ADVERTISEMENT

ವೂಟ್‌ ಸೆಲೆಕ್ಟ್‌ನಲ್ಲಿ ‘ಕ್ರ್ಯಾಕ್‌ಡೌನ್‌’ ಪ್ರಸಾರ

​ಪ್ರಜಾವಾಣಿ ವಾರ್ತೆ
Published 23 ಸೆಪ್ಟೆಂಬರ್ 2020, 7:51 IST
Last Updated 23 ಸೆಪ್ಟೆಂಬರ್ 2020, 7:51 IST
ಕ್ರ್ಯಾಕ್‌ಡೌನ್‌
ಕ್ರ್ಯಾಕ್‌ಡೌನ್‌   

ಬಾಲಿವುಡ್‌ ನಿರ್ದೇಶಕ ಅಪೂರ್ವ ಲಖಿಯಾ ನಿರ್ದೇಶನದ ಬಹು ನಿರೀಕ್ಷೆಯ ‘ಕ್ರ್ಯಾಕ್‌ಡೌನ್‌’ ವೆಬ್‌ ಸರಣಿ ಸೆ.23ರಿಂದವೂಟ್‌ ಸೆಲೆಕ್ಟ್‌ ಒಟಿಟಿಯಲ್ಲಿ ಪ್ರಸಾರವಾಗಿದೆ. ಥ್ರಿಲ್ಲರ್‌ ಮತ್ತು ಆ್ಯಕ್ಷನ್‌ ಪ್ರಧಾನವಾದ ಕಥಾವಸ್ತುವಿನೊಂದಿಗೆ ಅಪೂರ್ವ ಅವರು ವೆಬ್‌ ಸರಣಿಗೂ ಕಾಲಿಟ್ಟಿದ್ದಾರೆ.‌ ಇದು ಅವರ ಚೊಚ್ಚಲ ವೆಬ್‌ ಸರಣಿ. ವೂಟ್‌ ಸೆಲೆಕ್ಟ್‌ನಲ್ಲಿ ಪ್ರಸಾರವಾಗಿರುವ ಅಸುರ್‌, ರಾಯ್ಕರ್‌ ಕೇಸ್‌, ದಿ ಗಾನ್‌ ಗೇಮ್‌ನಂತಹ ಸರಣಿಗಳು ಈಗಾಗಲೇ ವಿಮರ್ಶಕರು ಮತ್ತು ವೀಕ್ಷಕರ ಮೆಚ್ಚುಗೆಯನ್ನೂ ಗಿಟ್ಟಿಸಿವೆ. ಮತ್ತೊಂದು ಸಾಹಸ ಪ್ರಧಾನ ಕಥೆಯ ವೆಬ್‌ ಸರಣಿಯನ್ನು ಪ್ರಸಾರಕ್ಕೆ ಆಯ್ಕೆ ಮಾಡಿಕೊಂಡಿರುವ ವೂಟ್‌ ಸೆಲೆಕ್ಟ್‌ ಪ್ರೇಕ್ಷಕರ ಮನಗೆಲ್ಲಲು ಸಜ್ಜಾಗಿದೆ.

ಪ್ರಮುಖ ಪಾತ್ರಗಳಲ್ಲಿ ಸಾಕೀಬ್ ಸಲೀಮ್, ಇಕ್ಬಾಲ್ ಖಾನ್, ಶ್ರಿಯಾ ಪಿಲ್ಗಾಂವ್ಕರ್, ವಾಲುಶ್ಚಾ ಡಿ ಸೌಸಾ, ರಾಜೇಶ್ ತೈಲಾಂಗ್ ಹಾಗೂ ಅಂಕುರ್ ಭಾಟಿಯಾ ನಟಿಸಿರುವ ‘ಕ್ರ್ಯಾಕ್‌ಡೌನ್‌’ ಎಂಟು ಎಪಿಸೋಡ್‌ಗಳಲ್ಲಿ ಪ್ರಸಾರವಾಗಲಿದೆ. ರಾಷ್ಟ್ರೀಯ ಭದ್ರತೆಗೆ ಆತಂಕ ತಂದೊಡ್ಡುವ ಪಿತೂರಿಯೊಂದನ್ನು ಭೇದಿಸಲು ನಡೆಯುವ ರಹಸ್ಯ ಮಿಲಿಟರಿ ಕಾರ್ಯಾಚರಣೆಯ ಸುತ್ತ ಈ ಸರಣಿಯ ಕಥೆ ಸಾಗುತ್ತದೆ.

