ADVERTISEMENT

ಕೋವಿಡ್‌–19 ಭೀತಿ: ಸಿನಿಮಾ ಉದ್ಯಮದ ನಷ್ಟದ ಅಂದಾಜು ಎಷ್ಟು?

ಚಿತ್ರಮಂದಿರಗಳು ಹಾಗೂ ಮಲ್ಟಿಪ್ಲೆಕ್ಸ್‌ಗಳು ಬಂದ್‌

​ಪ್ರಜಾವಾಣಿ ವಾರ್ತೆ
Published 14 ಮಾರ್ಚ್ 2020, 11:03 IST
Last Updated 14 ಮಾರ್ಚ್ 2020, 11:03 IST
   

ಬೆಂಗಳೂರು:ಕೋವಿಡ್‌ ಸೋಂಕು ಹರಡುವ ಭೀತಿಯ ಕಾರಣಕ್ಕೆ ದೇಶದ ಹಲವು ರಾಜ್ಯಗಳಲ್ಲಿ ಚಿತ್ರಮಂದಿರಗಳು ಹಾಗೂ ಮಲ್ಟಿಪ್ಲೆಕ್ಸ್‌ಗಳು ಮುಚ್ಚಿರುವುದರ ಪರಿಣಾಮವಾಗಿ ಸಿನಿಮಾ ಮತ್ತು ಟಿ.ವಿ. ಮನರಂಜನಾ ಉದ್ಯಮ ನಷ್ಟ ಅನುಭವಿಸಲಿದೆ ಎಂದು ತಜ್ಞರು ಹೇಳಿದ್ದಾರೆ.

ಕೇರಳ ರಾಜ್ಯದ ಮಾದರಿಯನ್ನು ಅನುಸರಿಸಿದ ಜಮ್ಮು ಮತ್ತು ಕಾಶ್ಮೀರ, ದೆಹಲಿ, ಕರ್ನಾಟಕ ಮತ್ತು ಮಹಾರಾಷ್ಟ್ರ ಸರ್ಕಾರಗಳು ಸಿನಿಮಾ ಮಂದಿರಗಳು ಹಾಗೂ ಮಲ್ಟಿಪ್ಲೆಕ್ಸ್‌ಗಳ ಮೇಲೆ ನಿರ್ಬಂಧ ವಿಧಿಸಿವೆ. ‘ನಷ್ಟ ಎಷ್ಟಾಗಬಹುದು ಎಂಬುದನ್ನು ಅಂದಾಜು ಮಾಡುವುದು ಈ ಹೊತ್ತಿನಲ್ಲಿ ಕಷ್ಟ. ಆದರೆ, ದೆಹಲಿಯ ಚಿತ್ರಮಂದಿರಗಳು ಅಂದಾಜು ₹2 ಲಕ್ಷದಿಂದ ₹10 ಲಕ್ಷದವರೆಗೆ ನಷ್ಟ ಅನುಭವಿಸಬೇಕಾಗಬಹುದು’ ಎಂದು ಸಿನಿಮಾ ವಿತರಕ ಜೋಗಿಂದರ್ ಮಹಾಜನ್ ಹೇಳುತ್ತಾರೆ.

‘ಚಿತ್ರಮಂದಿರಗಳಿಗೆ ಈಗ ಎದುರಾಗಿರುವಂತಹ ಸ್ಥಿತಿ ಹಿಂದೆಂದೂ ಎದುರಾಗಿರಲಿಲ್ಲ. 1984ರ ಗಲಭೆಯ ಸಂದರ್ಭದಲ್ಲಿ ದೆಹಲಿಯಲ್ಲಿ ಚಿತ್ರಮಂದಿರಗಳು ಮೂರ್ನಾಲ್ಕು ದಿನ ಬಾಗಿಲು ಮುಚ್ಚಿದ್ದು ಇದೆ’ ಎಂದು ಅವರು ನೆನಪಿಸಿಕೊಂಡರು.

