯ ಮೇಲೆ ಒಂದೇ ರೇಖೆಯಲ್ಲಿ ಸಾಗಲಿವೆ. ಮನುರಂಜನ್‌ಗೆ ಇದು ನಾಲ್ಕನೇ ಚಿತ್ರ. ಮೊದಲ ಬಾರಿಗೆ ಕಮರ್ಷಿಯಲ್ ಚಿತ್ರದಲ್ಲಿ ನಟಿಸುತ್ತಿದ್ದು,ಇದರಲ್ಲಿ ಅವರದು ಮಾಸ್ ಹಾಗೂ ಕ್ಲಾಸ್ ಹೀರೊ ಪಾತ್ರ.ಎರಡು ಛಾಯೆಯಲ್ಲಿ ಕಾಣಿಸಿಕೊಳ್ಳಲಿದ್ದಾರೆ. ಬಬ್ಲಿ ಹಾಗೂ ಮುಗ್ಧ ಯುವತಿಯ ಪಾತ್ರದಲ್ಲಿಕಯಾದು ಲೋಹರ್ ನಿಭಾಯಿಸಿದ್ದಾರೆ.

ಈ ಚಿತ್ರಕ್ಕೆಮೋತಿ ಮೂವಿ ಮೇಕರ್ಸ್‌ನಡಿ ರಕ್ಷಾ ವಿಜಯ್‌ಕುಮಾರ್ ಹಾಗೂ ಮೋತಿ ಮಹೇಶ್ ಬಂಡವಾಳ ಹೂಡಿದ್ದಾರೆ. ರಂಗಾಯಣ ರಘು, ಅವಿನಾಶ್, ತಾರಾ, ಸಾಧುಕೋಕಿಲ ತಾರಾಗಣದಲ್ಲಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.