ಈ ವೆಬ್‌ ಸರಣಿಯ ಫಸ್ಟ್‌ ಲುಕ್‌ ಮತ್ತು ಟ್ರೈಲರ್‌ ಅನ್ನು ಬಾಲಿವುಡ್‌ ಹಿರಿಯ ನಟ ಅಮಿತಾಭ್‌ ಬಚ್ಚನ್‌ ಬಿಡುಗಡೆ ಮಾಡಿದಾಗಲೇ, ಬಾಲಿವುಡ್‌ ಅಂಗಳದಲ್ಲೂಈ ವೆಬ್‌ ಸರಣಿ ಸಾಕಷ್ಟುಕುತೂಹಲ ಹುಟ್ಟುಹಾಕಿತ್ತು. ವೀಕ್ಷಕರು ಬಹು ನಿರೀಕ್ಷೆ ಇಟ್ಟುಕೊಂಡು ಈ ಸರಣಿಯು ಪ್ರಸಾರವಾಗುವುದನ್ನು ಎದುರು ನೋಡುತ್ತಿದ್ದರು.

ADVERTISEMENT

ತಮ್ಮ ಚೊಚ್ಚಲ ವೆಬ್‌ ಸರಣಿ ಬಗ್ಗೆ ಪ್ರತಿಕ್ರಿಯಿಸಿರುವ ಅಪೂರ್ವ ಲಖಿಯಾ, ‘ನಾನು ಯಾವಾಗಲೂ ಆ್ಯಕ್ಷನ್ ಮತ್ತು ಥ್ರಿಲ್ಲರ್ ಕಥೆ ಇಷ್ಟಪಡುತ್ತೇನೆ.ಚಿಂತನ್‌ ಗಾಂಧಿ ಮತ್ತು ಸುರೇಶ್‌ ನಾಯರ್‌ ಬರೆದಿರುವ ಈ ಕಥೆ ಕೇಳಿದಾಗಲೇ ನಾನು ತುಂಬಾ ಖುಷಿಪಟ್ಟಿದ್ದೆ. ಕಥಾಹಂದರವು ಅದ್ಭುತವಾಗಿದ್ದು, ಸಾಹಸ ಪ್ರಧಾನ ಸರಣಿಯನ್ನು ನಿರ್ಮಿಸಲು ಹೇಳಿ ಮಾಡಿಸಿದಂತಿದೆ ಎಂದು ನಿರ್ಣಯಿಸಿದ್ದೆ. ಒಳ್ಳೆಯ ನಟ–ನಟಿಯರು ನಟಿಸಿರುವ ಮತ್ತು ಅದ್ಭುತ ಸ್ಥಳಗಳಲ್ಲಿ ಚಿತ್ರಿಸಿರುವ ದೃಶ್ಯಗಳು ವೀಕ್ಷಕರ ಮನಸೂರೆಗೊಳ್ಳುವ ವಿಶ್ವಾಸವಿದೆ. ಬಾಲಿವುಡ್‌ನಲ್ಲಿ ಇದು ಬ್ಲಾಕ್‌ಬ್ಲಸ್ಟರ್‌ ವೆಬ್‌ ಸರಣಿ ಎನಿಸಿಕೊಳ್ಳುವುದು ನಸ್ಸಂಶಯ’ಎಂದಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.