ADVERTISEMENT

ಉದ್ಯಮದ ಪಂಡಿತರು ಹೇಳುವ ಪ್ರಕಾರ ಬಾಲಿವುಡ್‌ನ ದೊಡ್ಡ ಸಿನಿಮಾಗಳು ಪ್ರಚಾರ ಕಾರ್ಯಕ್ಕೆಂದೇ ₹15 ಕೋಟಿಯಿಂದ ₹20 ಕೋಟಿಯವರೆಗೆ ಖರ್ಚು ಮಾಡುತ್ತವೆ. ಮಧ್ಯಮ ಬಜೆಟ್‌ನ ಸಿನಿಮಾಗಳು ಈ ಕೆಲಸಕ್ಕೆ ₹5 ಕೋಟಿಯಷ್ಟು ಖರ್ಚು ಮಾಡುತ್ತವೆ.

ಅಕ್ಷಯ್ ಕುಮಾರ್ ನಟಿಸಿರುವ ‘ಸೂರ್ಯವಂಶಿ’ ಚಿತ್ರದ ಟ್ರೇಲರ್‌ ಈಚೆಗೆ ಬಿಡುಗಡೆ ಆಗಿದೆ. ಆದರೆ ಈಗ ಸಿನಿತಂಡವು ಚಿತ್ರದ ಬಿಡುಗಡೆಯನ್ನು ಅನಿರ್ದಿಷ್ಟ ಅವಧಿಗೆ ಮುಂದೂಡಿದೆ. ತಿಲೋತ್ತಮ ಶೋಮೆ ಅಭಿನಯದ ‘ಸರ್’ ಚಿತ್ರದ ಬಿಡುಗಡೆ ಮುಂದಕ್ಕೆ ಹೋಗಿದೆ. ಹಾಲಿವುಡ್‌ನ ‘ಅ ಕ್ವೈಟ್‌ ಪ್ಲೇಸ್ 2’ ಹಾಗೂ ‘ದಿ ನ್ಯೂ ಮ್ಯುಟೆಂಟ್ಸ್‌’ ಚಿತ್ರಗಳ ಬಿಡುಗಡೆ ಕೂಡ ಮುಂದಕ್ಕೆ ಹೋಗಿದೆ. ಈಗಾಗಲೇ ತೆರೆಗೆ ಬಂದಿದ್ದ ಚಿತ್ರಗಳ ವೀಕ್ಷಣೆಗೆ ಬರುವವರ ಸಂಖ್ಯೆ ಕಡಿಮೆಯಾಗಿದೆ. ಇದರ ದೊಡ್ಡ ಏಟು ಬಿದ್ದಿರುವುದು ಟೈಗರ್ ಶ್ರಾಫ್ ಅಭಿನಯದ ‘ಬಾಘಿ 3’ ಮೇಲೆ.

‘ಸಿನಿಮಾ ವಹಿವಾಟಿನಲ್ಲಿ ಶೇಕಡ 40ರಷ್ಟರಿಂದ ಶೇ 50ರಷ್ಟು ಕುಸಿತ ಕಂಡುಬರಲಿದೆ. ಅಥವಾ ಅದಕ್ಕಿಂತ ಹೆಚ್ಚಿನ ಕುಸಿತ ಕಾಣಬಹುದು’ ಎಂದು ಮುಂಬೈನ ಸಿನಿಮಾ ವಿತರಕ ರಾಜೇಶ್ ಹೇಳುತ್ತಾರೆ. ಸಿನಿಮಾ ಮಾಲೀಕರು ಮತ್ತು ಪ್ರದರ್ಶಕರ ಸಂಘದ ಅಧ್ಯಕ್ಷ ನಿತಿನ್ ದತ್ತಾರ್ ಹೇಳುವ ಪ್ರಕಾರ ಸಿನಿಮಾ ವೀಕ್ಷಣೆಗೆ ಬರುವ ಜನರ ಸಂಖ್ಯೆ ಭಾರಿ ಪ್ರಮಾಣದಲ್ಲಿ ಕಡಿಮೆ ಆಗಿದೆ.

‘ಸಿನಿಮಾ ಮಂದಿರಗಳನ್ನು ಮುಚ್ಚಬೇಕು ಎಂದು ಸರ್ಕಾರವೇ ಸೂಚಿಸಿರುವ ಈ ರೀತಿಯ ನಿದರ್ಶನ ಇದೇ ಮೊದಲು’ ಎಂದು ನಿತಿನ್ ಹೇಳಿದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.